ಚಿತ್ತಾಪುರವನ್ನು ಚಿಕಾಗೋ ಮಾಡಿದ್ದೀರ?

*ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ * ಎಚ್‌ಡಿಕೆ ‘ಹಳ್ಳಿ ಗುಗ್ಗು’ ಟೀಕೆಗೆ ತಿರುಗೇಟು
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Published on: 

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ‘ಹಳ್ಳಿ ಗುಗ್ಗು’ ಎಂದು ಟೀಕಿಸಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹಳ್ಳಿ ಗುಗ್ಗೂನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ರೈತರ ಪರವಾಗಿ ಕೆಲಸ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ ಅವರು. ಕುಮಾರಸ್ವಾಮಿ ಕೂಡ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಗುರುಮಿಠಕಲ್ ಕ್ಷೇತ್ರದಲ್ಲಿ ನಿಮ್ಮ ತಂದೆಯನ್ನು ಗೆಲ್ಲಿಸಿದ್ದು ಕೂಡ ಹಳ್ಳಿ ಗುಗ್ಗುಗಳೇ. ಚಿತ್ತಾಪುರದಲ್ಲಿ ನಿಮಗೆ ಮತ ಹಾಕಿದವರೂ ಹಳ್ಳಿ ಗುಗ್ಗುಗಳೇ. ಚಿತ್ತಾಪುರವನ್ನು ಚಿಕಾಗೋ ಮಾಡಿದ್ದೀರ?. ಅಲ್ಲಿ ಇರುವುದು ಹಳ್ಳಿ ಗುಗ್ಗುಗಳೇ ಎಂದಾದರೆ, ನೀವು ಬೆಂಗಳೂರು ನಗರದಲ್ಲೇ ಚುನಾವಣೆಗೆ ಸ್ಪರ್ಧಿಸಿ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಕುಟುಕಿದರು.

ಪಿಯುಸಿಯಲ್ಲಿ ಅನುತ್ತೀರ್ಣರಾದ ನೀವು ರಾಜ್ಯದ ಗೃಹ ಸಚಿವರಾಗಿದ್ದೀರಿ. ನಿಮ್ಮ ಮ್ಯಾಜಿಕ್ ಏನೆಂಬುದು ನಮಗೆ ಅರ್ಥವಾಗುತ್ತಿಲ್ಲ. ನಿಮಗೆ ಸಿರಿವಂತ ತಂದೆ ಸಿಕ್ಕಿದ್ದಾರೆ. ಆದರೆ, ಹಳ್ಳಿ ಗುಗ್ಗುಗಳಿಗೆ ಅಂಥ ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್‌ನಲ್ಲಿ ಬರೀ ಕೂಗುಮಾರಿಗಳೇ ತುಂಬಿದ್ದು, ಪ್ರಿಯಾಂಕ್ ಖರ್ಗೆ ಅದರ ಮುಂಚೂಣಿಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞರು. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಲಾಭ ಮಾಡುತ್ತಿವೆ ಎಂದು ಪ್ರಚಾರ ಪಡೆದಿದ್ದರು. ಆದರೆ, ಈಗ ಸಾರಿಗೆ ಸಚಿವರು ಸಂಸ್ಥೆಗಳು 9 ಸಾವಿರ ಕೋಟಿಗೂ ಹೆಚ್ಚು ಸಾಲದಲ್ಲಿವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯದ ಆರ್ಥಿಕ ಸ್ಥಿತಿ ಏನಾಗಿದೆ ? ಎಂದು ಪ್ರಶ್ನಿಸಿದರು.

ರಾಜ್ಯವು ಸುಮಾರು 9.5 ಲಕ್ಷ ಕೋಟಿ ರೂ.ಸಾಲದಲ್ಲಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜನರಿಗೆ ಸತ್ಯ ಹೇಳಬೇಕು. ಸುಳ್ಳು ಭರವಸೆ ನೀಡಿ ಮತ ಪಡೆದಿದ್ದೇವೆ ಎಂದು ಒಪ್ಪಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್ ಸಾಹುಕಾರರಾಗುತ್ತಲೇ ಇದ್ದಾರೆ. ಅವರ ಸಂಪುಟದಲ್ಲಿರುವ ಹಲವರೂ ಸಾಹುಕಾರರಾಗುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಬಡವಾಗುತ್ತಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳಿಗೂ ಶುಲ್ಕ ಹೆಚ್ಚಿಸಲಾಗಿದೆ. ಇದು ಜನರನ್ನು ಸುಲಿಗೆ ಮಾಡುವ ಸರ್ಕಾರ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ದಗಾಕೋರ ಸರ್ಕಾರ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪರಸ್ಪರ ರಾಜಕೀಯವಾಗಿ ಟೋಪಿ ಹಾಕಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಟೋಪಿ ಹಾಕಿ ತಾವು ಸುರಕ್ಷಿತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆಚ್ಚು ಮಾತನಾಡುತ್ತಾರೆ. ಆದರೆ, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆರು ತಿಂಗಳಿಂದ ಶಾಲಾ ನಿರ್ವಹಣಾ ವೆಚ್ಚದ ಹಣ ನೀಡಿಲ್ಲ. ವಿದ್ಯಾರ್ಥಿಗಳಿಗೆ ಶೂಗಳನ್ನೂ ವಿತರಿಸಿಲ್ಲ. ಇತ್ತ ಡಿ.ಕೆ.ಶಿವಕುಮಾರ್ ಅವರ ಕುಟುಂಬ ಮೃಷ್ಟಾನ್ನ ಭೋಜನ ಮಾಡುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರದ ವೈಫಲ್ಯಗಳಿಗೆ ಹೊಣೆ ಹೊತ್ತು ರಾಜೀನಾಮೆ ನೀಡಿ ಚುನಾವಣೆಗೆ ಹೋಗಲಿ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲಪೀಡಿತ ಹಾಗೂ ದಿವಾಳಿ ಸ್ಥಿತಿಗೆ ತಳ್ಳಿದೆ ಎಂದರು.