ದಕ್ಷಿಣ ಕರ್ನಾಟಕ ಅಂಚೆ ಕಚೇರಿ ಮೈಸೂರಿಗೆ ಸ್ಥಳಾಂತರ

ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ಈ ನಿರ್ಧಾರವು ಮೈಸೂರಿನ ಆಡಳಿತಾತ್ಮಕ ಮಹತ್ವ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ
ದಕ್ಷಿಣ ಕರ್ನಾಟಕ ಅಂಚೆ ಕಚೇರಿ ಮೈಸೂರಿಗೆ ಸ್ಥಳಾಂತರ
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್South Karnataka Post Office Relocated to Mysuru
Published on: 

ಮೈಸೂರು: ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿಯನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ.ಸಿಂಧಿಯಾ ಅವರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬರೆದ ಅಧಿಕೃತ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.

ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿಯನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸುವಂತೆ ಕೋರಿ ಸಂಸದ ಯದುವೀರ್ ಅವರು ಆ.7ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಶೀಲಿಸಿರುವ ಅಂಚೆ ಇಲಾಖೆಯು ಆಡಳಿತಾತ್ಮಕ ವ್ಯವಸ್ಥೆಯನ್ನು ಮರು ರಚಿಸುವ ಹಾಗೂ ಸುಗಮ, ಸಮತೋಲಿತ ಆಡಳಿತವನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಪ್ರಸ್ತಾವನೆಯನ್ನು ಪರಿಗಣಿಸಿದೆ.

ಈ ಪ್ರಸ್ತಾವನೆ ಸಮರ್ಥನೀಯವಾಗಿದೆ ಎಂದು ಪರಿಗಣಿಸಲಾಗಿದ್ದು, ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ. ಅಗತ್ಯವಿರುವ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಪ್ರಾದೇಶಿಕ ಕಚೇರಿಗೆ ಸೂಕ್ತ ಕಟ್ಟಡದ ವ್ಯವಸ್ಥೆ ಮಾಡಿದ ನಂತರ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಿರ್ಧಾರವು ಮೈಸೂರಿನ ಆಡಳಿತಾತ್ಮಕ ಮಹತ್ವ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪ್ರಮುಖ ಸರ್ಕಾರಿ ಕಚೇರಿ ಬೆಂಗಳೂರಿನಾಚೆಗೆ ವಿಕೇಂದ್ರೀಕರಿಸುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಪ್ರಯತ್ನಗಳಿಗೆ ಇದು ಪೂರಕವಾಗಲಿದೆ.

ಅಗತ್ಯವಿರುವ ಮುಂದಿನ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿಯನ್ನು ಮೈಸೂರಿಗೆ ಸ್ಥಳಾಂತರಿಸುವ ಕಾರ್ಯವನ್ನು ಸಾಕಾರಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net