

ತಿ.ನರಸೀಪುರ: ತಾಲೂಕಿನ ಬನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಎಂ.ಚಿಕ್ಕಮಾದ ನಾಯಕ (92) ಅವರು ಶುಕ್ರವಾರ ಬೆಳಗ್ಗೆ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ನಿವಾಸದಲ್ಲಿ ನಿಧನರಾದರು.
ಮೂಲತಃ ತಾಲೂಕಿನ ತಲಕಾಡು ಹೋಬಳಿಯ ಕಾಳಿಹುಂಡಿ ಗ್ರಾಮದವರಾದ ಕೆ.ಎಂ.ಚಿಕ್ಕಮಾದ ನಾಯಕ ಅವರು ಕ್ಷೇತ್ರ ಮರು ವಿಂಗಡಣೆಯಿಂದ ನರಸೀಪುರ ಮೀಸಲು ಕ್ಷೇತ್ರದಲ್ಲಿ ವಿಲೀನಗೊಂಡ ಬನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಕುಟುಂಬ ಸಮೇತ ಮೈಸೂರಿನ ಸಿದ್ಧಾರ್ಥ ನಗರದಲ್ಲಿ ವಾಸವಿದ್ದರು.
ಪತ್ನಿ ಜಿಪಂ ಮಾಜಿ ಸದಸ್ಯೆ ಗೌರಮ್ಮ, ಪುತ್ರ ಕೆ.ಸಿ.ಲೋಕೇಶ್ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಪಾರ್ಥಿವ ಶರೀರವನ್ನು ಹುಟ್ಟೂರು ಕಾಳಿಹುಂಡಿ ಗ್ರಾಮಕ್ಕೆ ಅಂತಿಮಯಾತ್ರೆ ಮೂಲಕ ತರಲಾಯಿತು. ಬನ್ನೂರಿನ ಕಾವೇರಿ ಸರ್ಕಲ್ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಕೆಲ ಸಮಯ ಇರಿಸಲಾಗಿತ್ತು. ಬಳಿಕ ಸ್ವಗ್ರಾಮ ಕಾಳಿಹುಂಡಿಯ ಮೃತರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.
ಶಾಸಕ ಡಾ. ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕರಾದ ಎಂ.ಅಶ್ವಿನ್ಕುಮಾರ್, ಡಾ. ಭಾರತೀ ಶಂಕರ್, ಜಿ.ಎನ್.ನಂಜುಂಡಸ್ವಾಮಿ, ಚುಡಾ ಅಧ್ಯಕ್ಷ ರಾಮಚಂದ್ರ ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.