

ಮೈಸೂರು: ಆದಿಕವಿ ವಾಲ್ಮೀಕಿ ಮನುಕುಲದ ಮಹಾಜ್ಞಾನರತ್ನ ಎಂದು ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಕೆ.ಅಶೋಕ್‌ಕುಮಾರ್ ಬಣ್ಣಿಸಿದರು.
ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.
ರಾಮಾಯಣ ಮಹಾಕಾವ್ಯದಲ್ಲಿ ವಾಲ್ಮೀಕಿ ಬರೆದ 24 ಸಾವಿರ ಶ್ಲೋಕಗಳು ಜಗತ್ತಿಗೆ ಬೆಳಕಾಗಿವೆ.
ಸೀತೆಯ ಸಹನೆ, ಆತ್ಮಗೌರವ, ಲಕ್ಷ್ಮಣನ ಸೇವಾ ಮನೋಭಾವ, ಭರತನ ತ್ಯಾಗ, ಹನುಮಂತನ ಭಕ್ತಿನಿಷ್ಠೆ ಹಾಗೂ ರಾವಣನ ಅಹಂಕಾರ ಇವೆಲ್ಲವೂ ಮಾನವನ ಸ್ವಭಾವದ ವಿಭಿನ್ನ ಮುಖಗಳು. ಇವು ರಾಮಾಯಣದಲ್ಲಿ ಅನಾವರಣಗೊಂಡಿವೆ. ರಾಮಾಯಣದ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಸರ್ವಕಾಲಕ್ಕೂ ಪ್ರಸ್ತುತವಾಗಿರುವ ರಾಮಾಯಣ ಕೇವಲ ರಾಮಚರಿತ್ರೆಯಲ್ಲ, ಅದು ಧರ್ಮ, ತ್ಯಾಗ, ಪ್ರೀತಿ, ಕರ್ತವ್ಯ, ಕುಟುಂಬದ ಮೌಲ್ಯಗಳನ್ನು ಸಾರುವ ಅಮರ ಮಹಾಕಾವ್ಯ ಎಂದರು.
ಉಪಯುಕ್ತವಾಗುವಂತೆ ಬದುಕಿ:
ಹಿರಿಯ ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಮಾತನಾಡಿ, ತಪ್ಪು ದಾರಿಯಲ್ಲಿ ನಡೆದ ವ್ಯಕ್ತಿಯೂ, ನಂತರ ಸತ್ಯ ಮಾರ್ಗವನ್ನು ಹಿಡಿದು ಸಮಾಜಕ್ಕೆ ಉಪಯುಕ್ತವಾಗಿ ಬದುಕಬಹುದು ಎನ್ನುವುದನ್ನು ವಾಲ್ಮೀಕಿ ಮಹರ್ಷಿ ರಾಮಾಯಣದ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮಾದರಿ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವುದನ್ನು ರಾಮಾಯಣವೂ ಅನೇಕ ಉದಾಹರಣೆಗಳ ಮೂಲಕ ನಮಗೆ ಸಂದೇಶಗಳನ್ನು ಸಾರಿದೆ. ರಾಮಾಯಣವು ಕೇವಲ ಯುದ್ಧದ ಕಥೆಯಲ್ಲ, ಅದು ವ್ಯಕ್ತಿಯ ಒಳಗಿನ ಸಂಘರ್ಷ, ಕುಟುಂಬದ ಸಂಬಂಧಗಳು, ಅಧಿಕಾರದ ಜವಾಬ್ದಾರಿ, ಸ್ನೇಹದ ಮೌಲ್ಯ, ವಚನಪಾಲನೆಯನ್ನು ಜಾಗೃತಗೊಳಿಸುವ ಮಹಾನ್ ಗ್ರಂಥ ಎಂದು ಬಣ್ಣಿಸಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸೈಯ್ಯದ್ ಮುಶೀರ್ ಅಹಮ್ಮದ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಿಲ್ಪಾ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಡಿ.ಸಿ.ಉಮೇಶ್, ಭೌತಶಾಸ್ತ್ರ ಉಪನ್ಯಾಸಕಿ ಎಂ.ಕೆ.ರಶ್ಮಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಂ.ಲಾವಣ್ಯಾ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮನೋಜ್ ಕುಮಾರ್, ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಕಾವ್ಯಶ್ರೀ ಆರ್. ರಾವ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಧುರಾ ಇತರರು ಇದ್ದರು.