ತಂಬಾಕಿಗೆ ಸಿಗಲಿದಿಯೇ ಉತ್ತಮ ದರ?

ಇಂದಿನಿಂದ ಹರಾಜು ಪ್ರಕ್ರಿಯೆ
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ.
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ.
Published on: 

ಹುಣಸೂರು : ಪ್ರಸಕ್ತ ಸಾಲಿನ ತಂಬಾಕು ಹರಾಜು ಮಾರುಕಟ್ಟೆ ಅ.23ರಂದು ಆರಂಭಗೊಳ್ಳಲಿದ್ದು, ಎಲ್ ನಿನೋ ಹೊಡೆತದ ಪರಿಣಾಮವಾಗಿ ಭೀಕರ ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದಿರುವ ತಂಬಾಕಿಗೆ ಉತ್ತಮ ದರ ಸಿಗಬಹುದೆಂದು ಬೆಳೆಗಾರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪ್ರಸುತ ಸಾಲಿಗಾಗಿ ರಾಜ್ಯದಲ್ಲಿ ತಂಬಾಕು ಬೆಳೆಯ ಪ್ರಮಾಣವನ್ನು 56 ಮಿಲಿಯನ್ ಕೆಜಿ ಎಂದು ತಂಬಾಕು ಮಂಡಳಿ ಏಪ್ರಿಲ್ ತಿಂಗಳಲ್ಲಿ ನಿರ್ಧರಿಸಿತ್ತು. ತಂಬಾಕು ಕೃಷಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಳೆ ಪ್ರಮಾಣ ದಾಖಲೆಯ ಇಳಿಕೆ ಕಂಡಿದೆ. ಸಿಂಗಲ್ ಬಾರನ್‌ಗೆ ಈವರೆಗೆ ಗರಿಷ್ಠ 1,780 ಕೆಜಿ ಹೊಗೆಸೊಪ್ಪು ಪಡೆಯಲಾಗುತ್ತಿತ್ತು. ಆದರೆ ಈ ಬಾರಿ ಈ ಪ್ರಮಾಣವನ್ನೂ 1,017 ಕೆಜಿಗೆ ಇಳಿಸಲಾಗಿದೆ. ರಾಜ್ಯದಲ್ಲಿ 53 ಸಾವಿರಕ್ಕೂ ಹೆಚ್ಚು ಲೈಸೆನ್ಸ್‌ದಾರ ತಂಬಾಕು ಬೆಳೆಗಾರರಿದ್ದು, ಬೆಳೆ ಪ್ರಮಾಣ ಕಡಿತಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅಲ್ಲದೆ ಕಾರ್ಡ್‌ದಾರರು (ಅನಧೀಕೃತ ಮಾರಾಟಗಾರರು)ಯಾವುದೇ ಕಾರಣಕ್ಕೂ ತಂಬಾಕು ಬೆಳೆಯದಂತೆ ಕ್ರಮ ವಹಿಸಲು ತಂಬಾಕು ಮಂಡಳಿ ಸೂಚಿಸಿತ್ತು.

88 ಮಿಲಿಯನ್ ಕೆಜಿ ನಿರೀಕ್ಷೆ: ಆದರೆ ಮಂಡಳಿ ಏನೇ ನಿರ್ಧಾರ ತೆಗೆದುಕೊಂಡಿದ್ದರೂ ರೈತರು ಮಾತ್ರ ಮಂಡಳಿ ಮಾತನ್ನು ಕೇಳುವ ಗೋಜಿಗೆ ಹೋಗಿಲ್ಲ ಎನ್ನುವುದು ಕಂಡುಬರುತ್ತಿದೆ. ಕಾರಣ ಕಳೆದ ಬಾರಿ ರಾಜ್ಯದಲ್ಲಿ ಒಟ್ಟು 99.38 ಮಿಲಿಯನ್ ಕೆಜಿ ಹೊಗೆಸೊಪ್ಪು ಮಾರಾಟವಾಗಿದ್ದು, ಸರಾಸರಿ 241.67 ರೂ. ದರವನ್ನು ರೈತರು ಪಡೆದಿದ್ದಾರೆ. ಈ ಬಾರಿ 56 ಮಿಲಿಯನ್ ಕೆಜಿ ಹೊಗೆಸೊಪ್ಪು ಮಾತ್ರ ಬೆಳೆಯಬೇಕೆಂದು ಮಂಡಳಿ ಸೂಚಿಸಿದ್ದರೂ ಮಂಡಳಿ ಸಮೀಕ್ಷೆಯಂತೆ ಈಬಾರಿ ಮಾರುಕಟ್ಟೆಗೆ 88 ಮಿಲಿಯನ್ ಕೆಜಿ ಹೊಗೆಸೊಪ್ಪು(10 ಮಿಲಿಯನ್ ಕೆಜಿ ಕಡಿಮೆ)ಬರುವ ನಿರೀಕ್ಷೆಯಿದೆ. ಈ ಪೈಕಿ ಶೇ.29.30ರಷ್ಟು ಫಸ್ಟ್ ಗ್ರೇಡ್ ಹೊಗೆಸೊಪ್ಪು, ಶೇ.48.50ರಷ್ಟು ಮಧ್ಯಮಗುಣಮಟ್ಟ ಹಾಗೂ ಶೇ.25ರಷ್ಟು ಲೋ ಗ್ರೇಡ್ ಹೊಗೆಸೊಪ್ಪು ಬರುವ ನಿರೀಕ್ಷೆಯಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್ ಅಂದಾಜಿಸಿದ್ದಾರೆ.

ತಡವಾಗಿ ಆರಂಭ: ವಾಡಿಕೆಯಂತೆ ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ತಂಬಾಕು ಹರಾಜು ಮಾರುಕಟ್ಟೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಒಂದು ತಿಂಗಳು ತಡವಾಗಿ ಆರಂಭವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಈ ಬಾರಿ ಮಳೆ ಕೊರತೆಯಿಂದಾಗಿ ಗಿಡಗಳು ಮೆಚ್ಯೂರಿಟಿ ಆಗುವ ಕಾಲ ನಿಧಾನವಾಗಿದೆ. ಎಲೆಗಳು ಹಸಿರಾಗಿಯೇ ಇದ್ದು, ಹಳದಿಬಣ್ಣಕ್ಕೆ ತಿರುಗುವುದು ನಿಧಾನವಾಗಿತ್ತು. ಹಾಗಾಗಿ ನಗರದ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಲಹೆಯಂತೆ ಮಂಡಳಿ ಒಂದು ತಿಂಗಳ ಕಾಲ ಮಾರುಕಟ್ಟೆ ಆರಂಭ ಪ್ರಕ್ರಿಯೆ ಮುಂದೂಡಿತ್ತು.

ಆಂಧ್ರದಲ್ಲಿ ಸರಾಸರಿ ದರ 280 ರೂ. ತಲುಪಿದ್ದು, ಗುಣಮಟ್ಟದ ಸೊಪ್ಪಿಗೆ 345 ರೂ. ನೀಡಿದ್ದಾರೆ. ಕರ್ನಾಟಕದಲ್ಲೂ ಇಂತಹುದೇ ದರ ಸಿಗಬೇಕು ಎಂದು ರೈತ ಮುಖಂಡ ಕಟ್ಟೆಮಳಲವಾಡಿ ಅಶೋಕ್ ಆಗ್ರಹಿಸಿದ್ದಾರೆ.

ದಂಡ ಶುಲ್ಕದ ಭೀತಿ: ಕಳೆದ ಸಾಲಿನಲ್ಲಿ ಅಧಿಕೃತ ಬೆಳೆಗಾರರು ಬೆಳೆದಿದ್ದ ಹೆಚ್ಚುವರಿ ಬೆಳೆಗೆ 300 ಕೆಜಿವರೆಗೆ ಶೇ.1, 300-500ಕೆಜಿವರೆಗೆ ಶೇ.2 ಮತ್ತು 500ಕ್ಕೆ ಮೇಲ್ಪಟ್ಟು ಬೆಳೆದವರಿಗೆ ಶೇ.3ರ ದಂಡಶುಲ್ಕ ವಿಧಿಸಿತ್ತು. ಅನಧಿಕೃತ ಬೆಳೆಗಾರರಿಗೆ ಪ್ರತಿ ಕೆಜಿಗೆ 5 ರೂ. ಮತ್ತು ದಂಡ ಶುಲ್ಕ ಶೇ.3ರಷ್ಟು ವಿಧಿಸಿತ್ತು. ಈ ಬಾರಿಯ ಭೀಕರ ಬರಗಾಲದಲ್ಲೂ ಮಂಡಳಿ ದಂಡ ಶುಲ್ಕ ವಿಧಿಸಿದರೆ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಬೆಳೆಗಾರ ಎಸ್.ಬಿ.ಮೂರ್ತಿ.

ಈ ಬಾರಿಯ ತಂಬಾಕು ಹರಾಜು ಮಾರುಕಟ್ಟೆ ಆರಂಭಕ್ಕೆ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಂಡಳಿ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ರೈತರು ತಂಬಾಕು ಬೆಳೆದಿದ್ದಾರೆ. ಗುಣಮಟ್ಟದ ತಂಬಾಕು ಪ್ರಮಾಣ ಬರಗಾಲದಿಂದಾಗಿ ಕುಸಿತ ಕಂಡಿದೆ. ಆದರೂ ಉತ್ತಮ ದರ ಸಿಗಬಹುದು ಎನ್ನುವ ವಿಶ್ವಾಸವಿದೆ. ದಂಡ ಶುಲ್ಕದ ಕುರಿತು ಕೇಂದ್ರ ಸರ್ಕಾರ ನಿರ್ಧರಿಸಲಿದೆ.

I ಎಚ್.ಕೆ.ಗೋಪಾಲ್ ಪ್ರಾದೇಶಿಕ ನಿರ್ವಾಹಕ, ತಂಬಾಕು ಮಂಡಳಿ, ಮೈಸೂರು ಮತ್ತು ಪಿರಿಯಾಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net