

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಕುಮಾರಿಕೊಪ್ಪಲು ಗ್ರಾಮದ ಬಳಿ ಹಾರಂಗಿ ನಾಲೆಯ ಕಾಲುವೆ ಏರಿ ಸೋಮವಾರ ಬೆಳಗ್ಗೆ ಒಡೆದು ಹೋಗಿದ್ದು ಸುಮಾರು ಐದು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.
ಈಗಾಗಲೇ ಎರಡನೇ ಬೆಳೆ ಬೇಸಾಯ ಆರಂಭಿಸಿರುವ ರೈತರು ಗದ್ದೆಗಳಲ್ಲಿ ಭತ್ತ ನಾಟಿ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ನಾಲೆಯ ಏರಿ ಒಡೆದು ನೀರು ಗದ್ದೆಗಳಿಗೆ ನುಗ್ಗಿದ ಪರಿಣಾಮ ಭತ್ತದ ಬೆಳೆ ನೀರಿನಲ್ಲಿ ಮುಳುಗಿದ್ದು ನಷ್ಟ ಉಂಟಾಗಿದೆ. ಬರದಿಂದ ಆರ್ಥಿಕ ತೊಂದರೆ ಎದುರಿಸುತ್ತಿರುವ ರೈತರಿಗೆ ಇದೀಗ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಾಲೆ ದುರಸ್ತಿಗೆ ಮುಂದಾಗಬೇಕು. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರಾದ ವಿಜೇಂದ್ರ, ಸಂಜು, ಮಹೇಶ, ಜವರೇಗೌಡ, ತಿಮ್ಮೇಗೌಡ, ನಾಗರಾಜೇಗೌಡ, ಬಾಲಕೃಷ್ಣ, ಕೃಷ್ಣೇಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಹಾರಂಗಿ ಇಲಾಖೆಯ ಎಇಇ ಗೋಕುಲ್, ಕುಮಾರಿ ಕೊಪ್ಪಲು ಬಳಿ ಹಾರಂಗಿ ನಾಲೆಯ ಏರಿ ಒಡೆದು ಹೋಗಿರುವುದು ಗಮನಕ್ಕೆ ಬಂದಿದ್ದು, ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ತಕ್ಷಣ ನಾಲೆಯಲ್ಲಿ ಮತ್ತೆ ನೀರು ಹರಿಸಲು ಕ್ರಮವಹಿಸಲಾಗುವುದು. ರೈತರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.