ಕೊಟ್ಟಿಗೆ ಸ್ವಚ್ಛವಾಗಿದ್ದರೆ ಕಾಯಿಲೆ ದೂರ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಸಲಹೆ
 ರೈತರಿಗೆ ಕೆಚ್ಚಲು ಬಾವು ನಿರ್ವಹಣೆ ಕಾರ್ಯಾಗಾರ
ಹುಣಸೂರು ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಟೀಟ್ ಡಿಪ್ ಕಪ್ ಕಿಟ್‌ಗಳನ್ನು ವಿತರಿಸಲಾಯಿತು. ಡಾ.ನಾಗರಾಜ್, ಕೆ.ಎಸ್.ಅನಿಲ್‌ಕುಮಾರ್, ಡಾ.ವೆಂಕಟೇಶ್ ಇತರರಿದ್ದರು.
Published on: 

ಹುಣಸೂರು: ಜಾನುವಾರುಗಳ ಕೊಟ್ಟಿಗೆ ಸ್ವಚ್ಛವಾಗಿಡುವುದು ಸೇರಿದಂತೆ ವಿವಿಧ ರೀತಿಯ ಸ್ವಚ್ಛತಾ ಕ್ರಮಗಳನ್ನು ಅನುಸರಿಸುವ ಮೂಲಕ ರಾಸುಗಳಲ್ಲಿ ಕಂಡುಬರುವ ಕೆಚ್ಚಲು ಬಾವು ಕಾಯಿಲೆ ನಿಯಂತ್ರಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಸಲಹೆ ನೀಡಿದರು.

ನಗರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಬುಧವಾರ ಆತ್ಮ ಯೋಜನೆಯ ಕಿಸಾನ್ ಗೋಷ್ಠಿ ಕಾರ್ಯಕ್ರಮದಡಿ ಹೈನುಗಾರಿಕೆ ನೂತನ ತಂತ್ರಜ್ಞಾನ ಮತ್ತು ಕೆಚ್ಚಲು ಬಾವು ನಿರ್ವಹಣೆ ವಿಷಯ ಕುರಿತು ರೈತರಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಹೈನುಗಾರಿಕೆ ಭಾರತೀಯ ಸಮಾಜದಲ್ಲಿ ಪಾರಂಪರಿಕವಾಗಿ ಅನುಸರಿಸಿಕೊಂಡು ಬಂದಿರುವ ಕೃಷಿಯ ಉಪ ಕಸುಬು. ಇಂದು ಭಾರತ ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ಮೊದಲ ದೇಶವಾಗಿದೆ. ಹೀಗಿದ್ದರೂ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಹಾಲಿನ ಉತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕುತ್ತವೆ. ಇದಕ್ಕೆ ಮೂಲ ಕಾರಣ ನಾವು ಉತ್ಪಾದಿಸುವ ಹಾಲಿನಲ್ಲಿ ದೈಹಿಕ ಜೀವಕೋಶ (ಸೊಮಾಟಿಕ್ ಸೆಲ್ ಕೌಂಟ್)ಗಳ ಸಂಖ್ಯೆಯಲ್ಲಿನ ಏರಿಕೆ. ದೈಹಿಕ ಜೀವಕೋಶಗಳ ಹೆಚ್ಚಳದಿಂದಾಗಿ ರಾಸುಗಳಲ್ಲಿ ಕೆಚ್ಚಲು ಬಾವು ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಪಾತ್ರೆ ಚೆಂದವಾಗಿರಲಿ, ಹಾಲು ಮಂದವಾಗಿರಲಿ ಎನ್ನುವ ಗ್ರಾಮೀಣರ ಮಾತನ್ನು ರೈತಾಪಿ ಜನರು ಮರೆತಿರುವುದೇ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಸ್ವಚ್ಛತೆಗೆ ಆದ್ಯತೆ ನೀಡಿ

ವಿವಿಧ ರೀತಿಯ ಬ್ಯಾಕ್ಟೀರಿಯಾದಿಂದ ಕೆಚ್ಚಲು ಬಾವು ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕೆಚ್ಚಲು ಬಾವು ಕಾಯಿಲೆಯಿಂದಾಗಿ ಹಸು ನೀಡುವ ಹಾಲಿನ ಪ್ರಮಾಣದಲ್ಲಿ ಪ್ರತಿದಿನ ಶೇ.10 ಇಳಿಕೆಯಾಗುತ್ತದೆ. ಕಾಯಿಲೆ ಕಾಣಿಸಿಕೊಂಡ 12ರಿಂದ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಅಗತ್ಯವಾಗಿ ನೀಡಲೇಬೇಕು. ಕೆಚ್ಚಲು ಬಾವು ನಿಯಂತ್ರಣಕ್ಕೆ ರಾಸುಗಳನ್ನು ಇರಿಸುವ ಕೊಟ್ಟಿಗೆಗಳಲ್ಲಿ ಶುಚಿತ್ವವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಹಾಲು ಕರೆಯುವವರು ಆರೋಗ್ಯವಂತರಾಗಿರಬೇಕು. ಹಾಲು ಕರೆಯುವ ಮುನ್ನ ಕೆಚ್ಚಲುಗಳನ್ನು ಪೊಟ್ಯಾಷಿಯಂ ಪರಮಾಂಗನೇಟ್ ಕಾಳುಗಳನ್ನು ನೀರಲ್ಲಿ ಬೆರೆಸಿ ತೊಳೆಯಬೇಕು. ನಂತರ ಹತ್ತಿಯ ಅಥವಾ ಮಸ್ಲಿನ್ ಬಟ್ಟೆಗಳಿಂದ ಕೆಚ್ಚಲುಗಳನ್ನು ಒರೆಸಿ ಕೆಚ್ಚಲುಗಳು ಒಣಗಿದ ನಂತರ ಟೀಟ್‌ಡಿಪ್ ಕಪ್ ಸಲಕರಣೆಗಳ ಬಳಕೆಯ ಮೂಲಕ ವಿ-ಡಿಪ್ ರಾಸಾಯನಿಕದೊಳಗೆ ಕೆಚ್ಚಲುಗಳನ್ನು ಮುಳುಗಿಸಬೇಕು. ನಂತರ ಹಾಲು ಕರೆಯುವ ಪ್ರಕ್ರಿಯೆ ಮಾಡಿದಲ್ಲಿ ಕೆಚ್ಚಲುಗಳು ಆರೋಗ್ಯವಾಗಿರಲಿವೆ. ಗುಣಮಟ್ಟದ ಹಾಲು ಪಡೆಯಬಹುದಾಗಿದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್.ಅನಿಲ್‌ಕುಮಾರ್ ಮಾತನಾಡಿ, ರೈತಕುಟುಂಬದ ಆರ್ಥಿಕ ಸಬಲೀಕರಣದಲ್ಲಿ ಕೃಷಿಯ ಉಪಕಸುಬು ಹೈನುಗಾರಿಕೆ ಪ್ರಮುಖ ಪಾತ್ರವಹಿಸಿದೆ. ಹೈನುಗಾರಿಕೆ ನಿರ್ವಹಣೆ ಕುರಿತು ಅಗತ್ಯ ಮಾಹಿತಿಗಳನ್ನು ಇಲಾಖೆಯಿಂದ ರೈತರಿಗೆ ನೀಡಲಾಗುತ್ತಿದೆ ಎಂದರು.

ಕೃಷಿ ಅಧಿಕಾರಿ ಡಾ.ವೆಂಕಟೇಶ್, ಪ್ರಗತಿಪರ ರೈತ ಬಾಲಗಂಗಾಧರ್, ಅಶ್ವಿನಿ, ಕೃಷಿ ಇಲಾಖೆ ಸಿಬ್ಬಂದಿ ಕಾವ್ಯಾ, ರೈತರು ಹಾಜರಿದ್ದರು. ಇದೇ ವೇಳೆ ರೈತರಿಗೆ ಉಚಿತವಾಗಿ ಟೀಟ್‌ಡಿಪ್ ಕಪ್ ಸಲಕರಣೆಗಳನ್ನು ವಿತರಿಸಲಾಯಿತು.

19ಕ್ಕೆ ಹಾಲು ಕರೆಯುವ ಸ್ಪರ್ಧೆ

ಈ ಬಾರಿಯ ದಸರಾ ಉತ್ಸವದಲ್ಲಿ ಅ.19ರಂದು ಮೈಸೂರಿನ ಜೆ.ಕೆ.ಗ್ರೌಂಡ್‌ನಲ್ಲಿ ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಅತಿ ಹೆಚ್ಚು ಹಾಲು ಕರೆಯುವ ರಾಸಿನ ಮಾಲೀಕರಿಗೆ 1 ಲಕ್ಷ ರೂ.ಪ್ರಥಮ ಬಹುಮಾನ ಘೋಷಿಸಲಾಗಿದೆ. ಉತ್ತಮ ರಾಸುಗಳನ್ನು ಹೊಂದಿರುವ ತಾಲೂಕಿನ ರೈತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಡಾ.ನಾಗರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net