

ಮೈಸೂರು: ನುಲಿಯ ಚಂದಯ್ಯ ಕಾಯಕಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಿದ್ದರು, ಆತ್ಮಪರವಾದ ಭಕ್ತಿಗಿಂತ ಸಮಾಜಮುಖಿ ಕಾಯಕವೇ ಮಿಗಿಲಾದದ್ದು ಎಂಬುದನ್ನು ಅವರ ಜೀವನದ ಮೂಲಕವೇ ತೋರಿಸಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ನುಲಿಯ ಚಂದಯ್ಯ ಜಯಂತೋತ್ಸವ ಸಮಿತಿಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಕಾಯಕವೇ ಕೈಲಾಸ ಎಂಬ ತತ್ವವನ್ನು ಜಗತ್ತಿಗೆ ಸಾರಿದರು. ಅಂದು ಕಷ್ಟಪಟ್ಟು ದುಡಿದು ತಮ್ಮವರಿಗಿಂತ ಸಮಾಜದ ಇತರರ ಒಳಿತಿಗಾಗಿ ನಿಸ್ವಾರ್ಥವಾಗಿ ಸೇವೆಯಲ್ಲಿಸಿದ ಕಾಯಕ ಯೋಗಿಗಳು ಸೇವೆಯಲ್ಲಿಯೇ ದೇವರನ್ನು ಕಂಡರು ಎಂದರು.
ನುಲಿಯ ಚಂದಯ್ಯ ಅವರ ಕಾಲದ ಕರಕುಶಲತೆ ಮತ್ತು ಶ್ರಮದ ಗೌರವ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು. ತಂತ್ರಜ್ಞಾನ ಎಷ್ಟೇ ಬೆಳೆದರೂ ಶ್ರಮದ ಮೌಲ್ಯ ಕಡಿಮೆಯಾಗಬಾರದು. ಮಹಿಳೆಯರು ಮತ್ತು ಯುವಕರು ಸ್ವಾವಲಂಬಿ ಉದ್ಯೋಗ ಹಾಗೂ ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಶರಣರ ಕಾಯಕ ತತ್ವವು ಕೇವಲ ಹೊಟ್ಟೆಪಾಡಿಗಾಗಿ ದುಡಿಯುವುದಲ್ಲ, ಬದಲಾಗಿ ಸ್ವಾವಲಂಬನೆ ಮತ್ತು ಸಾಮಾಜಿಕ ಸಮಾನತೆಯ ಸಂಕೇತ. ಪ್ರತಿಯೊಬ್ಬರೂ ತಮ್ಮ ಶ್ರಮದ ಒಂದು ಪಾಲನ್ನು ಸಮಾಜದ ಹಿತಕ್ಕಾಗಿ ನೀಡುವ ದಾಸೋಹ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದು ಅಸಂಘಟಿತವಾಗಿರುವ ನಮ್ಮ ಸಮಾಜದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಜೀವಿಸಬೇಕಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಂಘಟನೆ ಅತ್ಯಂತ ಅಗತ್ಯ. ಎಲ್ಲರೂ ವಿದ್ಯಾವಂತರಾಗಬೇಕು, ಸುಸಂಘಟಿತರಾಗಬೇಕು ಎಂದು ಹೇಳಿದರು.
ಹುಣಸೂರು ತಾಲೂಕು ಕಲ್ಲಹಳ್ಳಿಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ.ಎಚ್.ಸತ್ಯನಾರಾಯಣ ಮಾತನಾಡಿ, ನುಲಿಯ ಚಂದಯ್ಯ ಕೇವಲ ಮಾತುಗಳಲ್ಲಿ ಕಾಯಕವನ್ನು ಪ್ರತಿಪಾದಿಸಲಿಲ್ಲ. ಬದಲಿಗೆ ತಮ್ಮ ಪ್ರತ್ಯಕ್ಷ ಜೀವನದಲ್ಲೇ ಕಾಯಕದ ಪಾವಿತ್ರೃತೆಯನ್ನು ಮೆರೆದವರು ಎಂದು ಹೇಳಿದರು.
ಗುರು, ಲಿಂಗ, ಜಂಗಮ ಯಾರೇ ಆದರೂ ಕಾಯಕ ಮಾಡಿಯೇ ಜೀವಿಸಬೇಕು ಎಂಬ ಸಾರ್ವಕಾಲಿಕ ಸತ್ಯವನ್ನು ಜಗತ್ತಿಗೆ ಸಾರಿದರು. ಇಂದಿನ ದಿನಗಳಲ್ಲಿ ಸಮಾಜದಲ್ಲಿ ಶ್ರಮದ ಗೌರವ ಕಡಿಮೆಯಾಗುತ್ತಿದೆ. ಶ್ರಮವಿಲ್ಲದೆ ಶ್ರೇಯಸ್ಸು ಬೇಕು ಎಂಬ ಮನೋಭಾವ ಬೆಳೆಯುತ್ತಿದೆ ಎಂದು ವಿಷಾಧಿಸಿದರು.
ಆದರೆ 12ನೇ ಶತಮಾನದಲ್ಲೇ ಚಂದಯ್ಯನವರು ಸತ್ಯ ಶುದ್ಧ ಕಾಯಕದ ಮೂಲಕ ಬದುಕು ನಡೆಸಿ ದಾಸೋಹ ತತ್ವಕ್ಕೆ ಹೊಸ ಭಾಷ್ಯ ಬರೆದರು ಎಂದು ತಿಳಿಸಿದರು.
ಪರರ ಹಂಗಿನಲ್ಲಿ ಬದುಕದೆ ಸ್ವಂತ ದುಡಿಮೆಯಿಂದ ಬಂದ ಆದಾಯದಲ್ಲೇ ತೃಪ್ತಿಪಟ್ಟು ದಾಸೋಹ ನಡೆಸುವುದು ನಿಜವಾದ ಧರ್ಮ ಎಂದು ತೋರಿಸಿಕೊಟ್ಟರು. ನಾವು ನುಲಿಯ ಚಂದಯ್ಯನವರ ಕಾಯಕ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಅಂಜನ್‌ಕುಮಾರ್, ಶ್ರೀರಂಗಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಎಸ್‌ಎಸ್‌ಎಲ್ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ನುಲಿಯ ಚಂದಯ್ಯ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಟಿ.ಶೇಷಾದ್ರಿ, ಕಾರ್ಯದರ್ಶಿ ನಟರಾಜ್, ಅಖಿಲ ಕರ್ನಾಟಕ ಕೋರವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಉಪಾಧ್ಯಕ್ಷ ವೆಂಕಟಾಚಲ, ಮೈಸೂರು ಜಿಲ್ಲಾ ಕೊರಮ-ಕೊರಚ ಮಹಾಸಂಘದ ಅಧ್ಯಕ್ಷ ಡಿ.ಎನ್.ಮುತ್ತುರಾಜ್, ಕಾರ್ಯಾಧ್ಯಕ್ಷ ನಾಗರಾಜ್ ಎಚ್.ಡಿ.ಕೋಟೆ, ಮುಖಂಡ ತೊಂಡಾಳ್ ನಾಗರಾಜ್ ಇತರರಿದ್ದರು.