ದಸರಾ ‘ಪ್ರವಾಸೋದ್ಯಮಕ್ಕೆ ನವೋಲ್ಲಾಸ’

ಒಂಬತ್ತು ದಿನಗಳಲ್ಲಿ ಅರಮನೆಗೆ 1.10 ಲಕ್ಷ ಜನ ಭೇಟಿ ಕಣ್ಮನ ಸೆಳೆದ ದೀಪಾಲಂಕಾರ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮಳೆಯಿಂದ ಫಲಪುಷ್ಪ ಪ್ರದರ್ಶನದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ
ದಸರಾ ‘ಪ್ರವಾಸೋದ್ಯಮಕ್ಕೆ ನವೋಲ್ಲಾಸ’
ಮೈಸೂರು ಅರಮನೆಯಲ್ಲಿ ಜಮಾವಣೆಗೊಂಡಿರುವ ಜನಸ್ತೋಮDasara: ‘A New Vigor for Tourism’
Published on: 

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ವಿಶ್ವವಿಖ್ಯಾತ ದಸರಾ ಮಹೋತ್ಸವ ಮೈಸೂರು ಪ್ರವಾಸೋದ್ಯಮಕ್ಕೆ ನವೋಲ್ಲಾಸ ತುಂಬಿದೆ. ನವರಾತ್ರಿ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ ಸಹಸ್ರಾರು ಪ್ರವಾಸಿಗರ ಭೇಟಿಯೇ ಇದಕ್ಕೆ ಸಾಕ್ಷಿ.

ಕಳೆದ ವರ್ಷಕ್ಕಿಂತ ಈ ಸಲ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದು, ಕಳೆದ ಒಂಬತ್ತು ದಿನಗಳಲ್ಲಿ (ಆಯುಧಪೂಜೆ -ವಿಜಯದಶಮಿಗೆ ರಜೆ) ಅರಮನೆಗೆ 1.10 ಲಕ್ಷ ಜನರು ಭೇಟಿ ನೀಡಿದ್ದಾರೆ. ಮೃಗಾಲಯಕ್ಕೆ 11 ದಿನಗಳಲ್ಲಿ 1.57 ಲಕ್ಷ ಜನರು ಭೇಟಿ ಕೊಟ್ಟಿದ್ದಾರೆ.

ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ವೃದ್ಧಿಯಾಗುತ್ತಿದೆ. ಸಾಮಾನ್ಯವಾಗಿ ಮೈಸೂರು ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯನ್ನು ಆಧರಿಸಿ ಎಷ್ಟು ಜನರು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿರಬಹುದು ಎಂದು ನಿರ್ಧರಿಸಲಾಗುತ್ತದೆ. ಅದರಂತೆ ಈ ಬಾರಿಯು ಮೈಸೂರಿಗೆ ಸುಮಾರು ನಾಲ್ಕೈದು ಲಕ್ಷ ಜನರು ಭೇಟಿ ನೀಡಿರಬಹುದು ಎಂದು ಅಂದಾಜಿಸಲಾಗಿದೆ.

ಈ ಬಾರಿ 9 ದಿನಗಳ ಅವಧಿಯಲ್ಲಿ ಮೈಸೂರು ಅರಮನೆಗೆ 1.10 ಲಕ್ಷ ಜನರು ಭೇಟಿ ನೀಡಿದ್ದಾರೆ. ಇದರಲ್ಲಿ ವಾರಾಂತ್ಯದ ಅ.17ರಂದು 15,075, 18ರಂದು 17,969, 19ರಂದು 16,378 ಜನರು ಭೇಟಿ ಕೊಟ್ಟಿದ್ದಾರೆ. ದಸರಾ ಮಹೋತ್ಸವದ ಉದ್ಘಾಟನೆಯ ದಿನ ಅಂದರೆ ಅ. 11ರಂದು 10,359, 12ರಂದು 9659, 13ರಂದು 9191, 14 ರಂದು 9246, 15ರಂದು 11,227, 16ರಂದು 11,842 ಪ್ರವಾಸಿಗರು ಭೇಟಿ ನೀಡಿದ್ದರು.

ಕಳೆದ ಎರಡು ವರ್ಷಗಳಿಂದ ದಸರಾಗೆ ಎರಡು ದಿನ ಮುನ್ನವೇ ಮೈಸೂರಿಗೆ ಪ್ರವಾಸಿಗರು ಭೇಟಿ ನೀಡಲು ಆರಂಭಿಸಿದ್ದರು. ಆದರೆ ಈ ಸಲ ದಸರಾ ಉದ್ಘಾಟನೆಯ ದಿನ ಅಷ್ಟೊಂದು ಜನಸಂದಣಿ ಕಂಡು ಬಂದಿರಲಿಲ್ಲ. 2025ರ ಸೆ.22ರಂದು ದಸರಾ ಉದ್ಘಾಟನೆಯಾದರೂ ಸೆ.25ರಿಂದ ಪ್ರವಾಸಿಗರು ಗುಂಪು ಗುಂಪಾಗಿ ಅರಮನೆ ನಗರಿ ಕಡೆಗೆ ಬರಲಾರಂಭಿಸಿದ್ದರು. ಆದರೆ ಈ ಬಾರಿ ದಸರಾ ಉದ್ಘಾಟನೆಯಾದ ಎರಡು ದಿನಗಳ ಬಳಿಕ ನಿಧಾನವಾಗಿ ಪ್ರವಾಸಿಗರು ದೌಡಾಯಿಸಿದ್ದಾರೆ.

ಜತೆಗೆ ಅ.17ರ ನಂತರ ಸಾಲು ಸಾಲು ರಜೆ ಬಂದ ಬಳಿಕ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕಲಾರಂಭಿಸಿತು. ಐದು ದಿನಗಳ ಕಾಲ ಪ್ರವಾಸಿಗರ ಪ್ರವಾಹವೇ ಹರಿಯಿತು.

ಯುವ ದಸರಾ ಮೈಸೂರು ನಗರದ ಹೊರಗೆ ಆಯೋಜಿಸಿದ್ದರಿಂದ ನಗರದ ಒಳ ಭಾಗ ಉಂಟಾಗುವ ಒತ್ತಡ ನಿವಾರಣೆ ಆಯಿತು. ಇನ್ನೂ ಸಾರ್ವಜನಿಕರು ಹೆಚ್ಚಾಗಿ ಮುಗಿ ಬೀಳುವಂತೆ ಮಾಡಿದ್ದು ಕಣ್ಮನ ತಣಿಸುವ ವಿದ್ಯುತ್ ದೀಪಾಲಂಕಾರ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಅರಮನೆ ಆವರಣದ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿವೆ.

ಚಾಮುಂಡಿಬೆಟ್ಟದಲ್ಲೂ ಭಕ್ತ ದಂಡು

ನಾಡದೇವಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿರುವ ಭಕ್ತರ ಸಂಖ್ಯೆಯೂ ಅಧಿಕವಾಗಿದೆ.

ಅ.11ರಿಂದ ಅ.22ರ ವರೆಗೆ ನಿತ್ಯ ಸರಾಸರಿ 60 ಸಾವಿರ ಭಕ್ತರು ಚಾಮುಂಡಿಬೆಟ್ಟದ ದೇಗುಲಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ. ಅ.17ರಂದು ನಡೆದ ಕಾಳರಾತ್ರಿ ಉತ್ಸವದ ದಿನ ಬೆಳಗ್ಗೆಯಿಂದ ರಾತ್ರಿವರೆಗೂ ಒಂದು ಲಕ್ಷ ಭಕ್ತರು ಭೇಟಿ ನೀಡಿ ದರ್ಶನ ಪಡೆದಿರುವುದು ವಿಶೇಷ.

ನವರಾತ್ರಿ ವೇಳೆ ಎರಡು ಸಾವಿರ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನವರಾತ್ರಿ ಅಂಗವಾಗಿ ದೇವಾಲಯ ಪ್ರವೇಶಿಸಲು ಯಾವುದೇ ಟಿಕೆಟ್ ವ್ಯವಸ್ಥೆ , ಯಾವುದೇ ಸೇವಾ ವ್ಯವಸ್ಥೆ ಇರಲಿಲ್ಲ ಎಂದು ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಎಂ.ಜೆ.ರೂಪ ತಿಳಿಸಿದ್ದಾರೆ.

ಫ್ಲವರ್ ಶೋಗೆ 3.12 ಲಕ್ಷ ಜನರ ಭೇಟಿ

ದಸರಾ ವಿವಿಧ ಕಾರ್ಯಕ್ರಮಗಳ ಪೈಕಿ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆ ಜನರು ಭೇಟಿ ಕೊಟ್ಟಿರುವುದು ಮತ್ತೊಂದು ವೈಶಿಷ್ಟವಾಗಿದೆ.

ನಜರ್‌ಬಾದ್‌ನಲ್ಲಿರುವ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿ ವರ್ಷದಂತೆ ಉತ್ತಮ ಸ್ಪಂದನೆ ದೊರೆತಿದೆ. ಬರೋಬರಿ 3.12 ಲಕ್ಷ ಜನ ವೀಕ್ಷಣೆ ಮಾಡಿ ಅಲ್ಲಿಯ ಹೂವಿನ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಮೂರು ದಿನ ಮಳೆ ಬಂದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆಯಾಯಿತು. ಇದರಿಂದ ಕಳೆದ ಸಾಲಿಗಿಂತ ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಪ್ರವಾಸಿಗರ ಸಂಖ್ಯೆಯಲ್ಲಿ 50ರಿಂದ 80 ಸಾವಿರ ಕಡಿಮೆಯಾಗಿದ್ದಾರೆ. ಇಲ್ಲವಾದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2 ಲಕ್ಷ ಜನರಿಂದ ಕಂಬಳ ವೀಕ್ಷಣೆ

ದಸರಾ ಮಹೋತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ ಕಂಬಳ ಕ್ರೀಡೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅ.17 ಮತ್ತು 18ರಂದು ನಡೆದ ಎರಡು ದಿನಗಳ ದಸರಾ ಕಂಬಳವನ್ನು ಅಂದಾಜು 2 ಲಕ್ಷ ಜನ ವೀಕ್ಷಿಸಿದ್ದಾರೆ ಎಂದು ಕಂಬಳ ಸಮಿತಿಯ ಆಯೋಜಕರು ತಿಳಿಸಿದ್ದಾರೆ.

ವಿದೇಶಿಯರು ಬಂದಿಲ್ಲ:

ವಿದೇಶಿ ಪ್ರವಾಸಿಗರು ಈ ಸಲ ಬಂದಿಲ್ಲ. ಇದು ವಿದೇಶದ ಪ್ರವಾಸಿಗರ ನಿರಾಸಕ್ತಿ ತೋರುತ್ತಿದೆ.

ನಾಡಹಬ್ಬ ದಸರಾ ಮಹೋತ್ಸವ ಬಂತೆಂದರೆ ವಿವಿಧ ದೇಶಗಳಿಂದ ಮೈಸೂರಿಗೆ ಸಾವಿರಾರು ವಿದೇಶಿ ಪ್ರವಾಸಿಗರು ಲಗ್ಗೆ ಇಡುತ್ತಿದ್ದರು. ಆದರೆ, ಈ ಸಲ ಜಂಬೂಸವಾರಿ ವೀಕ್ಷಣೆಗೂ ವಿದೇಶಿ ಪ್ರವಾಸಿಗರು ಬಂದಿರಲಿಲ್ಲ. ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗೆ ನವರಾತ್ರಿ ವೇಳೆ ಕೇವಲ 919 ಜನ ವಿದೇಶಿ ವಯಸ್ಕ ಪ್ರವಾಸಿಗರು, 18 ವಿದೇಶಿ ಮಕ್ಕಳು ಬಂದಿದ್ದಾರೆ. ಈ ಅಂಕಿ ಅಂಶ ಗಮನಿಸಿದರೆ ಈ ಸಲ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ.

ಸಿನಿ ಕಲಾವಿದರು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ ಜಿಲ್ಲಾಡಳಿತಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

ದಸರಾದಲ್ಲಿ ಚಿತ್ರರಂಗಕ್ಕೆ ತೋರಿದಂತಹ ಸಹಕಾರ, ಸಹಕರಿಸಿದ ರೀತಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮಲ್ಲೆರಿಗೂ ಪ್ರೀತಿ, ಗೌರವ ತೋರಿದ್ದಕ್ಕಾಗಿ ಹಾಗೂ ಯಾವುದೇ ಕುಂದುಕೊರತೆಗಳಿಲ್ಲದೆ ಲಕ್ಷಾಂತರ ಜನರ ನಡುವೆ ಕಲಾವಿದರಿಗೆ, ಗಣ್ಯರಿಗೆ ರಕ್ಷಣೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮಂಡಳಿಯ ಅಧ್ಯಕ್ಷೆ, ನಟಿ ಜಯಮಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net