ನಂಬಿದವರ ಕಾಪಾಡುವ ಅಗಸ್ತ್ಯೇಶ್ವರ

ಮಿರ್ಲೆಯ ಕಾವೇರಿ ತೀರದಲ್ಲಿದೆ ಪುಣ್ಯಕ್ಷೇತ್ರ
ದೇವಸ್ಥಾನದ ಗರ್ಭಗುಡಿಯಲ್ಲಿ ಶಿವಲಿಂಗ .
ದೇವಸ್ಥಾನದ ಗರ್ಭಗುಡಿಯಲ್ಲಿ ಶಿವಲಿಂಗ .
Published on: 

ಸಾಲಿಗ್ರಾಮ: ನಂಬಿದ ಭಕ್ತರನ್ನು ಕಾಪಾಡುವ ಮೂಲಕ ಮಿರ್ಲೆ ಅಗಸ್ತ್ಯೇಶ್ವರ(ಈಶ್ವರ) ಈ ಭಾಗದ ಜನರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾನೆ.

ಇತಿಹಾಸ, ಪುರಾಣ ಪ್ರಸಿದ್ಧ ಹಾಗೂ ಪುಣ್ಯಕ್ಷೇತ್ರವಾಗಿರುವ ಅಗಸ್ತ್ಯೇಶ್ವರ ದೇವಾಲಯದ ಮಿರ್ಲೆ ಗ್ರಾಮದ ಕಾವೇರಿ ನದಿತಟದಲ್ಲಿದೆ. ಭಕ್ತರ ಇಷ್ಟಾರ್ಥ ಈಡೇರಿಸುವ ಮೂಲಕ ಈಶ್ವರ ಮನೆ ಮಾತಾಗಿದ್ದು, ಪಾಳೇಗಾರರ ಆಳ್ವಿಕೆಯಿಂದಲೂ ದೇವರಿಗೆ ತಪ್ಪದೆ ಸೇವೆ ನಡೆಯುತ್ತಿದೆ.

ಪ್ರತಿ ವರ್ಷ ಶಿವರಾತ್ರಿ ದಿನ ಸೂರ್ಯನ ಕಿರಣ ಶಿವಲಿಂಗ ಸ್ಪರ್ಶಿಸುವುದು ವಿಶೇಷ. ಹೀಗಾಗಿ ಇದು ಪುಣ್ಯಸ್ಥಳವೆಂದೇ ಪರಿಗಣಿಸಲಾಗಿದೆ. ಅಂದು ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.

ತಲಕಾವೇರಿಯಿಂದ ಉಗಮವಾಗಿ ಕಾವೇರಿ ನದಿಯಾಗಿ ಹರಿಯುತ್ತಾಳೆ. ಅಗಸ್ತ್ಯ ಋಷಿಮುನಿಗಳ ಸಂಚಾರದ ವೇಳೆ ಋಷಿಮುನಿಗಳೊಂದಿಗೆ ಕಾವೇರಿ ನದಿಯಾಗಿ ಸಾಗುತ್ತ ಬರುತ್ತಾಳೆ. ಈ ಸಂದರ್ಭ ಋಷಿಮುನಿಗಳು ವಿಶ್ರಾಂತಿಗೆಂದು ಈಶ್ವರ ದೇವಸ್ಥಾನದ ಬಳಿ ಕೂರುತ್ತಾರೆ. ಆಗ ಕಾವೇರಿ ಈ ದೇವಸ್ಥಾನದ ಬಳಿ ಹರಿದುಹೋಗುತ್ತಾಳೆ. ಹೀಗಾಗಿ ದೇವಸ್ಥಾನ ಮತ್ತು ಸ್ಥಳ ಅಗಸ್ತ್ಯೇಶ್ವರ ಕ್ಷೇತ್ರ ಎಂದೇ ಪ್ರಸಿದ್ಧವಾಗಿದೆ.

ಪುರಾತನ ಕಾಲದಿಂದಲೂ ಈ ದೇವಸ್ಥಾನ ಸುತ್ತಮುತ್ತ ಸರ್ಪಸಂಚಾರವಿದೆ ಎಂದು ಹೇಳಲಾಗುತ್ತಿದೆ. ಈವರೆಗೆ ಭಕ್ತರಿಗೆ ಸಮಸ್ಯೆ ಉಂಟು ಮಾಡಿಲ್ಲ. ಹಲವು ಭಕ್ತರಿಗೆ ದೇವಸ್ಥಾನದ ಬಳಿ ಸರ್ಪ ಕಾಣಿಸಿಕೊಂಡಿದೆ. ಇದೊಂದು ಪವಿತ್ರ ಸ್ಥಳವಾಗಿರುವುದರಿಂದ ಇಲ್ಲಿ ಮಾಂಸಾಹಾರ ಮಾಡುವಂತಿಲ್ಲ.

ದೇವಸ್ಥಾನದ ಹಿನ್ನೆಲೆ :15ನೇ ಶತಮಾನದ ಗಂಗರ ಕಾಲದಲ್ಲಿ ಚಂಗಳೂರು ಸಣ್ಣನಾಯಕ ಪಾಳೆಗಾರ, ಹನಸೋಗೆ, ಸಾಲಿಗ್ರಾಮ, ಭೇರ್ಯ, ಮಿರ್ಲೆ, ಹೊಸ ಅಗ್ರಹಾರ, ಕೇರಳಾಪುರ ವ್ಯಾಪ್ತಿಯಲ್ಲಿ ಆಳ್ವಿಕೆ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಜನರ ನೆಮ್ಮದಿ ಮತ್ತು ಶಾಂತಿಗಾಗಿ ಈಶ್ವರ ದೇವಸ್ಥಾನ ನಿರ್ಮಿಸಿದ ಎಂಬುದು ಇತಿಹಾಸ. ಮಿರ್ಲೆಯಲ್ಲಿ ಬಹುತೇಕ ಬ್ರಾಹ್ಮಣರು, ಬಣಜಿಗ ಶೆಟ್ಟರು, ಒಕ್ಕಲಿಗ ಗೌಡರು ಹಾಗೂ ಪರಿಶಿಷ್ಟರು ವಾಸವಿದ್ದು, ಈಶ್ವರನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಇಲ್ಲಿನ ಪ್ರತಿ ಕುಟುಂಬ ಕಾವೇರಿ ನದಿಯಲ್ಲಿ ಸ್ಥಾನ ಮುಗಿಸಿ ಪಕ್ಕದಲ್ಲಿರುವ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಭಕ್ತರಿಗೆ ಅನುಕೂಲವಾಗುವಂತೆ ಅಗಸ್ತ್ಯೇಶ್ವರ ದೇವಸ್ಥಾನದ ಬಳಿ ಮಿರ್ಲೆ ಜಮೀನ್ದಾರನಾಗಿದ್ದ ನಾಗಣ್ಣ ಅವರು ಸುಮಾರು 185 ವರ್ಷಗಳ ಹಿಂದೆ ಸಂಧ್ಯಾ ಮಂಟಪ ನಿರ್ಮಿಸಿದ್ದರು. ಋಷಿಮುನಿಗಳು ಮತ್ತು ಭಕ್ತರು ನದಿಯಲ್ಲಿ ಸ್ನಾನ ಮುಗಿಸಿ ಸಂಧ್ಯಾ ಮಂಟಪದಲ್ಲಿ ಈಶ್ವರನ ಧ್ಯಾನ ಮಾಡುತ್ತಿದ್ದರು. ಮಿರ್ಲೆ, ಗಂಧನಹಳ್ಳಿ, ಗಂಧನಹಳ್ಳಿ ಕೊಪ್ಪಲು, ಬೀಚನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಹನಸೋಗೆ, ಚುಂಚನಕಟ್ಟೆ, ಹೊಸೂರು, ಸಾಲಿಗ್ರಾಮ, ಭೇರ್ಯ, ಹೊಸ ಅಗ್ರಹಾರ, ತಂದ್ರೆ ಗ್ರಾಮಸ್ಥರು ಇಂದಿಗೂ ಕೂಡ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ. ಗಂಧನಹಳ್ಳಿ, ಗಂಧನಹಳ್ಳಿ ಕೊಪ್ಪಲು, ಬೀಚನಹಳ್ಳಿ, ಬೀಚನಹಳ್ಳಿ ಕೊಪ್ಪಲು ಗ್ರಾಮದ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಪ್ರತಿ ವರ್ಷ ಯುಗಾದಿ ಹಬ್ಬದ ಮುಂಚಿತವಾಗಿ ದೇವರ ಉತ್ಸವ ಮೂರ್ತಿಯನ್ನು ಕಾವೇರಿ ನದಿಯಲ್ಲಿ ಶುಚಿಗೊಳಿಸಿ ಕಪ್ಪಡಿ, ಚುಂಚನಕಟ್ಟೆಯ ಶ್ರೀರಾಮ ದೇವಸ್ಥಾನ ಮಾರ್ಗವಾಗಿ ಅಗಸ್ತ್ಯೇಶ್ವರ ದೇವಸ್ಥಾನಕ್ಕೆ ತರುತ್ತಾರೆ. ಮಹಿಳೆಯರು ಕಳಸ ಹೊತ್ತು ತಂದು ದೇವರಿಗೆ ಪೂಜೆ ಸಲ್ಲಿಸುತ್ತಾರೆ.

ತಲುಪುವ ಮಾರ್ಗ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಿಂದ 3 ಕಿ.ಮೀ. ಕ್ರಮಿಸಿದರೆ ಕಾವೇರಿ ನದಿ ತಟದಲ್ಲೇ ಅಗಸ್ತ್ಯೇಶ್ವರ ದೇವಸ್ಥಾನ ಇದೆ. ಮೈಸೂರಿನಿಂದ ಕೆ.ಆರ್.ನಗರ ಮಾರ್ಗ, ರಾಮನಾಥಪುರದಿಂದ ಸಾಲಿಗ್ರಾಮ ಮಾರ್ಗ ಹಾಗೂ ಪಿರಿಯಾಪಟ್ಟಣದಿಂದ ಬೆಟ್ಟದಪುರ, ಚುಂಚನಕಟ್ಟೆ ಮಾರ್ಗವಾಗಿ ಬಂದರೆ ದೇವಸ್ಥಾನ ತಲುಪಬಹುದು.