ದೇಶಕ್ಕೆ ಕಾಸ್ಮೋಸ್ ತಾರಾಲಯ ಸಮರ್ಪಿಸಿದ ಮೋದಿ

ಬ್ರಹ್ಮಾಂಡದ ಕೌತುಕ ವೀಕ್ಷಣೆಗೆ ವೇದಿಕೆ ದೇಶದ ಮೊದಲ ಎಲ್‌ಇಡಿ ಬಾಗಿದ ಗುಮ್ಮಟವೆಂಬ ಹಿರಿಮೆ
ದೇಶಕ್ಕೆ ಕಾಸ್ಮೋಸ್ ತಾರಾಲಯ ಸಮರ್ಪಿಸಿದ ಮೋದಿ
ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಆಧುನಿಕ ಕಾಸ್ಮೋಸ್ ತಾರಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಬಟನ್ ಒತ್ತುವ ಮೂಲಕ ಲೋಕಾರ್ಪಣೆಗೊಳಿಸಿದರು. ರಾಜ್ಯಪಾಲೆ ಡಾ.ಸುಧಾ ಯಾದವ್, ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದ್ದರು Modi dedicates Cosmos Planetarium to the nation
Published on: 

ಮೈಸೂರು: ವಿಶಾಲ ಬ್ರಹ್ಮಾಂಡದ ಕೌತುಕ ವೀಕ್ಷಣೆಗೆ ವೇದಿಕೆಯಾಗಿರುವ ‘ಕಾಸ್ಮೋಸ್ ತಾರಾಲಯ’ವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ದೇಶಕ್ಕೆ ಸಮರ್ಪಣೆ ಮಾಡಿದರು. ಇದು ದೇಶದ ಮೊದಲ ಎಲ್‌ಇಡಿ ಬಾಗಿದ ಗುಮ್ಮಟ ತಾರಾಲಯ ಎಂಬ ಹಿರಿಮೆ ಪಾತ್ರವಾಗಿದೆ.

ನಗರದ ಹಚ್ಚಹಸಿರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ 3 ಎಕರೆಯಲ್ಲಿ 115 ಕೋಟಿ ರೂ.ವೆಚ್ಚದಲ್ಲಿ ತಲೆಯೆತ್ತಿರುವ ಈ ತಾರಾಲಯ ಖಗೋಳ ಸಂಶೋಧನಾ ಲೋಕದಲ್ಲೇ ವಿಶಿಷ್ಟ. ಭಾರತೀಯ ಖಗೋಳ ಭೌತವಿಜ್ಞಾನ ವತಿಯಿಂದ ಸ್ಥಾಪನೆಗೊಂಡಿರುವ ಇದು ಎಲ್‌ಇಡಿ ಡೋಮ್ ಹೊಂದಿರುವ ಆಧುನಿಕ ಡಿಜಿಟಲ್ ಪ್ಲಾನೆಟೋರಿಯಂ ಹಿರಿಮೆಗೂ ಸಾಕ್ಷಿಯಾಗಿದೆ.

ಇದರಲ್ಲೇ ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ ಸಹ ಉದ್ಘಾಟನೆಗೊಂಡಿತು. ಈ ಎರಡು ಕೇಂದ್ರಗಳು, ಖಗೋಳ ಕುರಿತು ತರಬೇತಿಯೊಂದಿಗೆ ರಾತ್ರಿ ವೇಳೆ ಆಕಾಶ ವೀಕ್ಷಣೆ, ಗ್ರಹಣಗಳ ಪರಿಚಯ, ಶೂನ್ಯ ನೆರಳು ಮುಂತಾದ ಕಾರ್ಯಚಟುವಟಿಕೆಗೂ ವೇದಿಕೆಯಾಗಲಿವೆ.

ವಿಶಾಲ ಬ್ರಹ್ಮಾಂಡ ಅರಿಯಲು ಪ್ರೇರಣೆ:

ಇಂತಹವೊಂದು ಆಕಾಶಮಂದಿರವನ್ನು ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘ಈ ತಾರಾಲಯವು ವಿಶಾಲ ಬ್ರಹ್ಮಾಂಡವನ್ನು ಅರಿಯಲು, ಅದರ ರಹಸ್ಯ ತಿಳಿದುಕೊಳ್ಳಲು ಪ್ರೇರಣೆ. ಭಾರತದಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನದ ಪರಂಪರೆಗಳು ಸದಾ ಜತೆಯಾಗಿಯೇ ಮುನ್ನಡೆದಿವೆ ಎಂಬುದಕ್ಕೆ ಈ ಎರಡೂ ಸಂಸ್ಥೆಗಳು ಸಾಕ್ಷಿ’ ಎಂದು ಹೇಳಿದರು.

ಒಂದು ದಶಕದಲ್ಲಿ ಭಾರತವು ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅಭೂತಪೂರ್ವ ವೇಗದಲ್ಲಿ ಕಾರ್ಯನಿರ್ವಹಿಸಿದೆ. ಬಾಹ್ಯಾಕಾಶ ಅನ್ವೇಷಣೆಯ ಹಲವು ಕಠಿಣ ಕ್ಷೇತ್ರಗಳಲ್ಲಿ ಭಾರತವು ವಿಶ್ವದ ಕೆಲವೇ ಕೆಲವು ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದು ಹೆಮ್ಮೆಯಿಂದ ಹೇಳಿದರು.

ಇಸ್ರೋ ಸಂಸ್ಥೆ ಸಾಧನೆಯಾದ ಚಂದ್ರಯಾನ-3, ಆದಿತ್ಯ-ಎಲ್1, ಗಗನಯಾನ ಯೋಜನೆ ಕುರಿತು ಮುಕ್ತಕಂಠದಿಂದ ಪ್ರಶಂಸಿದ ಅವರು, ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದ್ದು, ಖಾಸಗಿ ಉದ್ಯಮಗಳಿಗೂ ಹೊಸ ಅವಕಾಶ ಸೃಷ್ಟಿಯಾಗಿವೆ. ಭಾರತದ ನವೋದ್ಯಮಗಳಿಗೂ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ದೊರೆತಿದೆ ಎಂದು ತಿಳಿಸಿದರು.

ಇದರ ಫಲವಾಗಿ, ಯುವಜನತೆ ಸ್ವಂತ ರಾಕೆಟ್ ಉಡಾವಣೆ ಮಾಡುತ್ತಿದ್ದಾರೆ. ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಹಿಂದೆ ಭಾರತದಲ್ಲಿ ಎಂದೂ ನಡೆಯದಂತಹ ಅನೇಕ ಹೊಸ ಶೋಧನೆ ಕೈಗೊಳ್ಳುತ್ತಿದ್ದಾರೆ. ಇದೇ ಹೊಸ ಭಾರತದ ವೈಜ್ಞಾನಿಕ ದೃಷ್ಟಿಕೋನ ಎಂದು ವಿಶ್ವಾಸದಿಂದ ಹೇಳಿದರು.

ಭಾರತವು ಯಾವಾಗಲೂ ‘ಮಾನವೀಯತೆಯೇ ಮೊದಲು’ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಭಾರತದ ಬಾಹ್ಯಾಕಾಶ ಯೋಜನೆಗಳೂ ಮಾನವ ಕಲ್ಯಾಣಕ್ಕೆ ಸಮರ್ಪಿತವಾಗಿವೆ.

ಮೀನುಗಾರರಿಗಾಗಿ ಇಸ್ರೋ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ, ಪ್ರಕೃತಿ ವಿಕೋಪ ನಿರ್ವಹಣೆ, ನೈಜ ಸಮಯದ ರೈಲು ಸಂಚಾರ ಪತ್ತೆ ವ್ಯವಸ್ಥೆ, ಫಸಲ್ ಬಿಮಾ ಯೋಜನೆಯಡಿ ಉಪಗ್ರಹ ದತ್ತಾಂಶದ ನೆರವಿನಿಂದ ಬೆಳೆ ಇಳುವರಿ ಅಂದಾಜಿನ ಮೇಲೆ ರೈತರಿಗೆ ವಿಮಾ ಪರಿಹಾರ ವಿತರಣೆ ಇದಕ್ಕೆ ನಿದರ್ಶನವಾಗಿದೆ. ಉಪಗ್ರಹಗಳು ಬಾಹ್ಯಾಕಾಶದ ಎತ್ತರವನ್ನು ತಲುಪುವುದರೊಂದಿಗೆ ಭೂಮಿಯ ಮೇಲಿನ ಜನರ ಜೀವನ ಉತ್ತಮಗೊಳಿಸುವ ಕಾರ್ಯದಲ್ಲೂ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

‘ಸಮಾಜಕ್ಕಾಗಿ ವಿಜ್ಞಾನ’ ಎಂಬುದೇ ನಮ್ಮ ಚಿಂತನೆ. ಸಂಶೋಧನೆ, ನಾವೀನ್ಯತೆಗೆ ನಿರಂತರವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು, ಸಂಶೋಧಕರು ಇನ್ನಷ್ಟು ಕೆಲಸ ಮಾಡಬೇಕು ಎಂದು ಕರೆಕೊಟ್ಟರು.

ಮೇಕೆದಾಟು ಯೋಜನೆಗೆ ಅನುಮತಿ ನೀಡಿ: ಸಿಎಂ ಹಕ್ಕೊತ್ತಾಯ

ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ, ಸಿಎಸ್‌ಆರ್ ಅನುದಾನವನ್ನು ಶಿಕ್ಷಣ, ಆರೋಗ್ಯ ಬಳಕೆಗೆ ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಕ್ಕೊತ್ತಾಯ ಮಂಡಿಸಿದರು

ಕಾಸ್ಮೋಸ್ - ಮೈಸೂರು ತಾರಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ನಲ್ಲೇ ಮಾತನಾಡಿದ ಸಿಎಂ ಅವರು, ಮೇಕೆದಾಟು ಜಲಾಶಯ ಯೋಜನೆಗೆ ಅಗತ್ಯ ಅನುಮೋದನೆ ಕೊಡಬೇಕು. ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿಂಪಡೆಯಬೇಕು. ರಾಜ್ಯದ 1,000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಸಿಎಸ್‌ಆರ್ ನಿಧಿಯನ್ನು ರಾಜ್ಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಪ್ರಧಾನಿ ಎದುರು ಬೇಡಿಕೆ ಮಂಡಿಸಿದರು. ಇದಕ್ಕೆ ಪ್ರಧಾನಿ ಭಾಷಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ರಾಜ್ಯಪಾಲೆ ಡಾ.ಸುಧಾ ಯಾದವ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದ್ದರು

ನಾಲ್ಕು ತಿಂಗಳ ಅಂತರದಲ್ಲಿ ಮೋದಿ ಎರಡನೇ ಭೇಟಿ

ನಾಲ್ಕು ತಿಂಗಳ ಅಂತರದಲ್ಲಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಭೇಟಿ ನೀಡಿ ಸಾಂಸ್ಕೃತಿಕ ನಗರಿ ಮೇಲಿನ ಮಮತೆಯನ್ನು ಮೆರೆದರು.

ಬೆಂಗಳೂರಿನಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ನಗರದ ಲಲಿತಮಹಲ್ ಹೆಲಿಪ್ಯಾಡ್‌ಗೆ ಬಂದಿಳಿದ ಅವರು, ಕಾರಿನಲ್ಲಿ ಲಲಿತಮಹಲ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಚಾಮುಂಡಿಬೆಟ್ಟದ ಮುಖ್ಯರಸ್ತೆ ಆಯ್ದು ಸಭಾ ಕಾರ್ಯಕ್ರಮಕ್ಕೆ ಹಾಜರಾದರು. ಮಾರ್ಗ ಮಧ್ಯದಲ್ಲಿ ಕಾರಿನಲ್ಲಿ ಕುಳಿತೇ ಪ್ರಧಾನಿ, ರಸ್ತೆ ಬದಿ ನಿಂತಿದ್ದ ಜನರಿಗೆ ಕೈ ಬೀಸಿ ನಮಸ್ಕಾರ ಹೇಳಿದರು. ಸಮಾರಂಭದ ಮುಗಿದ ಬಳಿಕ ರಸ್ತೆ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.