ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿಗೆ ಯುನೆಸ್ಕೋ ಮಾನ್ಯತೆ

ಮೈಸೂರು ವಿ.ವಿ. ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಸಂರಕ್ಷಣೆ
ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿಗೆ ಯುನೆಸ್ಕೋ ಮಾನ್ಯತೆ
ಯುನೆಸ್ಕೋ ಮಾನ್ಯತೆ UNESCO Recognition for Kautilya’s Arthashastra Manuscript
Published on: 

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಸಂರಕ್ಷಿಸಲಾಗಿರುವ ಕೌಟಿಲ್ಯನ ಅರ್ಥಶಾಸ್ತ್ರ ಆಡಳಿತ ಮತ್ತು ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದ ಹಸ್ತಪ್ರತಿಗೆ ಯುನೆಸ್ಕೋ ಮಾನ್ಯತೆ ದೊರೆತಿದೆ.

ಪ್ರಾಚೀನ ತಾಳೆಗರಿ ಹಸ್ತಪ್ರತಿಯಾದ ಕೌಟಿಲ್ಯನ ಅರ್ಥಶಾಸ್ತ್ರ ಕೃತಿಯು ಯುನೆಸ್ಕೋದ ಏಷ್ಯಾ ಮತ್ತು ಪೆಸಿಫಿಕ್ ಪರಂಪರೆ ಸಮಿತಿಯ ನೋಂದಣಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ನ.5ರಂದು ಈ ಮಾನ್ಯತೆಯನ್ನು ಅಧಿಕೃತವಾಗಿ ಪ್ರಮಾಣೀಕರಿಸಲಾಗಿದೆ.

ಶ್ರೀಮಂತ ಹಸ್ತಪ್ರತಿ ಪರಂಪರೆ, ಆಡಳಿತ, ರಾಜಕೀಯ ಚಿಂತನೆ ಮತ್ತು ರಾಜ್ಯಶಾಸ್ತ್ರದ ಬೌದ್ಧಿಕ ಪರಂಪರೆಗೆ ಭಾರತ ನೀಡಿರುವ ಅಮೂಲ್ಯ ಕೊಡುಗೆಗಳಿಗೆ ದೊರೆತ ಮಹತ್ವದ ಅಂತಾರಾಷ್ಟ್ರೀಯ ಮನ್ನಣೆ ಇದಾಗಿದೆ.

ಈ ಗೌರವವು ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ಸಂಶೋಧನಾಲಯ, ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹಸ್ತಪ್ರತಿ ಸಂಶೋಧನಾ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಜತೆಗೆ, ಅಮೂಲ್ಯ ಬೌದ್ಧಿಕ ಪರಂಪರೆ ಸಂರಕ್ಷಿಸಿ, ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಹೆಮ್ಮೆಯ ಮೈಲಿಗಲ್ಲು ಆಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಡಿ.ಪಿ.ಮಧುಸೂದನಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.