

ಹನಗೋಡು: ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ಹಾಗೂ ಮೂಲಸೌಕರ್ಯಗಳ ನಿರ್ಮಾಣವಲ್ಲ. ಒಬ್ಬ ಬಡವನ ಬದುಕಿನಲ್ಲಿ ಬೆಳಕು ಮೂಡಿಸುವುದು, ಮಹಿಳೆಯರಿಗೆ ಸ್ವಾವಲಂಬನೆಯ ದಾರಿ ತೋರಿಸುವುದು, ಮದ್ಯವ್ಯಸನಿಯೊಬ್ಬನನ್ನು ವ್ಯಸನಮುಕ್ತನನ್ನಾಗಿ ಮಾಡುವುದು ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಸರೆಯಾಗುವುದು ನಿಜವಾದ ಅಭಿವೃದ್ಧಿಯಾಗಿದೆ ಎಂದು ಗಾವಡಗೆರೆ ಮಠದ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ತಿಳಿಸಿದರು.
ಹನಗೋಡಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು. ಗ್ರಾಮೀಣ ಜನರ ಬದುಕಿನಲ್ಲಿ ಸಂತೋಷ, ಸ್ವಾವಲಂಬನೆ ಮತ್ತು ನೆಮ್ಮದಿ ನೆಲೆಸಬೇಕು. ಈ ನಿಟ್ಟಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಅಮ್ಮನವರು ಹಾಗೂ ಯೋಜನೆಯ ಯಶಸ್ಸಿಗಾಗಿ ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತರ ಸೇವೆ ಅಭಿನಂದನಾರ್ಹವಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ಮದ್ಯವ್ಯಸನ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದರ ಜತೆಗೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಗೌರವಕ್ಕೂ ಧಕ್ಕೆ ಉಂಟುಮಾಡುತ್ತದೆ. ಮದ್ಯವ್ಯಸನ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ, ಇಡೀ ಕುಟುಂಬವನ್ನೇ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಂಕಷ್ಟಕ್ಕೆ ದೂಡುವ ಸಾಮಾಜಿಕ ಪಿಡುಗಾಗಿದೆ ಎಂದು ಹೇಳಿದರು.
ಅನುಭವ ಹಂಚಿಕೊಂಡ ಶಿಬಿರಾರ್ಥಿಗಳು: ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇನ್ನು ಮುಂದೆ ಮದ್ಯಪಾನದಿಂದ ದೂರವಿದ್ದು ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಸಂಕಲ್ಪ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾಧಿಕಾರಿ ಮಮತಾರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭರತವಾಡಿ ವೆಂಕಟೇಶ್, ಜನಜಾಗೃತಿ ಸಮಿತಿ ಸದಸ್ಯ ದಾ.ರಾ. ಮಹೇಶ್, ನೇರಳಕುಪ್ಪೆ ಮಹದೇವ್, ಯೋಜನಾಧಿಕಾರಿಗಳಾದ ಮುಖೇಶ್, ನಾರಾಯಣಶೆಟ್ಟಿ, ಶಿಬಿರಾಧಿಕಾರಿ ನಾಗೇಂದ್ರ, ಪ್ರಸಿಲ್ಲ, ಯೋಜನೆಯ ಮೇಲ್ವಿಚಾರಕರಾದ ಪುಷ್ಪಾ, ಶೋಭಾ, ನವೀನಕುಮಾರಿ, ಶ್ರುತಿ, ತೇಜಾವತಿ, ಅಣ್ಣಪ್ಪ, ರೇಣುಕಾ, ತೀರ್ಥಮ್ಮ, ಶ್ರೀನಾಥ್, ಭೂಮಿಕಾ ಗ್ರಾಮಸ್ಥರಾದ ಗಣ್ಯರಾದ ಶಿವಕುಮಾರ್, ಮಂಚನಾಯ್ಕ, ಚಿಕ್ಕೇಗೌಡ, ಕುಮಾರ್, ರಾಮಚಂದ್ರ, ಯೋಜನೆಯ ಸಿಬ್ಬಂದಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.