

ಕೆ.ಆರ್.ನಗರ: ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನ ಪಡೆಯಲು ಸಂಘಕ್ಕೆ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಈ ಮೂಲಕ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಹೈನುಗಾರಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗುವುದರ ಜತೆಗೆ ಕುಟುಂಬದ ನಿರ್ವಹಣೆಗೂ ಅನುಕೂಲವಾಗಲಿದೆ. ಸಂಘದ ಆಡಳಿತ ಮಂಡಳಿ ಹಾಲು ಸರಬರಾಜುದಾರರಿಗೆ ಸಕಾಲದಲ್ಲಿ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕು ಹಾಗೂ ಒಕ್ಕೂಟದಿಂದ ಬರುವ ಸವಲತ್ತುಗಳನ್ನು ವಿತರಣೆ ಮಾಡಬೇಕು ಎಂದು ತಿಳಿಸಿದರು.
ಸಂಘದ ಸದಸ್ಯರಿಗೆ ಒಕ್ಕೂಟದ ವತಿಯಿಂದ ಸಾಕಷ್ಟು ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಿ ಸಂಘದ ಆರ್ಥಿಕಾಭಿವೃದ್ಧಿಗೆ ಪ್ರಯತ್ನಿಸಬೇಕು. ಯಾವುದೇ ಕಾರಣಕ್ಕೂ ಮೈಮುಲ್‌ನ ನಿಯಮ ಮೀರಬಾರದು. ಮುಂದಿನ ಒಂದು ವರ್ಷದೊಳಗೆ ಬಿಎಂಸಿ ಆರಂಭಿಸಲು ಮುಂದಾಗಬೇಕೆಂದು ಮಾಹಿತಿ ನೀಡಿದರು.
ಯುವಕರ ಬೇಡಿಕೆಯಂತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಂಗ ಮಂಟಪ ಮತ್ತು ಬಸ್ ನಿಲ್ದಾಣ ನಿರ್ಮಿಸಲು ಅನುದಾನ ನೀಡಲಾಗಿದೆ. 4.50 ಕೋಟಿ ರೂ.ಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣಕ್ಕೂ ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದರು.
ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ, ಸ್ಥಗಿತಗೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಮರು ಆರಂಭಿಸಲಾಗಿದೆ. ಅದಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೂ ಪ್ರಯತ್ನ ಮಾಡಲಾಗಿದೆ. ಗ್ರಾಮದಲ್ಲಿ ಎಂಸಿಡಿಸಿಸಿ ಬ್ಯಾಂಕಿನ ಶಾಖೆ ತೆರೆಯಲು ನಿರ್ಧರಿಸಿದ್ದು, ಭದ್ರತೆಯುಳ್ಳ ಕಟ್ಟಡ ನೀಡುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಣೆದಾರರ ಸಂಘಗಳ ಅಧ್ಯಕ್ಷ ಎಂ.ರಮೇಶ್, ಸಂಘದ ಅಧ್ಯಕ್ಷ ಕೆ.ಎಲ್.ಲೋಕೇಶ್, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಪ್ರವೀಣ್ ಪತ್ತಾರ್ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಬಾಲಮೂರ್ತಿ, ನಿರ್ದೇಶಕರಾದ ಕೆ.ಜವರೇಗೌಡ, ಕೆ.ಕೆ.ಶಿವಚಂದ್ರು, ಸಿದ್ದೇಗೌಡ, ಜೆ.ಶಿವಣ್ಣೇಗೌಡ, ಕೆ.ಎಸ್.ರವಿಕುಮಾರ್, ಬಲರಾಮ, ರಾಮೇಗೌಡ, ಕಲ್ಪನಾ, ವೀಣಾ, ಯಶೋದಾ, ಗ್ರಾಮದ ಯಜಮಾನರಾದ ಜವರೇಗೌಡ, ಕಾಳೇಗೌಡ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾರ್ಗ ವಿಸ್ತರಣಾಧಿಕಾರಿಗಳಾದ ಕೆ.ಎಸ್.ಪ್ರವೀಣ್, ಅಭಿಷೇಕ್, ಗ್ರಾಪಂ ಪಿಡಿಒ ಉಮೇಶ್ ಇದ್ದರು.