

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಐತಿಹಾಸಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವ ಸಹಸ್ರಾರು ಭಕ್ತರ ಜಯಘೋಷ, ಭಕ್ತಿಗೀತೆ ಹಾಗೂ ಸಾಂಪ್ರದಾಯಿಕ ಆಚರಣೆಗಳ ನಡುವೆ ಮಂಗಳವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ದೀಪಾವಳಿ ಹಬ್ಬದ ಅಂಗವಾಗಿ ಪ್ರತಿವರ್ಷ ನಡೆಯುವ ಈ ವಿಶಿಷ್ಟ ಧಾರ್ಮಿಕ ಉತ್ಸವದಲ್ಲಿ ಬೆಟ್ಟದಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು. ದೀವಟಿಗೆಯ ಬೆಳಕು, ಭಕ್ತರ ಜಯಕಾರ, ಜಾನಪದ ಗೀತೆಗಳ ಗಾಯನ ಹಾಗೂ ಉತ್ಸವ ಮೂರ್ತಿಗಳ ಮೆರವಣಿಗೆಯು ಹಬ್ಬದ ಸಡಗರ ಮತ್ತು ಆಧ್ಯಾತ್ಮಿಕ ವಾತಾವರಣ ಮೂಡಿಸಿತು.
ಸೋಮವಾರ ರಾತ್ರಿ ಗ್ರಾಮದ ಹೃದಯಭಾಗದಲ್ಲಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಿಂದ ಬೆಳ್ಳಿ ಬಸಪ್ಪ ಹಾಗೂ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಬೆಟ್ಟದ ಮೇಲಿರುವ ಮೂಲ ದೇವಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು. ಮಂಗಳವಾರ ಮುಂಜಾನೆ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿ ಉತ್ಸವ ಮೂರ್ತಿಗಳನ್ನು ಬೆಟ್ಟದಿಂದ ಕೆಳಕ್ಕೆ ತರಲಾಯಿತು. ಗ್ರಾಮದ ಮುಖ್ಯಬೀದಿಯಲ್ಲಿಯೂ ಪೂಜೆ ಸಲ್ಲಿಸಿ, ಬಳಿಕ ಗ್ರಾಮದ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪವಾಡ ಬಸವೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಗಳನ್ನು ಇರಿಸಿ ಆರಾಧಿಸಲಾಯಿತು.
ಪಂಜಿನ ಬೆಳಕಿನಲ್ಲಿ ಭಕ್ತಿಯ ಮೆರವಣಿಗೆ: ನಂತರ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಸಂಪ್ರದಾಯಬದ್ಧವಾಗಿ ಸಿದ್ಧಪಡಿಸಿಕೊಂಡು ಬಂದಿದ್ದ ದೀವಟಿಗೆಗಳನ್ನು ಹಿಡಿದು ಮೆರವಣಿಗೆಗೆ ಚಾಲನೆ ನೀಡಿದರು. ಬೆಟ್ಟದಪುರದಿಂದ ಆರಂಭವಾದ ದೀವಟಿಗೆ ಉತ್ಸವವು ಬೆಟ್ಟದಪುರ ಬಸವೇಶ್ವರ ಕಾಲನಿ ಮೂಲಕ ಬೆಟ್ಟದತುಂಗ, ಕುಡುಕೂರು, ಡಿ.ಜಿ. ಕೊಪ್ಪಲು, ಬಾರಸೆ, ಸೇರಿದಂತೆ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ರಾತ್ರಿಯಿಡೀ ಸಂಚರಿಸಿ, ಬಳಿಕ ಮೂಲಸ್ಥಾನವಾದ ಬೆಟ್ಟದಪುರಕ್ಕೆ ಮರಳಿತು. ದೀವಟಿಗೆ ಹೊತ್ತ ಭಕ್ತರು ’ಉಘೇ ಮಲ್ಲಯ್ಯ, ಉಘೇ ಗಿರಿಜಮ್ಮ’ ಎಂಬ ಭಕ್ತಿಪೂರ್ವಕ ಜಯಘೋಷಗಳೊಂದಿಗೆ ವಿವಿಧ ಜಾನಪದ ಹಾಗೂ ಭಕ್ತಿಗೀತೆಗಳನ್ನು ಹಾಡುತ್ತಾ ಹೆಜ್ಜೆ ಹಾಕಿದರು. ಪಂಜಿನ ಬೆಳಕಿನಲ್ಲಿ ಸಾಗಿದ ಉತ್ಸವ ಮೂರ್ತಿಗಳ ಮೆರವಣಿಗೆ ಭಕ್ತರಲ್ಲಿ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಭಾವೈಕ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಸ್ವಾಮಿಗೆ ಹರಕೆ ಹೊತ್ತಿದ್ದ ಭಕ್ತರು ತಮ್ಮ ಗ್ರಾಮಗಳ ಮನೆಗಳ ಮುಂಭಾಗದಲ್ಲಿ ಹಸಿರು ಚಪ್ಪರಗಳನ್ನು ನಿರ್ಮಿಸಿ, ಆಗಮಿಸಿದ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಭಕ್ತಿಯಿಂದ ಆರಾಧಿಸಿದರು. ಪ್ರತಿ ಗ್ರಾಮದಲ್ಲಿಯೂ ದೇವರ ಮೆರವಣಿಗೆ ದೇವಸ್ಥಾನಗಳ ಸುತ್ತ ಪ್ರದಕ್ಷಿಣೆ ಹಾಕಿ ಸಾಗಿತು.
ಬೆಟ್ಟದತುಂಗ, ಕುಡುಕೂರಿನಲ್ಲಿ ಜಾತ್ರೆಯ ವೈಭವ: ದೀವಟಿಗೆ ಉತ್ಸವದ ಅಂಗವಾಗಿ ಬೆಟ್ಟದತುಂಗ ಹಾಗೂ ಕುಡುಕೂರು ಗ್ರಾಮಗಳಲ್ಲಿ ಜಾತ್ರೆಯ ಸಂಭ್ರಮ ಮನೆಮಾಡಿತ್ತು. ದೇವರ ಆಗಮನದ ಹಿನ್ನೆಲೆಯಲ್ಲಿ ಗ್ರಾಮಗಳ ಪ್ರಮುಖ ಬೀದಿಗಳು ಹಬ್ಬದ ಹಿನ್ನೆಲೆ ಸಿಂಗಾರಗೊಂಡಿದ್ದವು. ಭಕ್ತರು ಮನೆಗಳ ಮುಂಭಾಗದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವ ಮೂರ್ತಿಗಳನ್ನು ಸ್ವಾಗತಿಸಿದರು. ವಿಶೇಷವಾಗಿ ಕುಡುಕೂರು ಗ್ರಾಮಕ್ಕೆ ರಾತ್ರಿ ವೇಳೆ ದೀವಟಿಗೆ ಮೆರವಣಿಗೆ ಆಗಮಿಸಿದಾಗ ನೂರಾರು ಪಂಜುಗಳ ಬೆಳಕು ಇಡೀ ಗ್ರಾಮವನ್ನು ಕಂಗೊಳಿಸುವಂತೆ ಮಾಡಿದ್ದು, ಭಕ್ತರ ಕಣ್ಮನ ಸೆಳೆಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಮಿತಿಗಳ ವತಿಯಿಂದ ಅನ್ನದಾನ, ಮಜ್ಜಿಗೆ ವಿತರಣೆ ಸೇರಿದಂತೆ ವಿವಿಧ ಸೇವೆ ಹಮ್ಮಿಕೊಳ್ಳಲಾಗಿತ್ತು.
3108 ಮೆಟ್ಟಿಲುಗಳ ಬೆಟ್ಟದಲ್ಲಿ ಭಕ್ತಸಾಗರ: ದೀಪಾವಳಿ ಹಬ್ಬದ ವಿಶೇಷವಾಗಿ ಬೆಟ್ಟದಪುರದ ಧಾರ್ಮಿಕ ಕೇಂದ್ರ ಬಿಂದುವಾಗಿರುವ 3108 ಮೆಟ್ಟಿಲುಗಳನ್ನು ಹೊಂದಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಬೆಳಗ್ಗೆಯಿಂದಲೇ ಭಕ್ತರ ದಂಡೇ ಹರಿದುಬಂದಿತ್ತು. ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಎನ್ನದೆ ಸಾವಿರಾರು ಭಕ್ತರು ಬಿಸಿಲನ್ನೂ ಲೆಕ್ಕಿಸದೆ ಮೆಟ್ಟಿಲುಗಳನ್ನು ಏರಿ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರ ಸಂಖ್ಯೆ ಹೆಚ್ಚಾದ ಪರಿಣಾಮ ಬೆಟ್ಟದ ಮಧ್ಯಭಾಗದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಬೆಟ್ಟ ಹತ್ತಿ ಇಳಿಯುವ ಭಕ್ತರ ಅನುಕೂಲಕ್ಕಾಗಿ ಮಾರ್ಗದುದ್ದಕ್ಕೂ ಸಣ್ಣ ಅಂಗಡಿಗಳನ್ನು ತೆರೆದು ತಂಪು ಪಾನೀಯ, ಮಜ್ಜಿಗೆ ಹಾಗೂ ಕುಡಿಯುವ ನೀರನ್ನು ಮಾರಾಟ ಮಾಡಲಾಗುತ್ತಿತ್ತು. ಆಯಾಸಗೊಂಡ ಭಕ್ತರು ಅಲ್ಲಲ್ಲಿ ವಿಶ್ರಾಂತಿ ಪಡೆದು ಮತ್ತೆ ಬೆಟ್ಟದ ಹಾದಿ ಮುಂದುವರಿಸಿದರು.
ಬೆಟ್ಟದ ಮೇಲೆ ಕನ್ನಡದ ಕಂಪು: ಈ ಬಾರಿಯ ಉತ್ಸವದಲ್ಲಿ ಧಾರ್ಮಿಕ ಭಕ್ತಿಯ ಜತೆಗೆ ಕನ್ನಡಾಭಿಮಾನವೂ ವಿಶೇಷವಾಗಿ ಗಮನ ಸೆಳೆಯಿತು. ಬೆಟ್ಟಕ್ಕೆ ಆಗಮಿಸಿದ್ದ ಹಲವು ಯುವಕರ ತಂಡಗಳು ಕನ್ನಡ ಬಾವುಟಗಳನ್ನು ಹಿಡಿದು ಮೆಟ್ಟಿಲುಗಳನ್ನು ಏರುವ ಮೂಲಕ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಅಭಿಮಾನ ಮೆರೆದರು. ಬೆಟ್ಟದ ಹಾದಿಯಲ್ಲಿ ರಾರಾಜಿಸಿದ ಕನ್ನಡ ಬಾವುಟಗಳು ನಾಡಿನ ಸಾಂಸ್ಕೃತಿಕ ಸಾರಿದವು. ಭಕ್ತಿಯಾತ್ರೆಯ ನಡುವೆ ಕನ್ನಡದ ಕಂಪು ಪಸರಿಸಿದ ಈ ದೃಶ್ಯ ಎಲ್ಲರ ಗಮನ ಸೆಳೆಯಿತು.
ಸುತ್ತಲಿನ ದೇಗುಲಗಳಲ್ಲೂ ವಿಶೇಷ ಪೂಜೆ: ದೀಪಾವಳಿ ಅಂಗವಾಗಿ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮಾತ್ರವಲ್ಲದೆ ಏಣಿ ಹನುಮಂತರಾಯ, ಶ್ರೀ ಶಾಂತವೀರಮ್ಮ, ಪವಾಡ ಬಸವೇಶ್ವರ ಸೇರಿದಂತೆ ಸುತ್ತಮುತ್ತಲಿನ ವಿವಿಧ ದೇವಾಲಯಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ದೀಪಾವಳಿಯ ಬೆಳಕಿನೊಂದಿಗೆ ಭಕ್ತಿ, ಸಂಪ್ರದಾಯ, ಜಾನಪದ ಸಂಸ್ಕೃತಿ, ಕನ್ನಡಾಭಿಮಾನ ಹಾಗೂ ಗ್ರಾಮೀಣ ಸೌಹಾರ್ದ ಒಗ್ಗೂಡಿಸಿದ ಬೆಟ್ಟದಪುರದ ದೀವಟಿಗೆ ಉತ್ಸವವು ಈ ಭಾಗದ ಐತಿಹಾಸಿಕ ಧಾರ್ಮಿಕ ಪರಂಪರೆಯ ಶ್ರೀಮಂತಿಕೆಯನ್ನು ಸಾರಿತು.