

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚದೇವನಹಳ್ಳಿ ಗ್ರಾಮದ ಶ್ರೀ ಶನೈಶ್ಚರ ದೇವಸ್ಥಾನ ಆವರಣದಲ್ಲಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘದಿಂದ ಗುರುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್.ಕೆ.ವೆಂಕಟೇಶ್ ಮಾತನಾಡಿ, ಕನ್ನಡ ಮಾತೃಭಾಷೆ ತಾಯಿ ಇದ್ದಂತೆ. ಹಲವು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.
ಕನ್ನಡ ರಾಜ್ಯೋತ್ಸವ ಆಟೋ ಸಂಘದವರಿಗೆ ಮಾತ್ರ ಸೀಮಿತವಲ್ಲ. ಈ ನಾಡಿನ ಪ್ರತಿಯೊಬ್ಬ ಕನ್ನಡಿಗರು ನೆಲ ಜಲ ಎಷ್ಟು ಮುಖ್ಯವೋ ಅಷ್ಟೇ ಕನ್ನಡ ಮಾತೃಭಾಷೆಯಾಗಿ ಮಾತನಾಡುವ ಕನ್ನಡ ರಾಜ್ಯೋತ್ಸವ ಹಬ್ಬ ಆಚರಿಸುವುದು ಆದ್ಯ ಕರ್ತವ್ಯವಾಗಬೇಕು ಎಂದರು.
ಕನ್ನಡಾಂಬೆಯ ಭಾವಚಿತ್ರದೊಂದಿಗೆ 20ಕ್ಕೂ ಹೆಚ್ಚು ಆಟೋ ಚಾಲಕರು ಮಂಚದೇವನಹಳ್ಳಿಯ ಬಿ.ಎಂ ರಸ್ತೆಯಿಂದ ಕೊಪ್ಪ ಕಾವೇರಿ ಮಾತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆಡೆಸಿದರು.
ಬೂತನಹಳ್ಳಿ ಸಿದ್ದೇಗೌಡ, ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಶ್, ಚಂದು, ಆಟೋ ಮಾಲೀಕರ ಸಂಘದ ಅಧ್ಯಕ್ಷ ಬಸವರಾಜ್, ಸದಸ್ಯ ಕುಮಾರ್, ಸತ್ಯ, ದಿನೇಶ್ ಇತರರು ಇದ್ದರು.