

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ವೀಕ್ಷಣೆಗೆ ಬರುವ ಲಕ್ಷಾಂತರ ಜನರು, ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೂ ಲಗ್ಗೆ ಇಡಲಿದ್ದು, ಇಲ್ಲಿರುವ ವನ್ಯಜೀವಿಗಳ ಕಲರವ ಕಣ್ತುಂಬಿಕೊಂಡು ಸಂಭ್ರಮಿಸಲಿದ್ದಾರೆ.
ನಾಡಹಬ್ಬದ ಸಂದರ್ಭದಲ್ಲಿ ಹರಿದು ಬರುವ ಜನಪ್ರವಾಹವನ್ನು ನಿರ್ವಹಣೆಗಾಗಿ ಮೈಸೂರು ಮೃಗಾಲಯದ ಅಗತ್ಯ ಕ್ರಮ ತೆಗೆದುಕೊಂಡಿದ್ದು, ಭದ್ರತೆಗೆ ಹೆಚ್ಚಿನ ಆದ್ಯತೆ ಕೊಟ್ಟು, ಕಣ್ಗಾವಲು ಇನ್ನಷ್ಟು ಬಿಗಿಗೊಳಿಸಿದೆ.
ನವರಾತ್ರಿ ಮೊದಲ ದಿನದಿಂದ ವಿಜಯದಶಮಿ ವರೆಗೂ ಮೃಗಾಲಯಕ್ಕೆ ಭೇಟಿ ನೀಡುವ ಸಂಖ್ಯೆ ಯಾವಾಗಲೂ ಏರುಗತಿಯಲ್ಲೇ ಇರುತ್ತದೆ. ಆಯುಧ ಪೂಜೆ ದಿನ ಮತ್ತು ಜಂಬೂ ಸವಾರಿ ದಿನ ಮಾತ್ರ ಮೂರು-ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಹೀಗಾಗಿ, ಈ ಸಲವೂ ದಸರಾದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ಅಕ್ಟೋಬರ್ 11ರಿಂದ 21ರವರೆಗೆ ನಡೆಯುವ ದಸರಾದ ಪೂರ್ವಸಿದ್ಧತೆ ಕುರಿತು ಇತ್ತೀಚಿಗೆ ಸಭೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.
ನಿರೀಕ್ಷೆ ಮೀರಿ ಆಗಮಿಸುವ ವೀಕ್ಷಕರಿಗೆ ಅನುಕೂಲ ಕಲ್ಪಿಸಿಕೊಡಲು ಪ್ರವೇಶ ದ್ವಾರದಲ್ಲಿ ಹೆಚ್ಚುವರಿಯಾಗಿ 10 ಟಿಕೆಟ್ ಕೌಂಟರ್ ತೆರೆಯಲಾಗುತ್ತದೆ. ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಿರುವ ಮೃಗಾಲಯ ಆಡಳಿತ ಮಂಡಳಿ, ಸುಲಲಿತವಾಗಿ ಜನರ ಪ್ರವೇಶಕ್ಕೆ ಕಾರ್ಯತಂತ್ರ ರೂಪಿಸಿಕೊಂಡಿದೆ.
ಇಲ್ಲಿಗೆ ಭೇಟಿ ನೀಡುವ ವೀಕ್ಷಕರು, ಪ್ರವಾಸಿಗರು, ಸಾರ್ವಜನಿಕರ ಭದ್ರತೆ ಗಮನ ಕೊಡಲಾಗುತ್ತದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜೇಬುಗಳ್ಳರ ಮೇಲೆಯೂ ನಿಗಾ ವಹಿಸಲಾಗುತ್ತಿದೆ. ಪ್ರಾಣಿಗಳು, ಸಾರ್ವಜನಿಕರ ಹಿತದೃಷ್ಟಿಯಿಂದಲೂ ಬಂದೋಬಸ್ತ್ ಮಾಡಿ ಪ್ರವೇಶ ದ್ವಾರದಲ್ಲಿ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್, ಹ್ಯಾಂಡ್ ಹೆಲ್ಡ್ ಮೇಟಲ್ ಡಿಟೆಕ್ಟರ್ ಅಳವಡಿಸಲಾಗುತ್ತಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ನೆರವು ಪಡೆದುಕೊಳ್ಳಲಾಗುತ್ತಿದೆ. ಅಗತ್ಯ ಪೊಲೀಸ್ ಸಿಬ್ಬಂದಿ, ಭದ್ರತಾ ಉಪಕರಣಗಳನ್ನು ಒದಗಿಸಿಕೊಡಲು ನಗರ ಪೊಲೀಸ್ ಆಯುಕ್ತರಿಗೆ ಪತ್ರ ವ್ಯವಹಾರದ ಮೂಲಕ ಕೋರಿಕೊಳ್ಳಲಾಗಿದೆ. ಜತೆಗೆ, ಅಗ್ನಿ ನಂದಿಸುವ ಯಂತ್ರಕ್ಕೂ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅಗ್ನಿಶಾಮಕ ದಳದೊಂದಿಗೆ ಸಮಾಲೋಚಿಸಲಾಗಿದೆ.
ವೀಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ 3-4 ಸ್ಥಳಗಳಲ್ಲಿ ಪ್ರಥಮ ಚಿಕಿತ್ಸೆ ಸೌಲಭ್ಯ ಕಲ್ಪಿಸಿ, ವೈದ್ಯ-ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತಿದೆ. ಮಾನವ ಸಂಪನ್ಮೂಲವನ್ನು ಆರೋಗ್ಯ ಇಲಾಖೆ ಕಲ್ಪಿಸಿಕೊಡಲಿದೆ. ಜತೆಗೆ ಸಿಸಿ ಕ್ಯಾಮರಾ ಕಣ್ಗಾವಲು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ.
ವಾಕಿಟಾಕಿಗಳು, ಇತ್ಯಾದಿ ಸ್ಕ್ಯಾನರ್ ಅಳವಡಿಕೆ ಮಾಡುತ್ತಿದ್ದು, ನಿಗಾ ಇಡಲು ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಮೃಗಾಲಯದ ಆವರಣದ ಮರಗಳಲ್ಲಿ ಒಣಗಿದ ರೆಂಬೆಗಳನ್ನು ತೆರವುಗೊಳಿಸಲಾಗುತ್ತಿದೆ. ಆರ್‌ಒ ಕುಡಿಯುವ ನೀರಿನ ಘಟಕ, ನೀರಿನ ಟ್ಯಾಂಕ್, ಶೌಚಗೃಹಗಳ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿ ಜನರ ಬಳಕೆ ಸಜ್ಜುಗೊಳಿಸಲಾಗುತ್ತಿದೆ.
ಮೃಗಾಲಯವನ್ನೂ ಸಿಂಗರಿಸಲಾಗುತ್ತಿದ್ದು, ಅವಶ್ಯಕತೆ ಇರುವ ಕಡೆ ಸುಣ್ಣ-ಬಣ್ಣವನ್ನು ಲೇಪಿಸಲಾಗುತ್ತಿದೆ. ದಸರಾಕ್ಕೂ ಮುಂಚೆಯೇ ಸಿವಿಲ್ ಕಾಮಗಾರಿ ಮುಕ್ತಾಯಗೊಳಿಸಲಾಗುತ್ತಿದೆ. ತಾತ್ಕಾಲಿಕವಾಗಿ ಯಾವುದೇ ಕಾಮಗಾರಿ ಕೈಗೊಳ್ಳುವುದನ್ನು ಮುಂದೂಡಲಾಗಿದೆ.
ಮೃಗಾಲಯದ ಪ್ರವೇಶ ದ್ವಾರದಲ್ಲಿ ಹೆಚ್ಚಿನ ಜನರು ಬರುವುದರಿಂದ ಜನರನ್ನು ನಿಯಂತ್ರಿಸಲು 5 ಮೈಕ್‌ಗಳು, ಕ್ಯೂ ಮ್ಯಾನೇಜರ್‌ಗಳನ್ನು ನಿಯೋಜಿಸಲಾಗುತ್ತಿದೆ. ಯುವ ಸಂಘಟನೆಯ ಸದಸ್ಯರು, ಸ್ವಯಂ ಸೇವಕರ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿದೆ.
ಮೃಗಾಲಯದ ಬಯಲುರಂಗಮಂದಿರದಲ್ಲಿ ವನ್ಯಜೀವಿಗಳ ಕುರಿತು ಕನ್ನಡ ಮತ್ತು ಆಂಗ್ಲ ಭಾಷೆಯ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುತ್ತದೆ. ಚಲನಚಿತ್ರಗಳ ಷೆಡ್ಯೂಲ್ ಬೋರ್ಡ್ ಅನ್ನು ಈ ರಂಗಮಂದಿರದ ದ್ವಾರದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಎಲ್ಲ ಪ್ರಾಣಿಮನೆಯ ನಾಮಫಲಕಗಳು, ಮಾಹಿತಿ ಫಲಕಗಳು ಸರಿ ಇರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅವಶ್ಯಕತೆ ಇದ್ದಲ್ಲಿ ಸರಿಪಡಿಸುವ ಕೆಲಸವೂ ನಡೆಯಲಿದೆ. ಮೃಗಾಲಯದ ಆಯ್ದ ಭಾಗದಲ್ಲಿ ದೀಪಾಲಂಕಾರ ಮಾಡಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಪ್ರವೇಶ ದ್ವಾರ, ಎಸ್-4 ಗೇಟ್, ಕಾರಂಜಿಕೆರೆಯ ಪ್ರವೇಶ ದ್ವಾರಕ್ಕೆ ಸುಂದರ ದೀಪಾಲಂಕಾರ ಮಾಡಲಾಗುತ್ತಿದ್ದು, ಇದಕ್ಕಾಗಿ ಸಿಎಸ್‌ಆರ್ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದು ಲಭ್ಯವಾಗದಿದ್ದರೆ ಮೃಗಾಲಯದ ವತಿಯಿಂದ ಈ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ವೀಕ್ಷಕರ ಅನುಕೂಲಕ್ಕಾಗಿ ವಾರದ ರಜೆ ದಿನವಾಗಿರುವ ಮಂಗಳವಾರವೂ ತೆರೆದಿರಲಿದೆ. ಅಕ್ಟೋಬರ್ 13, 20, 27 ಮಂಗಳವಾರಗಳಂದು ಮೃಗಾಲಯ, ಕಾರಂಜಿ ಕೆರೆಯನ್ನು ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತಿದೆ. ದಸರಾದಲ್ಲೂ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದ ರಿಯಾಯಿತಿ ಮುಂದುವರಿಯಲಿದೆ. 1ರಿಂದ 7 ತರಗತಿಯ ವಿದ್ಯಾರ್ಥಿಗಳಿಗೆ 40, 8ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ 50 ರೂ., ಶಿಕ್ಷಕರಿಗೆ 50 ರೂ. ರಿಯಾಯಿತಿ ಶುಲ್ಕ ಯಥಾಸ್ಥಿತಿಯಲ್ಲಿರಲಿದೆ. ಸಾಮಾನ್ಯ ವೀಕ್ಷಕರೊಬ್ಬರಿಗೆ 120 ರೂ., 5ರಿಂದ 12 ವರ್ಷದ ಮಕ್ಕಳಿಗೆ 60 ರೂ. ಪ್ರವೇಶ ಟಿಕೆಟ್ ಇರಲಿದೆ.
ದಸರಾದಲ್ಲಿ ಹೆಚ್ಚಿನ ವೀಕ್ಷಕರ ಭೇಟಿಯೊಂದಿಗೆ ಮೃಗಾಲಯಕ್ಕೆ ಅಧಿಕ ಆದಾಯವೂ ಹರಿದು ಬರುತ್ತಿದೆ. ನವರಾತ್ರಿಯೇ ಅಧಿಕ ಆದಾಯ ಗಳಿಕೆ ಶುಭಕಾಲ. ವರ್ಷದಿಂದ ವರ್ಷಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದು, 2020, 2021ರ ಕರೊನಾ ಕಾಲದಲ್ಲಿ ಮಾತ್ರ ವೀಕ್ಷಕರ ಸಂಖ್ಯೆ ಕಡಿಮೆ ಇದೆ. ಉಳಿದ ವರ್ಷದಲ್ಲಿ ಈ ಸಂಖ್ಯೆ ಲಕ್ಷದಲ್ಲಿ ಇದೆ. ಆದಾಯವೂ ಕಳೆದ ನಾಲ್ಕು ವರ್ಷದಲ್ಲಿ ಒಂದೂರೆ ಕೋಟಿ ದಾಟಿದೆ.
ವರ್ಷ ವೀಕ್ಷಕರ ಸಂಖ್ಯೆ ಆದಾಯ
2016 1.24 ಲಕ್ಷ 70.53 ಲಕ್ಷ ರೂ
2017 1.23 ಲಕ್ಷ 69.17 ಲಕ್ಷ ರೂ
2018 1.53 ಲಕ್ಷ 1.05 ಕೋಟಿ ರೂ
2019 1.65 ಲಕ್ಷ 1.59 ಕೋಟಿ ರೂ
2020 20,217 19.56 ಲಕ್ಷ ರೂ
2021 75,000 77.63 ಲಕ್ಷ ರೂ
2022 1.55 ಲಕ್ಷ 1.53 ಕೋಟಿ ರೂ.
2023 1.65 ಲಕ್ಷ 1.67 ಕೋಟಿ ರೂ.
2024 1.65 ಲಕ್ಷ 1.71 ಕೋಟಿ ರೂ
2025 1.56 ಲಕ್ಷ 1.91 ಕೋಟಿ ರೂ.
ದಸರಾ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಮೃಗಾಲಯ ವೀಕ್ಷಣೆಗೂ ಲಕ್ಷಾಂತರ ಜನರು ಆಗಮಿಸುತ್ತಾರೆ. ವೀಕ್ಷಕರ ದಟ್ಟಣೆ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ, ಟಿಕೆಟ್ ಕೌಂಟರ್‌ಗಳನ್ನು ಹೆಚ್ಚಿಸಿ, ಭದ್ರತೆಗೂ ಆದ್ಯತೆ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ವಿವಿಧ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಪಿ.ಅನುಷಾ ಕಾರ್ಯನಿರ್ವಾಹಕ ನಿರ್ದೇಶಕಿ, ಶ್ರೀ ಚಾಮರಾಜೇಂದ್ರ ಮೃಗಾಲಯ