

ಮೈಸೂರು: ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕಾಗಿ ಪರ ಊರಿನಿಂದ ಆಗಮಿಸಿದ್ದ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ.
ಹಾಸನದ ಗೌರವ್(20) ಕೊಲೆಯಾದ ಯುವಕ.
ಕಾವೇರಿ ಬಡಾವಣೆಯಲ್ಲಿ ಗುರುವಾರ ನಸುಕಿನಲ್ಲಿ ಈ ಘಟನೆ ನಡೆದಿದ್ದು, ಈತನ ಸ್ನೇಹಿತ ಅಭಿ(22) ಕೊಲೆ ಮಾಡಿದ ಆರೋಪಿ.
ಗೌರವ್ ನಗರದ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ವೇಳೆ ಸ್ನೇಹಿತರಾಗಿದ್ದವರು ಕಾವೇರಿ ಬಡಾವಣೆಯಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.
ಗುರುವಾರ ರಾತ್ರಿ ಗಣೇಶ ವಿಸರ್ಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೌರವ್ ಕೂಡ ಬುಧವಾರ ರಾತ್ರಿಯೇ ಆಗಮಿಸಿದ್ದ. ಸ್ನೇಹಿತರು ಸೇರಿಕೊಂಡು ತಡರಾತ್ರಿವರೆಗೂ ಪಾರ್ಟಿ ನಡೆಸಿದ್ದರು.
ಈ ವೇಳೆ ಯಾವುದೋ ವಿಚಾರಕ್ಕೆ ಅಭಿ ಹಾಗೂ ಗೌರವ್ ನಡುವೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಅಭಿ, ಬಟನ್ ಚಾಕುವಿನಲ್ಲಿ ಆತನಿಗೆ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಮೇಟಗಳ್ಳಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಅಭಿ, ಅರ್ಜುನ್ ಮತ್ತು ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.