ತಗ್ಗಿದ ತಾಯಿ, ಶಿಶು ಮರಣ ಪ್ರಮಾಣ ಇಳಿಕೆ: ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ.ಶಿವರಾಜು ಮಾಹಿತಿ

ಮೈಸೂರು ಆರೋಗ್ಯ ಇಲಾಖೆದಿಂದ ಉತ್ತಮ ಸೇವೆ ಬಣ್ಣನೆ
Maternal and infant mortality rates have declined: Additional Regional Commissioner Dr. P. Shivaraju shares details.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್‌ಎಲ್‌ಎಚ್‌ಪಿಯಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಗಾರದಲ್ಲಿ ಭಿತ್ತಿಪತ್ರ ಅನಾವರಣಗೊಳಿಸಲಾಯಿತು. ಡಾ.ಪಿ.ಶಿವರಾಜು, ಡಾ.ಕೆ.ಮೋಹನ್, ಡಾ.ಮಹಮ್ಮದ್ ಶಿರಾಜ್ ಅಹಮದ್, ಡಾ.ಡಿ.ಬಿ.ನಾಗರಾಜು, ಸರಸ್ವತಿ ಇತರರು ಇದ್ದರು.
Published on: 

ಮೈಸೂರು:ರಾಜ್ಯದಲ್ಲಿಯೇ ಮೈಸೂರು ಆರೋಗ್ಯ ಇಲಾಖೆ ತಂಡವು ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ತಾಯಿ, ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ.ಶಿವರಾಜು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ)ಯಿಂದ ಡಿಎಚ್‌ಒ ಕಚೇರಿಯ ವೈದ್ಯರ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಮಹಿಳೆ ಮತ್ತು ಶಿಶು ಆರೈಕೆ-ಆರೋಗ್ಯ ಸೇವೆಗಳು ಪರಿಣಾಮಕಾರಿ ಅನುಷ್ಠಾನ’ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು

ಆರೋಗ್ಯ ಜಾಗೃತಿ, ಸೇವೆಯಲ್ಲಿ ಮೈಸೂರು ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದರಿಂದ ತಾಯಿ, ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯದಿಂದ ಇತರ ಕಾಯಿಲೆಗಳ ಪ್ರಮಾಣವು ಕಡಿಮೆಯಾಗುತ್ತಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದ್ದು, ಇದನ್ನೆ ವಿಶ್ವಾಸಕ್ಕೆ ತೆಗೆದುಕೊಂಡು, ರಾಜ್ಯದಲ್ಲಿ ಮೈಸೂರು ಮಾದರಿಯಾಗಬೇಕು ಎಂದು ಹೇಳಿದರು.

ನರ್ಸ್ ಸೇವೆಯು ಅತ್ಯುತ್ತಮವಾಗಿದ್ದು. ಯಾವುದೇ ವೃತ್ತಿಯೂ ಮೇಲೂ ಅಲ್ಲ, ಕೀಳು ಅಲ್ಲ, ಅವರ ಹುದ್ದೆಗಳಿಗೆ ಅದರದೇಯಾದ ಗೌರವ ಇದೆ ಎಂದರು.

ನರ್ಸ್‌ಗಳ ಸೇವೆಯನ್ನು ಯಾರು ಪರಿಗಣಿಸುತ್ತಿಲ್ಲ ಎಂಬ ಭಾವ ಇಟ್ಟುಕೊಳ್ಳಬೇಡಿ. ರೋಗಿಯ ಸೇವೆ ಮಾಡುವುದು ಕೂಡ ಪುಣ್ಯದ ಕೆಲಸ. ವೈದ್ಯರು ತಪಾಸಣೆ ಮಾಡಿ, ಬರೆದುಕೊಟ್ಟ ಔಷಧವನ್ನು ಜೋಪಾನವಾಗಿ ಕೊಡುತ್ತಾ ರೋಗಿಗಳನ್ನು ಜೋಪಾನ ಮಾಡುವವರು ನರ್ಸ್‌ಗಳು ಎಂಬುವುದು ಮರೆಯಬಾರದು ಎಂದರು.

ಯಾವುದೇ ಕೆಲಸವು ನಿಂತ ನೀರು ಆಗಬಾರದು. ಅದರಲ್ಲಿ ಹೊಸತನ ಹಾಗೂ ಹೊಸ ಆಲೋಚನೆ ಇದ್ದಾಗ ಬದಲಾವಣೆಯಾಗಲು ಸಾಧ್ಯ. ಸರ್ಕಾರಿ ಸೇವೆಗೆ ಸೇರಿದಾಗ ಹೇಗೋ ಸಂಬಳ ಬರುತ್ತದೆ ಎಂದು ಆರಂಭದಿಂದ ಅಂತ್ಯದವರೆಗೂ ಹಾಗೇ ಸಾಗಬಾರದು ಎಂದರು.

ಜಗತ್ತು ಸಂಶೋಧನೆಗಳ ಮೂಲಕ ಬದಲಾಗುತ್ತಿದೆ. ಬದಲಾವಣೆಗೆ ತಕ್ಕಂತೆ ನಾವು ಬದಲಾವಣೆಯಾಗಬೇಕು. ನಿವೃತ್ತಿಯ ದಿನವೂ ಕೂಡ ಉತ್ಸಹದಿಂದ ಕೆಲಸ ಮಾಡಿ ಹೋಗಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿದರು. ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಧಿಕಾರಿ ಡಾ.ಮಹಮ್ಮದ್ ಶಿರಾಜ್ ಅಹಮ್ಮದ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಡಿ.ಬಿ.ನಾಗರಾಜು, ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net