ಮೈಸೂರು: ದಸರಾ ಸಂಭ್ರಮವನ್ನು ಆಸ್ವಾದಿಸಲು ಗುರುವಾರ ರಾತ್ರಿ ಸುರಿದ ಧಾರಾಕಾರ ವರ್ಷಧಾರೆ ರಸಭಂಗ ಉಂಟು ಮಾಡಿತು. ಜತೆಗೆ, ಅವಾಂತರವನ್ನೂ ಕಾರಣವಾಯಿತು.
ಯುವ ದಸರಾದಲ್ಲಿ ದೊಡ್ಡ ಅವ್ಯವಸ್ಥೆಯನ್ನೇ ಸೃಷ್ಟಿಸಿತು. ಜೋರು ಗಾಳಿಗೆ ವೇದಿಕೆ ಎರಡು ಬದಿಯಲ್ಲಿ ನಿಲ್ಲಿಸಿದ್ದ ದೊಡ್ಡ ಸ್ಪೀಕರ್ ಉರುಳಿ ಬಿದ್ದಿತು. ಎಲ್ಇಡಿ ಪರದೆಗಳೂ ಹಾನಿಗೊಂಡವು. ಅದೃಷ್ಟಕ್ಕೆ ಯಾರಿಗೂ ಹಾನಿಯಾಗಲಿಲ್ಲ.
ಸಹಸ್ರಾರು ಜನರು ಸೇರಿದ್ದ ಬಯಲು ಮೈದಾನದಲ್ಲಿ ಮಳೆಯಿಂದ ಆಶ್ರಯ ಪಡೆಯಲು ಬೇರೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಮಳೆಯಲ್ಲಿ ನೆನೆದುಕೊಂಡೇ ಸಾರ್ವಜನಿಕರು ಮನೆಗೆ ತೆರಳಿದರು.
ಅರಮನೆ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ವಿಘ್ನವಾಯಿತು. ಸ್ಟಕ್ಯಾಟೋ ಫ್ರೆಶ್ಲಿ ಬ್ರೀವ್ಡ್ ತಂಡದ ಇಂಡಿಯನ್ ಕಂಟೆಂಪರರಿ ಫ್ಯೂಷನ್ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮಳೆ ಅಬ್ಬರಿಸಿತು.
ಈ ಪ್ರದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಬಳಿಕ ಶಾಮಿಯಾನ್ದಿಂದ ಕವರ್ ಆಗಿರುವ ಇನ್ನೊಂದು ಪರ್ಯಾಯ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಕೇರಳ ರಾಜ್ಯದ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು
5ನೇ ದಿನವಾಗಿರುವ ದಸರಾ ಮಹೋತ್ಸವದಲ್ಲಿ ಸಂಜೆ ಹೊತ್ತಿನಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ನಗರದ ಪ್ರಮುಖ ರಸ್ತೆಗಳು ಪ್ರವಾಸಿಗರು, ಸಾರ್ವಜನಿಕರಿಂದ ಜಿಗಿಜಿಗಿಗುಡುತ್ತಿತ್ತು. ಇಂತಹ ಸಂದರ್ಭದಲ್ಲಿ ವರುಣದೇವನ ದರ್ಶನವಾಗಿ ದಸರೆ ಸಡಗರ ಅಡ್ಡಿಯಾಯಿತು.
ಮುಂಗಾರು ಹಂಗಾಮು ಮುಗಿದ ಬಳಿಕ ನಗರದಲ್ಲಿ ಮಳೆ ದರ್ಶನವಾಗಿರಲಿಲ್ಲ. ಹಿಂಗಾರು ಮುಂಗಾರು ಶುರುವಾದರೂ ಮಳೆಯಾಗಿರಲಿಲ್ಲ. ಇದರಿಂದ ತಾಪಮಾನ ಹೆಚ್ಚಾಗಿ ಉರಿಬಿಸಿಲಿನಿಂದ ಜನರು ಹೈರಾಣರಾಗಿದ್ದರು. ಸೆಕೆಗೆ ಬಸವಳಿದ ಜನರಿಗೆ ಗುರುವಾರ ರಾತ್ರಿ 8 ಗಂಟೆ ಸುರಿದ ಮಳೆ ತಂಪೆರೆದಿರುವುದು ನಿಜ. ಆದರೆ, ದಸರೆ ಉಲ್ಲಾಸಕ್ಕೆ ಮಾತ್ರ ವಿಘ್ನ ಉಂಟು ಮಾಡಿತು.
ಆರಂಭದಲ್ಲಿ ಜಿಟಿಜಿಟಿ ಸುರಿದ ಮಳೆ 8.30ರ ಬಳಿ ಧಾರಾಕಾರವಾಗಿ ಸುರಿಯಿತು. ಸರಿಸುಮಾರು ಅರ್ಧಗಂಟೆ ಕಾಲ ಉತ್ತಮವಾಗಿ ಮಳೆಯಾಗಿದೆ. ಮತ್ತೆ ಸುಧಾರಿಸಿಕೊಂಡ ಮಳೆ 9.45ರ ಬಳಿಕ ಮತ್ತೆ ಅಬ್ಬರಿಸಿತು.
ಮಳೆಯಿಂದಾಗಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳದ ಅವ್ಯವಸ್ಥೆಗೆ ಕಾರಣವಾಯಿತು. ಇಲ್ಲಿ ಸೇರಿದ ಜನರು ಮಳೆಯಲ್ಲಿ ನೆನೆದುಕೊಂಡರು.