ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ

ಜ್ಞಾನೇಶ್ ಕುಮಾರ್ ವಜಾಗೊಳಿಸಲು ಪಟ್ಟು ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ
ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ
ಎಸ್‌ಐಆರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮೈವಿವಿ ಸಂಶೋಧಕರ ಸಂಘ, ಎಐಡಿಎಸ್‌ಒ, ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು. ಶಿವಸುಂದರ್, ವರಹಳ್ಳಿ ಆನಂದ್, ಮಹೇಶ್ ಪಿ.ಮರಹಳ್ಳಿ, ಶಿವಶಂಕರ್, ಪ್ರದೀಪ್ ಮುಮ್ಮಡಿ ಇತರರಿದ್ದರು.Protest in Mysuru demanding the removal of Gyanesh Kumar
Published on: 

ಮೈಸೂರು: ಎಸ್‌ಐಆರ್ ರದ್ದುಗೊಳಿಸಬೇಕು, ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ, ಎಐಡಿಎಸ್‌ಒ, ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಸಿಜೆಪಿ ಮುಖಂಡರ ಬಂಧನ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಘೋಷಣೆಗಳನ್ನೂ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಾನಸಗಂಗೋತ್ರಿಯ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಕುವೆಂಪು ಪ್ರತಿಮೆವರೆಗೆ ರ‌್ಯಾಲಿ ನಡೆಸಿದರು. ಚಿಂತಕ ಶಿವಸುಂದರ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಎಸ್‌ಐಆರ್ ಮೂಲಕ ಭಾರತದ 140 ಕೋಟಿ ಜನರ ಪೌರತ್ವದ ಪರೀಕ್ಷೆಗೆ ಒಳಪಡಿಸಿದ್ದು, ಈವರೆಗೂ ನಮ್ಮನ್ನಾಳಿದ ಯಾವ ಸರ್ಕಾರಗಳು ನೀವು ಈ ದೇಶದ ನಾಗರಿಕರಲ್ಲ ಎಂದು ಹೇಳಿರಲಿಲ್ಲ.

ಆದರೆ, ಮೋದಿ ಸರ್ಕಾರವು ಜನರ ಮೇಲೆ ಎಸ್‌ಐಆರ್ ಮೂಲಕ ಎಫ್‌ಐಆರ್ ಹಾಕಿಸುತ್ತಿದೆ ಎಂದು ಆರೋಪಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧವಿಲ್ಲ. ಆದರೆ, ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಸ್ವಾತಂತ್ರೃ ಬಂದು 78 ವರ್ಷ ನಂತರವೂ ನೀವು ಈ ದೇಶದ ನಾಗರಿಕರು ಎಂದು ಸಾಬೀತು ಪಡಿಸಬೇಕಾಗಿದೆ. ಇಲ್ಲವಾದರೆ, ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾಗುತ್ತಿದೆ. ಇದಕ್ಕೆ ವಿರೋಧ ಇದೆ ಎಂದು ಕಿಡಿಕಾರಿದರು.

ಮೈವಿವಿ ಸಂಶೋಧನಾ ವಿದ್ಯಾರ್ಥಿ ವರಹಳ್ಳಿ ಆನಂದ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಮಹಾಸಂಚಿನ ಉದ್ದೇಶ ಈಡೇರಿಬಿಟ್ಟರೆ ಇಡೀ ಒಕ್ಕೂಟ ವ್ಯವಸ್ಥೆ ನಾಶವಾಗಲಿದೆ. ಕೋಮುವಾದಿಗಳು ಸಾರ್ವಭೌಮವಾಗಿ ಅಧಿಕಾರ ಚುಕ್ಕಾಣಿ ಹಿಡಿದು, ಯಾವ ಕಾಲಕ್ಕೂ ಪ್ರಜಾಪ್ರಭುತ್ವ ತಲೆ ಎತ್ತದಂತೆ ಮಾಡಲಿದ್ದು, ಇಡೀ ದೇಶವನ್ನೇ ಒಂದು ಧರ್ಮದಡಿಯಲ್ಲಿ ಪರಾಧೀನತೆಗೆ ತಂದುಬಿಡುತ್ತಾರೆ ಎಂದು ಆರೋಪಿಸಿದರು.

ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್ ಪಿ.ಮರಹಳ್ಳಿ, ಗೌರವಾಧ್ಯಕ್ಷ ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮುಮ್ಮಡಿ, ಶಿವು ಬಂಡಳ್ಳಿ, ನಂದೀಶ್ ಗಾಗೇನಹಳ್ಳಿ, ಅಭಯ, ಚಿರಾಗ್, ಮುತ್ತುರಾಜ್, ಪೂರ್ಣಿಮಾ, ಮಾದೇಶ್, ಮಲ್ಲೇಶ್ ಬಾಚಳ್ಳಿ, ಎಐಡಿಎಸ್‌ಒ ಚಂದ್ರಕಲಾ, ಸುಭಾಷ್, ದೀಪಾ, ಪದ್ಮಶ್ರೀ, ಮಾಜಿ ಮೇಯರ್ ಪುರುಷೋತ್ತಮ್, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಉಮಾ, ಪ್ರಗತಿಪರ ಚಿಂತಕರಾದ ಉಗ್ರನರಸಿಂಹೇಗೌಡ, ಸವಿತಾ ಪ.ಮಲ್ಲೇಶ್, ಪ್ರೊ.ಕಾಳಚನ್ನೇಗೌಡ, ಸಿ.ಹರಕುಮಾರ್, ಪ್ರೊ.ಡಿ.ಆನಂದ್, ಚನ್ನಕೇಶವಮೂರ್ತಿ, ದೇವನೂರು ಪುಟ್ಟನಂಜಯ್ಯ, ಕುಮಾರಸ್ವಾಮಿ, ಚಂದನ್ ಗೌಡ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net