

ಕಚೇರಿ ಕೆಲಸಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ ಕಾರಣಕ್ಕೆ ಅಮಾನತು, ಬಳಿಕ ಸೇವೆಯಿಂದ ವಜಾ. ನಂತರ ಕ್ರಿಮಿನಲ್ ಮೊಕದ್ದಮೆಯನ್ನೂ ಎದುರಿಸಬೇಕಾಯಿತು. ಹೀಗೆ ಕನ್ನಡದ ಮೇಲಿನ ಅಭಿಮಾನದಿಂದಾಗಿ ಕಳೆದ ನಾಲ್ಕು ದಶಕಗಳಿಂದ ಸಂಕಷ್ಟ ಅನುಭವಿಸುತ್ತಿರುವ ಸರ್ಕಾರಿ ನೌಕರ ದೇಶಹಳ್ಳಿ ರಾಮಚಂದ್ರಾಚಾರಿ(71) ಅವರ ಸೇವಾ ಪ್ರಕರಣಕ್ಕೆ ಇನ್ನೂ ಮುಕ್ತಿ ದೊರೆತಿಲ್ಲ.
ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಹಾಸನ ವಿಭಾಗದಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರಾಚಾರಿ ಅವರು 1984ರಲ್ಲಿ ಕಚೇರಿಯ ಎಲ್ಲ ಹಂತಗಳಲ್ಲೂ ಕನ್ನಡದಲ್ಲಿ ವ್ಯವಹರಿಸುವುದರ ಜತೆಗೆ ಕನ್ನಡ ಅಂಕಿಗಳನ್ನು ಬಳಸುತ್ತಿದ್ದರು. ಇದನ್ನು ಗಮನಿಸಿದ ಮೇಲಧಿಕಾರಿಗಳು ಕನ್ನಡ ಅಂಕಿಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದನ್ನು ವಿರೋಧಿಸಿದ ಅವರು ಪತ್ರಿಕೆಗಳಿಗೆ ಓದುಗರ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ವಿಚಾರ ಕನ್ನಡಪರ ಸಂಘಟನೆಗಳ ಗಮನ ಸೆಳೆದಿತ್ತು. ರಾಮಚಂದ್ರಾಚಾರಿ ಅವರ ಪರವಾಗಿ ಸಂಘಟನೆಗಳು ಧ್ವನಿ ಎತ್ತಿ, ಮೇಲಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಇದರಿಂದ ಅಸಮಾಧಾನಗೊಂಡ ಕಚೇರಿಯ ಮೇಲಧಿಕಾರಿಗಳು ಅವರನ್ನು ಅಮಾನತು ಮಾಡಿದ್ದರು. ಬಳಿಕ 31ನೇ ವಯಸ್ಸಿನಲ್ಲಿ, 1993ರಲ್ಲಿ ಸೇವೆಯಿಂದ ವಜಾಗೊಳಿಸಲಾಯಿತು.
ಇದಾದ ಬಳಿಕವೂ ಅವರ ಸಂಕಷ್ಟ ಮುಂದುವರಿದಿತ್ತು. 2005ರಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು. ಸುದೀರ್ಘ ಕಾನೂನು ಹೋರಾಟದ ಬಳಿಕ 2017ರಲ್ಲಿ ಪ್ರಕರಣದಿಂದ ಬಿಡುಗಡೆ ಹೊಂದಿದ್ದರು. 2018ರಲ್ಲಿ ಈ ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿತ್ತು. ಆದರೂ, ಸೇವೆಯಿಂದ ವಜಾಗೊಂಡ ಪ್ರಕರಣಕ್ಕೆ ಮಾತ್ರ ಇನ್ನೂ ಪರಿಹಾರ ಸಿಕ್ಕಿಲ್ಲ.
ನ್ಯಾಯಕ್ಕಾಗಿ ಮುಂದುವರಿದ ಹೋರಾಟ: ಕನ್ನಡ ಅಂಕಿಗಳನ್ನು ಬಳಸಿದ್ದಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಪತಿ ಅನುಭವಿಸುತ್ತಿರುವ ನೋವು ಹೇಳತೀರದು. 71ನೇ ವಯಸ್ಸಿನಲ್ಲಿಯೂ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಅನ್ಯಾಯ ಮತ್ತೊಬ್ಬ ಸರ್ಕಾರಿ ನೌಕರರಿಗೆ ಆಗಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಧ್ಯಪ್ರವೇಶಿಸಿ ಪ್ರಕರಣಕ್ಕೆ ಅಂತ್ಯ ಹಾಡಬೇಕು. ಮುಕ್ತ ತನಿಖೆ ನಡೆಸಿ ರಾಮಚಂದ್ರಾಚಾರಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಅವರ ಪತ್ನಿ ಎಂ.ಎಸ್. ಶಾಂತಕುಮಾರಿ ಆಗ್ರಹಿಸಿದ್ದಾರೆ.
ಕನ್ನಡದ ಅಂಕಿಗಳನ್ನು ಬಳಸಿದ ಕಾರಣಕ್ಕೆ ಸರ್ಕಾರಿ ನೌಕರರೊಬ್ಬರು ಇಷ್ಟು ಸುದೀರ್ಘ ಅವಧಿಯವರೆಗೆ ಸೇವಾ ಸಂಬಂಧಿತ ಸಂಕಷ್ಟ ಎದುರಿಸುತ್ತಿರುವುದು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿನ ಅಪರೂಪದ ಪ್ರಕರಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.