ದೀಪಾಲಂಕಾರದಿಂದ ಕಂಗೊಳಿಸಿದ ಹುಣಸೂರು

ಶಿವನಸಮುದ್ರ ಜಲಪಾತ ವೈಭವ ಸೃಷ್ಟಿಸಿದ್ದ ಮಂಜುನಾಥ ಆಟೋ ಚಾಲಕ ಸಂಘಕ್ಕೆ ಪ್ರಥಮ ಬಹುಮಾನ
ಹುಣಸೂರು ನಗರದ ಬಸ್ ನಿಲ್ದಾಣ ಮುಂಭಾಗದ ರಸ್ತೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಣ್ಣಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿತು.
ಹುಣಸೂರು ನಗರದ ಬಸ್ ನಿಲ್ದಾಣ ಮುಂಭಾಗದ ರಸ್ತೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಣ್ಣಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿತು.
Published on: 

ಹುಣಸೂರು: ಭಾನುವಾರ ಹುಣಸೂರು ನಗರ ಬಣ್ಣಬಣ್ಣದ ದೀಪಾಲಂಕಾರಗಳೊಂದಿಗೆ ಮಿಂದೆದ್ದಿತು..ಮಿನಿ ದಸರಾ ಎಂದು ಭಾಸವಾಗುವಂತೆ ಕಣ್ಣುಕೋರೈಸಿದ ದೀಪಾಲಂಕಾರಕ್ಕೆ ದಸರಾ ಎಫೆಕ್ಟ್ ಎನ್ನುವುದು ಖಚಿತವಾಯಿತು.

ಕನ್ನಡದ ಕಟ್ಟಾಳುಗಳೆಂದೇ ಗುರುತಿಸಲಾಗಿರುವ ಆಟೋ ಚಾಲಕರ ಸಂಘದ ಸದಸ್ಯರು ಪ್ರಮುಖ ವೃತ್ತಗಳಲ್ಲಿ ಅದ್ದೂರಿ ದೀಪಾಲಂಕಾರದಿಂದ ಅಲಂಕರಿಸುವ ಮೂಲಕ ರಾಜ್ಯೋತ್ಸವದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದರು. ಭಾನುವಾರ ಸಂಜೆ ಹುಣಸೂರು ನಗರ ಜಗಮಗಿಸಿತು. ಎಲ್ಲ ವೃತ್ತಗಳಲ್ಲೂ ತಾಯಿ ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿದ ಆಟೋ ಚಾಲಕರು, ಟ್ಯಾಕ್ಸಿ ಸ್ಟ್ಯಾಂಡ್, ಗೂಡ್ಸ್ ಚಾಲಕರು, ವೈಭವದ ದೀಪಾಲಂಕಾರಗಳೊಂದಿಗೆ ನಾಗರಿಕರನ್ನು ತಮ್ಮತ್ತ ಸೆಳೆದರು. ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಿ ಕನ್ನಡ ಸಿನಿಮಾ ಹಾಡುಗಳು, ಸುಗಮಸಂಗೀತ ಸೇರಿದಂತೆ ಡಾನ್ಸ್ ತರಬೇತಿ ತಂಡಗಳ ನೃತ್ಯ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರಗಳನ್ನು ಅಲಂಕರಿಸಿದ ಪರಿಯನ್ನು ಗಮನಿಸಿದಾಗ ವಾರದ ಹಿಂದೆ ಸಂಪನ್ನಗೊಂಡ ವಿಶ್ವವಿಖ್ಯಾತ ಮೈಸೂರು ದಸರಾ ಎಫೆಕ್ಟ್ ಎಂದು ಜನತೆ ಸಂಭ್ರಮಿಸಿದರು.

ಭಕ್ತಿ-ಭಾವದೊಂದಿಗೆ ಸಂಭ್ರಮ: ಸಂಜೆ 7 ಗಂಟೆಯ ನಂತರ ಇಡೀ ಹುಣಸೂರಿನ ರಸ್ತೆಗಳು ಸಂಚಾರ ಮಾಡಲಾಗದಷ್ಟು ಬಿಜಿಯಾದವು. ಮಹಿಳೆಯರು ಮತ್ತು ಮಕ್ಕಳು ತಂಡೋಪತಂಡವಾಗಿ ನಗರಾದ್ಯಂತ ಸಂಚರಿಸಿ ದೀಪಾಲಂಕಾರಗಳನ್ನು ಕಣ್ತುಂಬಿಕೊಂಡರು. ನಗರದ ಮಾರುತಿ ಪೆಟ್ರೋಲ್ ಬಂಕ್‌ನ ಮಂಜುನಾಥ ಆಟೋ ನಿಲ್ದಾಣದವರು ಸ್ಥಾಪಿಸಿದ್ದ ಶಿವನಸಮುದ್ರ ಜಲಪಾತ, ವಿಶ್ವೇಶ್ವರಯ್ಯ ವೃತ್ತದ ಆಟೋ ಸಂಘದವರು ಸ್ಥಾಪಿಸಿದ್ದ ಬೃಹತ್ ಗುಡಿಯೊಳಗೆ ತಾಯಿ ಭುವನೇಶ್ವರಿ ದೇವಿ ಮತ್ತು ಮಹಾಕಾಳಿ ದೇವರು ಮತ್ತು ಎಚ್.ಡಿ.ಕೋಟೆ ವೃತ್ತದ ಆಟೋ ಸಂಘದ ಹಿಮಾಲಯದ ಅಮರನಾಥ ಶಿವಲಿಂಗ, ಇವೆಲ್ಲದರ ದರ್ಶನ ಪಡೆದ ನಾಗರಿಕರು ಭಕ್ತಿ-ಭಾವದಿಂದ ತಾಯಿಗೆ ನಮಸ್ಕರಿಸಿ ಕುಟುಂಬದೊಂದಿಗೆ ಸೆಲ್ಫಿ ಪಡೆದು ಸಂಭ್ರಮಿಸಿದರು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮವಹಿಸಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಮಂಜುನಾಥ ಆಟೋ ಸಂಘಕ್ಕೆ ಪ್ರಥಮ ಬಹುಮಾನ: ಆಟೋ ನಿಲ್ದಾಣಗಳಲ್ಲಿ ಅಲಂಕಾರ ಆಯೋಜನೆ ಸ್ಪರ್ಧೆಯಲ್ಲಿ ನಗರದ ಮಾರುತಿ ಪೆಟ್ರೋಲ್ ಬಂಕ್ ಬಳಿಯ ಮಂಜುನಾಥ ಆಟೋ ಚಾಲಕರ ಸಂಘವು ಸ್ಥಾಪಿಸಿದ್ದ ಶಿವನಸಮುದ್ರ ಜಲಪಾತ ಪ್ರಥಮ ಸ್ಥಾನದೊಂದಿಗೆ 30 ಸಾವಿರ ರೂ.ಗಳ ನಗದು ಬಹುಮಾನ ಗಳಿಸಿತು. ವಿಶ್ವೇಶ್ವರಯ್ಯ ವೃತ್ತದ ಆಟೋ ಸಂಘವು ದ್ವಿತೀಯ ಸ್ಥಾನ ಹಾಗೂ ಎಚ್.ಡಿ.ಕೋಟೆ ವೃತ್ತದ ಸಂಘವು ತೃತೀಯ ಸ್ಥಾನ ಪಡೆಯಿತು. ಶಾಸಕ ಜಿ.ಡಿ.ಹರೀಶ್‌ಗೌಡ ಸ್ಪರ್ಧೆಯ ನಗದು ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು. ಅಲ್ಲದೆ ಸಂಜೆ ಮುನೇಶ್ವರ ಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ವರ್ಷಾ ಹರೀಶ್‌ಗೌಡ ಫೌಂಡೇಷನ್ ವತಿಯಿಂದ ಪ್ರತಿಯೊಬ್ಬರಿಗೂ ಎರಡೂವರೆ ಸಾವಿರ ರೂ.ಮೌಲ್ಯದ ಡಿಜಿಟಲ್ ವಾಚ್‌ಗಳನ್ನು ಬಹುಮಾನವಾಗಿ ವಿತರಿಸಲಾಯಿತು.