

ಹುಣಸೂರು: ತಾಲೂಕಿನ ಗುರುಪುರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಕುರಿ ಕದಿಯಲು ಬಂದ ಕಳ್ಳರ ಗುಂಪು ಕುರಿಗಾಹಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೋವಿಂದ, ಜುಂಜಣ್ಣ ಮತ್ತು ಭೀಮ ಗಾಯಗೊಂಡ ಕುರಿಗಾಹಿಗಳು.
ಘಟನೆ ವಿವರ: ಕುರಿಗಾಹಿಗಳು ಈ ಭಾಗಕ್ಕೆ ಕುರಿಮಂದೆಯನ್ನು ತಂದು ಮೇವುಣಿಸಿ ರಾತ್ರಿ ವೇಳೆಯಲ್ಲಿ ರೈತರ ಜಮೀನಿನಲ್ಲಿ ಬೀಡುಬಿಟ್ಟು ಬೆಳಗ್ಗೆ ಪ್ರಯಾಣ ಬೆಳೆಸುವುದು ವಾಡಿಕೆಯಾಗಿದಿದೆ.
ಅಂತೆಯೇ, ಹುಣಸೂರು ತಾಲೂಕು ಗುರುಪುರ ಟಿಬೆಟಿಯನ್ ನಿರಾಶ್ರಿತರ ಕ್ಯಾಂಪ್ನ ಐ ವಿಲೇಜ್ನ ಟೆನ್ಜಿನ್ ಎಂಬುವರ ಬಾಳೆ ತೋಟದಲ್ಲಿ ಕುರಿಗಾಹಿಗಳು ಕುರಿಮಂದೆಯೊಂದಿಗೆ ಬೀಡುಬಿಟ್ಟಿದ್ದರು. ಗುರುವಾರ ಮಧ್ಯರಾತ್ರಿ 1.30ರ ವೇಳೆಗೆ ಎರಡು ಬೈಕಿಗಳಲ್ಲಿ ಬಂದ ಮೂವರು ಅಪರಿಚಿತರು ಕುರಿಗಳನ್ನು ಹೊತ್ತೊಯ್ಯಲು ಮುಂದಾಗಿದೆ. ಈ ವೇಳೆ ಗೋವಿಂದ, ಜುಂಜಣ್ಣ ಮತ್ತು ಭೀಮ ಮೂವರು ಹಿಂಬಾಲಿಸಿ ಕಳ್ಳರನ್ನು ಹಿಡಿಯಲು ಯತ್ನಿಸಿದಾಗ ಕಳ್ಳರು ಏಕಾಏಕಿ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಪರಿಣಾಮ ಗೋವಿಂದಪ್ಪ ಮತ್ತು ಜುಂಜಣ್ಣರ ಕಾಲಿಗೆ ತೀವ್ರಗಾಯಗಳಾಗಿ ಕುಸಿದು ಬಿದ್ದಿದ್ದಾರೆ. ಗೋವಿಂದಪ್ಪ ಅವರ ಎರಡೂ ಮಂಡಿಗಳಿಗೆ ತೀವ್ರ ಪೆಟ್ಟು ಬಿದ್ದಿದೆ. ಜುಂಜಣ್ಣ ಅವರ ಎಡಗಾಲು ಮತ್ತು ಮಂಡಿಗೆ ತೀವ್ರಸ್ವರೂಪದ ಗಾಯವಾಗಿದೆ. ಭೀಮನಿಗೆ ಸಣ್ಣಪುಟ್ಟ ಗಾಯವಾಗಿದೆ. ಕುರಿಗಾಹಿಗಳ ಕೂಗಾಟದಿಂದ ಟಿಬೆಟ್ ಕಾಲನಿಯ ಜನರು ಬರುವ ಹೆದರಿಕೆಯಿಂದ ಕಳ್ಳರ ತಂಡ ತಂದಿದ್ದ ಎರಡು ಬೈಕ್ಗಳ ಪೈಕಿ ಒಂದನ್ನು ಅಲ್ಲೇ ಬಿಟ್ಟು ಇನ್ನೊಂದರಲ್ಲಿ ಪರಾರಿಯಾಗಿದ್ದಾರೆ.
ಟಿಬೆಟ್ ಕ್ಯಾಂಪಿನ ಜನರು ಗಾಯಾಳುಗಳಿಗೆ ಹುಣಸೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಎರಡು ಟಗರು ಕದ್ದು ಹೋಗಿದ್ದ ಕಳ್ಳರು ಪುನಃ ಕುರಿಗಳನ್ನು ಕಳ್ಳತನ ಮಾಡಲು ಬಂದಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ಭೇಟಿ: ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ರವಿ, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಇದ್ದರು. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಎಫ್ಎಸ್ಎಲ್ ತಂಡ, ಶ್ವಾನದಳ,ವಿಧಿ ವಿಜ್ಞಾನ ತಂಡ ಮತ್ತು ವಿಧ್ವಂಸಕ ವಿರೋಧಿ ತಪಾಸಣಾ ತಂಡ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.