ಒತ್ತಡದ ಬದುಕಿಗೆ ಪುಸ್ತಕವೇ ಮದ್ದು: ರಂಗಕರ್ಮಿ ಬಿ.ಸುರೇಶ್ ಅಭಿಮತ

ಸಡಗರಕೆ ಸಾವಿಲ್ಲ’ ಬಿಡುಗಡೆ
Books are the remedy for a stressful life: Theatre personality B. Suresh’s opinion
ಮೈಸೂರಿನಲ್ಲಿ ಬಿ.ಸುರೇಶ್ ಅವರ ‘ಸಡಗರಕೆ ಸಾವಿಲ್ಲ’ ಪುಸ್ತಕವನ್ನು ಪುಟಾಣಿ ಮಕ್ಕಳು ಬಿಡುಗಡೆ ಮಾಡಿದರು. ಟಿ. ಸತೀಶ್‌ಜವರೇಗೌಡ, ಹರಿಣಿ, ಕಾರ್ತಿಕ್ ಕೃಷ್ಣ, ನಂದೀಶ್ ಇದ್ದರು.
Published on: 

ಮೈಸೂರು: ನಟ, ನಿರ್ದೇಶಕ, ರಂಗಕರ್ಮಿ ಬಿ.ಸುರೇಶ್ ರಚನೆಯ ‘ಸಡಗರಕೆ ಸಾವಿಲ್ಲ’ ಪುಸ್ತಕ ಬಿಡುಗಡೆ ಹಾಗೂ ಸಂವಾದವನ್ನು ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ನಗರದ ಸಿದ್ಧಾರ್ಥ ಬಡಾವಣೆಯ ವಿನಯ ಮಾರ್ಗದಲ್ಲಿರುವ ಮಲ್ಲಿಗೆ ಬುಕ್ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ. ಸುರೇಶ್, ಒತ್ತಡದ ಬದುಕಿನ ನಡುವೆಯೂ ಸಮಯ ಹೊಂದಿಸಿಕೊಂಡು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಹೊಸ ದೃಷ್ಟಿಕೋನ ಬೆಳೆಯುತ್ತದೆ ಎಂದು ಬಣ್ಣಿಸಿದರು.

‘ಎದೆಗೆ ಬಿದ್ದ ಅಕ್ಷರ’ದಂತಹ ಪುಸ್ತಕ ಓದಿದರೆ ಹೊಸ ಆಲೋಚನಾ ಕ್ರಮ ಬೆಳೆಯುತ್ತದೆ. ಅದಕ್ಕೆ ನಾವು ಏನಾದರೂ ಓದುತ್ತಲೇ ಇರಬೇಕು. ಆದರೆ ನಾವಿಂದು ಮಾನಸಿಕ ಬಿಡುವಿಲ್ಲದ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇವೆ. ಕೈಯಲ್ಲಿ ಒಂದು ಮೊಬೈಲ್ ಇದ್ದರೆ ಸಾಕು. ಹೊರ ಜಗತ್ತನ್ನೇ ಮರೆತು ಬಿಡುತ್ತೇವೆ. ರೀಲ್ಸ್ ನೋಡುವುದರಲ್ಲೋ, ಸ್ಕ್ರಾಲ್ ಮಾಡುವುದರಲ್ಲೋ ಸಂಪೂರ್ಣ ಮುಳುಗಿ ಹೋಗಿಬಿಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಹುಶಿಸ್ತಿನ ರಂಗಭೂಮಿ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಹೊಸ ಚೈತನ್ಯ ಬರುತ್ತದೆ. ಮೊಬೈಲ್ ಲೋಕ ದಾಟಿ ಒಂದು ಉತ್ತಮ ನಾಟಕ, ಸಿನಿಮಾ, ಪುಸ್ತಕ ತಯಾರಿಗಿದೆ ಬನ್ನಿ ಅಂತ ಕರೆದರೂ ಜನ ಬರುತ್ತಿಲ್ಲ. ಇಂದು ಜನರನ್ನು ಬರುವಂತೆ ಮಾಡುವುದು ದೊಡ್ಡ ಸವಾಲಾಗಿದೆ. ಗ್ಲಾಮರಸ್ ಆದಂತಹ ಮೀಡಿಯಾದತ್ತಲೇ ಜನರ ಮನಸ್ಸು ನೆಟ್ಟಿದೆ ಎಂದು ವಿಶ್ಲೇಷಿಸಿದರು.

ಕನ್ನಡದ ಪ್ರಥಮ ಕಾದಂಬರಿಕಾರರಾದ ಗಳಗನಾಥರ ಟ್ರಂಕಿನಲ್ಲಿ ಪುಸ್ತಕಗಳನ್ನು ತುಂಬಿಕೊಂಡು ಊರೂರು ತಿರುಗಿ ಮಾರಾಟ ಮಾಡಿ ಜೀವನ ಸಾಗಿಸಿದರು. ಶಿವರಾಮ ಕಾರಂತ, ಅನಕೃ, ತರಾಸು ಅವರಂತವರು ಕಾದಂಬರಿ ಬರೆದು ಬದುಕುತ್ತಿದ್ದರು. ಎಲ್ಲ ಕಾಲದಲ್ಲೂ ನಾವು ಮಾಡಿದ್ದನ್ನು ಮತ್ತೊಬ್ಬರಿಗೆ ದಾಟಿಸುವುದು ತುಂಬ ಕಷ್ಟವಿದೆ ಎಂದರು.

ಸಾಹಿತಿ ಟಿ. ಸತೀಶ್‌ಜವರೇಗೌಡ ಮಾತನಾಡಿ, ನಾವು ದಿನನಿತ್ಯ ಬೇಡದ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಅದರ ಬದಲಿಗೆ ಒಂದೊಳ್ಳೆಯ ಪುಸ್ತಕ, ಸಿನಿಮಾ, ನಾಟಕದ ಬಗ್ಗೆ ಮಾತಾಡುವುದು ಅಪೇಕ್ಷಣೀಯ. ಸಾಮಾಜಿಕ ಜಾಲತಾಣ ಬಳಸುವ ನಾಲ್ಲರೂ ಕಲೆ, ಸಾಹಿತ್ಯ, ಸಂಗೀತ ಇತ್ಯಾದಿಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಮಲ್ಲಿಗೆ ಬುಕ್‌ಹೌಸ್‌ನ ಸಂಸ್ಥಾಪಕರಾದ ಕಾರ್ತಿಕ್‌ಕೃಷ್ಣ, ಹರಿಣಿ, ಕಾನ್ಕೇವ್ ಪ್ರಕಾಶನದ ನಂದೀಶ್, ಸಾಹಿತಿ ತಲಕಾಡು ನಾಗರಾಜ್ ಇತರರು ಇದ್ದರು.