

ಮೈಸೂರು: ಮಕ್ಕಳ ಅಶ್ಲೀಲ ವಿಡಿಯೋ ಶೇರ್ ಅಗಿದೆ, ಅಕ್ರಮ ಹಣ ವರ್ಗಾವಣೆ ಅಗಿರುವುದರಿಂದ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಬೆದರಿಸಿದ ಸೈಬರ್ ವಂಚಕ, ನಿವೃತ್ತ ಮಹಿಳಾ ಅಧಿಕಾರಿಗೆ 1.63 ಕೋಟಿ ರೂ. ವಂಚನೆ ಮಾಡಿದ್ದಾನೆ ಎಂದು ಸೆನ್ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ರಾಮಕೃಷ್ಣನಗರ ಇ ಮತ್ತು ಎಫ್ ಬ್ಲಾಕ್ನ 64 ವರ್ಷದ ನಿವೃತ್ತ ಮಹಿಳಾ ಅಧಿಕಾರಿ ಡಿಜಿಟಲ್ ಬಂಧನಕ್ಕೆ ಹೆದರಿ ವಂಚಕರು ಹೇಳಿದಂತೆ ಹಂತ, ಹಂತವಾಗಿ ಹಣ ಕಳುಹಿಸಿ ಮೋಸ ಹೋಗಿದ್ದಾರೆ.
ಮಹಿಳೆಯ ಮೊಬೈಲ್ಗೆ ಕಳೆದ ಸೆ. 4 ರಂದು ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಕರೆ ಮಾಡಿದ ಸೈಬರ್ ವಂಚಕ ಪೊಲೀಸ್ ಸಮವಸ್ತ್ರ ಧರಿಸಿ, ನಾನು ಆಶೋಕ್, ಇಡಿ ಅಧಿಕಾರಿ ಎಂದು ಪರಿಚಯ ಹೇಳಿಕೊಂಡಿದ್ದಾನೆ. ನಿಮ್ಮ ಮೊಬೈಲ್ನಿಂದ ಮಕ್ಕಳ ಅಶ್ಲೀಲ ಪೋಟೋ, ವಿಡಿಯೋ ಶೇರ್ ಅಗಿದೆ. ಇದರಿಂದ 12ರಿಂದ 13 ವರ್ಷದ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾನೆ.
ಮುಂಬಯಿನ ಕೆನರಾ ಬ್ಯಾಂಕ್ನಲ್ಲಿ ನಿಮ್ಮ ಖಾತೆ ಇದ್ದು, ಅದರಿಂದ ಅಕ್ರಮ ಹಣ ವರ್ಗಾವಣೆ ಅಗಿದೆ. ಹಾಗಾಗಿ ನಿಮ್ಮನ್ನು ಬಂಧನಕ್ಕೆ ಆದೇಶವಾಗಿದೆ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.
ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ ನಾನು ಹೇಳಿದ ಖಾತೆಗಳಿಗೆ ಹಣ ಜಮಾ ಮಾಡಬೇಕು. ವಿಚಾರಣೆ ನಡೆಸಿದ ಬಳಿಕ ಆ ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿದ್ದಾನೆ. ವಂಚಕನ ಬೆದರಿಕೆಗೆ ಹೆದರಿದ ಮಹಿಳೆ, ಆತ ಹೇಳಿದ ಬ್ಯಾಂಕ್ ಖಾತೆಗಳಿಗೆ ಸೆ. 10ರಿಂದ ಅ. 9ರ ವರೆಗೆ ಹಂತ, ಹಂತವಾಗಿ 1,63,66,000 ರೂ. ವರ್ಗಾವಣೆ ಮಾಡಿದ್ದಾರೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಈ ವಿಷಯವನ್ನು ಮಹಿಳೆ, ಮಗಳಿಗೆ ತಿಳಿಸಿದ್ದರಿಂದ ವಂಚನೆ ಅಗಿರುವುದು ಗೊತ್ತಾಗಿದೆ. ಈ ಕುರಿತು ಸೆನ್ ಪೊಲೀಸರಿಗೆ ದೂರು ನೀಡಲಾಗಿದೆ.