

ಹುಣಸೂರು : ತಾಲೂಕಿನ ಜೀವನದಿ ಲಕ್ಷ್ಮಣತೀರ್ಥ ಕಲುಷಿತಗೊಂಡಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಬೇಸರ ವ್ಯಕ್ತಪಡಿಸಿದರು.
ನಗರದ ಸುಗಮ ಸಂಗೀತ ಪಾಠಶಾಲೆ ಮತ್ತು ಚಿಂತನ ಮಾರ್ಗ ವತಿಯಿಂದ ಬುಧವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪ್ರತಿನಿಧಿಗಳು ನೆಲ, ಜಲ, ಭಾಷೆಯ ರಕ್ಷಣೆ ಕುರಿತು ಭಾಷಣ ಮಾಡುತ್ತಲೆ ಇರುತ್ತಾರೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ನಿರ್ಲಕ್ಷೃ ವಹಿಸುತ್ತಾರೆ. ತಾಲೂಕಿನ ರೈತರ ಮತ್ತು ನಾಗರಿಕರ ಜೀವನದಿ ಐತಿಹಾಸಿಕ ಮಹತ್ವ ಹೊಂದಿರುವ ಕಾವೇರಿ ಉಪನದಿ ಲಕ್ಷ್ಮಣತೀರ್ಥ ಕಲುಷಿತಗೊಂಡು 2 ದಶಕಗಳೇ ಸಂದಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವರ್ಷದ ಹಿಂದೆ ರಾಜ್ಯದ ಅತ್ಯಂತ ಹೆಚ್ಚು ಕಲುಷಿತ ನದಿಗಳನ್ನು ಗುರುತಿಸಿದ್ದು, ಅದರಲ್ಲಿ ಲಕ್ಷ್ಮಣತೀರ್ಥ ಎರಡನೇ ಸ್ಥಾನದಲ್ಲಿದೆ. ನದಿಯ ನೀರು ಕುಡಿಯಲು ಯೋಗ್ಯವಲ್ಲದ ನೀರಾಗಿ ಪರಿವರ್ತಿತವಾಗಿದೆ. ತಾಲೂಕಿನಲ್ಲಿ ಆಡಳಿತ ನಡೆಸಿದ ಈವೆರೆಗಿನ ಎಲ್ಲ ಪ್ರತಿನಿಧಿಗಳು ನದಿ ಉಳಿವಿಗೆ ಭರವಸೆ ನೀಡುತ್ತಲೇ ಇದ್ದಾರೆಯೇ ಹೊರತು ಒಂದೂ ಕಾರ್ಯಗತವಾಗುತ್ತಿಲ್ಲ. ನೆಲ, ಜಲ ಸಂರಕ್ಷಣೆ ಭಾಷಣದಲ್ಲಿ ಮಾತ್ರ ಆಗುತ್ತಿದೆ. ಕನ್ನಡ ಪರ ಸಂಘಟನೆಗಳು ಸಂಘಟಿತ ಹೋರಾಟ ನಡೆಸಿದಲ್ಲಿ ಮಾತ್ರ ನದಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಹರವೆ ಮಹದೇವ್ ಮಾತನಾಡಿ, ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ನಮ್ಮಲ್ಲಿ ಪ್ರೀತಿ, ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕೆಂದು ಕರೆ ನೀಡಿದರು.
ಗಾಯಕರಾದ ಅರ್ಚನಾ ಮತ್ತು ಸಿಂಗೇಶ್ ಮತ್ತವರ ತಂಡ ಸುಗಮ ಸಂಗೀತ ಸೇರಿದಂತೆ ಕನ್ನಡ ಭಾಷೆಯ ಹಿರಿಮೆ ಸಾರುವ ಹಾಡುಗಳನ್ನು ಹಾಡಿ ರಂಜಿಸಿದರು. ವೈದ್ಯ ಡಾ.ಭರತ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ವೈ.ಮಹದೇವ್, ವಿ.ಪಿ.ಸಾಯಿನಾಥ್, ಹನಗೋಡು ನಟರಾಜ್, ಸಿ.ಎಸ್.ಮಹೇಶ್, ಮಹದೇವಮ್ಮ, ಹನುಮಯ್ಯ, ಕುಮಾರಸ್ವಾಮಿ, ಸೋಮಣ್ಣ, ಚಂದ್ರಕಾಂತ್, ಮಿಮಿಕ್ರಿ ಸುಧಾಕರ್, ಕೊಳಗಟ್ಟ ಕೃಷ್ಣ, ರಮೇಶ್, ತುಳಸಿಪ್ರಸಾದ್, ಕಿರಿಜಾಜಿ ಗಜೇಂದ್ರ, ನೇರಳಕುಪ್ಪೆ ಮಹದೇವ್, ಶ್ರೀನಿವಾಸ್, ಶ್ರೀಧರ್ ಇತರರು ಇದ್ದರು.