ಜಾತಿ ತಾರತಮ್ಯ ನಿವಾರಣೆಗೆ ವೇಮುಲ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ

ಬುಡಕಟ್ಟು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಸೂಚನೆ ತಾರತಮ್ಯ ನಿವಾರಣೆಗೆ ಮೇಲುಸ್ತುವಾರಿ ಸಮಿತಿ ರಚನೆ ಮೈವಿವಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ತಾರತಮ್ಯ
ಜಾತಿ ತಾರತಮ್ಯ ನಿವಾರಣೆಗೆ ವೇಮುಲ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಮಾತನಾಡಿದರು. ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಇದ್ದರುStrictly implement the 'Vemula Act' to eliminate caste discrimination.
Published on: 

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳು ಜಾತಿ ತಾರತಮ್ಯ ಎದುರಿಸುತ್ತಿದ್ದು, ರೋಹಿಲ್ ವೇಮುಲ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜತೆಗೆ, ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿ ರಚನೆಗೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ತಿಳಿಸಿದರು.

ಸೋಮವಾರ ಮಧ್ಯಾಹ್ನ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಸ್ವೀಕೃತವಾಗಿರುವ ದೂರುಗಳ ವಿಚಾರಣೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿವಿ ಹಾಸ್ಟೆಲ್‌ಗಳಲ್ಲಿ ಜಾತಿ ತಾರತಮ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ. ಇದು ಎಲ್ಲೆಡೆ ಸರ್ವೇ ಸಾಮಾನ್ಯ ಎನಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ರೋಹಿಲ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ, ಶಿಕ್ಷಣ ಮತ್ತು ಘನತೆಯ ಹಕ್ಕು) ಕಾಯ್ದೆಯನ್ನು ಮೈವಿವಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ತಾಕಿತು ಮಾಡಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಜಿಪಂ ಸಿಇಒ ನೇತೃತ್ವದ ಸಮಿತಿ ಈ ಕುರಿತು ಮೇಲುಸ್ತುವಾರಿ ಮಾಡಬೇಕು. ಸಮಾಜಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಬೆಂಗಳೂರು ವಿವಿ ಇಬ್ಬರು ಪ್ರಾಧ್ಯಾಪಕರು, ಒಬ್ಬ ವಿದ್ಯಾರ್ಥಿನಿ ಸೇರಿದಂತೆ ಮೂವರು ಪಿಎಚ್.ಡಿ ವಿದ್ಯಾರ್ಥಿಗಳು ಈ ಸಮಿತಿಯಲ್ಲಿರುತ್ತಾರೆ. ಇದು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ದೂರುಗಳ ಕುರಿತು ಚರ್ಚೆ ನಡೆಸಿ ವರದಿಯನ್ನು ಕುಲಪತಿಗೆ ಸಲ್ಲಿಸಬೇಕು. ಅವರು ಆಯೋಗಕ್ಕೆ ಸಲ್ಲಿಸಲಿದ್ದಾರೆ. ಇದನ್ನು ಆಧರಿಸಿ ಕ್ರಮ ವಹಿಸಲು ರಾಜ್ಯ ಸರ್ಕಾರಕ್ಕೆ ಆಯೋಗವು ನಿರ್ದೇಶಿಸಲಿದೆ ಎಂದರು.

ಮೈಸೂರು ವಿವಿಯಲ್ಲಿ ಮೂಲಸೌಕರ್ಯ ಕೊರತೆ, ಹಾಸ್ಟೆಲ್ ಅಭಾವ, ವಿದ್ಯಾರ್ಥಿವೇತನ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳು ಸಲ್ಲಿಕೆಯಾಗಿದ್ದು, ಇವುಗಳಿಂದ ಶಿಕ್ಷಣದ ಮಟ್ಟ ಮತ್ತು ಮಕ್ಕಳ ಕಲಿಕಾ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿವಿ ವಿದ್ಯಾರ್ಥಿಗಳು ಹಾಸ್ಟೆಲ್ ಕೊರತೆ ಎದುರಿಸುತ್ತಿದ್ದು, ಒಂದು ಕೊಠಡಿಯಲ್ಲಿ 8-10 ವಿದ್ಯಾರ್ಥಿಗಳಿರುವ ದುಸ್ಥಿತಿ ಬಂದಿದೆ. ರಾಜರ ಕಾಲದ ಕಟ್ಟಡಗಳಲ್ಲಿ ಪರಿವರ್ತನೆ ಮಾಡಲು ಕಷ್ಟಕರವಾಗಿದೆ. ಇದರಿಂದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳೊಂದಿಗೆ ಎಲ್ಲ ವರ್ಗದ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಕನಿಷ್ಠ 2 ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನದ ಅಗತ್ಯ ಇದೆ ಎಂದು ಮೈವಿವಿ ತಿಳಿಸಿದೆ ಎಂದರು.

ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆಂದು ಮೈವಿವಿ ಸ್ವತಃ ಒಪ್ಪಿಕೊಂಡಿದೆ. ಬ್ಯಾಕ್‌ಲಾಗ್ ಹುದ್ದೆಗಳು, ಬೋಧಕರ ಹುದ್ದೆಗಳು ನೇಮಕವಾಗದ ಕಾರಣಕ್ಕೆ ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆ ಹೆಚ್ಚಾಗಿ ಕಲಿಕಾ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ ಎಂಬುದನ್ನೂ ವಿವಿ ತಿಳಿಸಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿರುವ ಕುರಿತು ದೂರು ಬಂದಿದೆ. ಇದಕ್ಕೆ ಅವಕಾಶವೇ ಇಲ್ಲ. ನಿಗದಿತ ಹಣ ಆ ಉದ್ದೇಶಕ್ಕೆ ವಿನಿಯೋಗಿಸುವಂತೆ ಮೈವಿವಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಾಮಾನ್ಯ ವಿದ್ಯಾರ್ಥಿಗಳಷ್ಟೇ ಪರಿಶಿಷ್ಟ ವಿದ್ಯಾರ್ಥಿಗಳಿಂದಲೂ ಶೈಕ್ಷಣಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿದ್ಯಾರ್ಥಿವೇತನದ ಹಣವನ್ನು ಮರು ಹೊಂದಾಣಿಕೆ ಮಾಡಿಕೊಂಡರೂ ಈ ಶುಲ್ಕ ದುಬಾರಿ ಎನಿಸಿದೆ. ಇದನ್ನು ಕಡಿಮೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಆರ್ಥಿಕ ಸಂಕಷ್ಟದಿಂದಾಗಿ 3 ವರ್ಷದಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿಲ್ಲ. ಈ ಕುರಿತು ದೂರು ಸಲ್ಲಿಕೆಯಾದ ಬಳಿಕ ಒಂದು ತಿಂಗಳಿನಲ್ಲಿ ಇದನ್ನು ವಿತರಿಸಲಾಗುವುದು ಎಂದು ಮೈವಿವಿ ಕುಲಪತಿ ಭರವಸೆ ಕೊಟ್ಟಿದ್ದಾರೆ ಎಂದರು.

ಜನವರಿಯಲ್ಲಿ ವರದಿ ಸಲ್ಲಿಕೆ:

ಬರುವ ಜನವರಿ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ತಿಳಿಸಿದರು.

ಕಳೆದ 11 ತಿಂಗಳಿನಲ್ಲಿ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕುಂದುಕೊರತೆ ವಿಚಾರಿಸಲಾಗಿದೆ. ಈ ಸಂದರ್ಭದಲ್ಲಿ ಕಂಡುಬಂದಿರುವ ಸಮಸ್ಯೆಗಳು, ಅವುಗಳಿಗೆ ಪರಿಹಾರ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಅದು ಜಾರಿಗೆ ಕ್ರಮ ವಹಿಸಲಾಗುವುದು ಎಂದರು.

ಅಧಿಕ ಅಂಕ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳನ್ನು ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ 1985ರಲ್ಲಿ ಹೊರಡಿಸಿರುವ ಆದೇಶವನ್ನು ಕಾರ್ಯಗತಗೊಳಿಸಬೇಕು. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡುವ ಊಟ, ವಸತಿ ಹಣವನ್ನು 1800ರಿಂದ 3500 ರೂ.ಗೆ ಹೆಚ್ಚಿಸಬೇಕು. ಪಿಎಚ್.ಡಿ ವಿದ್ಯಾರ್ಥಿಗಳ ಸಂಶೋಧನಾ ಅವಧಿಯನ್ನು 5 ಮತ್ತು 2 ಸೇರಿದಂತೆ 7 ವರ್ಷಕ್ಕೆ ಮಿತಿಗೊಳಿಸಬೇಕು. ಸರ್ಕಾರಿ ವಿವಿಗಳಲ್ಲಿ ಬೋಧಕರ ಭರ್ತಿ, ಹೀಗೆ ವಿವಿಧ ವಿಷಯಗಳು ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು. ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವ ಪ್ರೊ.ಎಸ್.ಜೆ.ಮಂಜುನಾಥ್ ಇನ್ನಿತರರಿದ್ದರು