ಎಐ ಪರಿಣಾಮ ಎದುರಿಸಲು ಶಿಕ್ಷಣ ಕ್ಷೇತ್ರ ಸಜ್ಜಾಗಲಿ

ಸಿಐಡಿ ಪೊಲೀಸ್ ಮಹಾ ನಿರ್ದೇಶಕ ಡಾ.ಪ್ರಣವ್ ಮೊಹಾಂತಿ ಆಶಯ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಪದವಿ ಪ್ರದಾನ
ಎಐ ಪರಿಣಾಮ ಎದುರಿಸಲು ಶಿಕ್ಷಣ ಕ್ಷೇತ್ರ ಸಜ್ಜಾಗಲಿ
ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ 19ನೇ ಪದವೀಧರರ ದಿನಾಚರಣೆThe education sector must gear up to face the impact of AI.
Published on

ಮೈಸೂರು: ಎಲ್ಲ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿರುವ ಕೃತಕಬುದ್ಧಿಮತ್ತೆ(ಎಐ) ತಂತ್ರಜ್ಞಾನವು ಶಿಕ್ಷಣ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಲಿದ್ದು, ಇದಕ್ಕೆ ಸಜ್ಜಾಗಬೇಕಿದೆ ಎಂದು ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ.ಪ್ರಣವ್ ಮೊಹಾಂತಿ ಹೇಳಿದರು.

ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ 19ನೇ ಪದವೀಧರರ ದಿನಾಚರಣೆಯಲ್ಲಿ ಮಾತನಾಡಿದರು.

ಎಐ ತಾಂತ್ರಿಕತೆ ಜನರ ಜೀವನ ಶೈಲಿಯನ್ನೇ ಬದಲಿಸುತ್ತಿದೆ. ಉದ್ಯೋಗದಲ್ಲೂ ಪರಿವರ್ತನೆ ತರುತ್ತಿದೆ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆಂದು ಈಗಲೇ ಹೇಳುವುದು ಕಷ್ಟಕರ. ಈಗಾಗಲೇ ಚೀನಾದಲ್ಲಿ 70-80 ಕೋರ್ಸ್‌ಗಳು ಅಪ್ರಸ್ತುತವಾಗುವ ಮೂಲಕ ಅವುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಇದು ನಿಶ್ಚಿತವಾಗಿಯೂ ಪ್ರಭಾವ ಬೀರಲಿದೆ ಎಂದರು.

ಪದವಿ ಪಡೆದ ಬಳಿಕ ಕಲಿಕೆ ಸ್ಥಗಿತವಾಗಲ್ಲ. ಬಳಿಕವೂ ಜೀವನವಿಡೀ ಕಲಿಕಾ ವಿದ್ಯಾರ್ಥಿಯಾಗಬೇಕು. ಆಗಲೇ ಹೊಸ ಜ್ಞಾನ, ವಿಷಯ, ಕೌಶಲ ಕಲಿಕೆಗೆ ಸಾಧ್ಯವಾಗಿ ಜೀವನಮಟ್ಟ ಇನ್ನಷ್ಟು ಸುಧಾರಣೆಯಾಗುತ್ತದೆ ಎಂದರು.

ಹೆಣ್ಣು ಮಕ್ಕಳಲ್ಲಿ ವಿಶೇಷ ಸಾಮರ್ಥ್ಯ ಇದೆ. ಅದು ಸಮಾಜ, ದೇಶದ ಪ್ರಗತಿಗೆ ಬಳಕೆಯಾಗಬೇಕು. ಪ್ರತಿ ಕ್ಷೇತ್ರಗಳಲ್ಲಿ ಮಹಿಳೆಯರು ಹೆಜ್ಜೆ ಗುರುತು ಮೂಡಿಸುವುದರೊಂದಿಗೆ ಯಶಸ್ಸು ಸಹ ಪಡೆದಿದ್ದಾರೆ. ಆಡಳಿತ, ರಾಜಕೀಯ, ಕೈಗಾರಿಕೆ ಹೀಗೆ ಪ್ರತಿ ರಂಗದಲ್ಲೂ ಸಕ್ರಿಯವಾಗುವ ಮೂಲಕ ಪ್ರಗತಿ ಜವಾಬ್ದಾರಿ ಹೊತ್ತುಕೊಂಡಿದ್ದು, ಇದು ಇನ್ನಷ್ಟು ವಿಸ್ತಾರವಾಗಬೇಕು ಎಂದರು.

ಜ್ಞಾನ, ಸಾಹಿತ್ಯ ತಿಳಿವಳಿಕೆ, ಹೆಚ್ಚಿನ ಶಿಕ್ಷಣ ಪಡೆದಿದ್ದರೂ ಮೌಲ್ಯವಿಲ್ಲದಿದ್ದರೆ ಇದು ಎಲ್ಲವೂ ವ್ಯರ್ಥವೇ. ನೈತಿಕ ಮೌಲ್ಯಕ್ಕೆ ಮೊದಲ ಆದ್ಯತೆ ಕೊಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ನಿಜವಾದ ಯಶಸ್ಸಿಗೆ ಜ್ಞಾನದಷ್ಟೇ ಜೀವನ ಮೌಲ್ಯಗಳು ಮುಖ್ಯ. ತಾಂತ್ರಿಕ ಬೆಳವಣಿಗೆಯಲ್ಲಿ ನಿರಂತರವಾಗಿ ತಮ್ಮನ್ನು ನವೀಕರಿಸಿಕೊಳ್ಳಬೇಕು ಎಂದರು.

ಶಿಕ್ಷಣವನ್ನು ಸಮಾಜದ ಹಿತಕ್ಕಾಗಿ ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಮೌಲ್ಯ ನಿರ್ಧಾರವಾಗುತ್ತದೆ. ಬದುಕಿನಲ್ಲಿ ಸೋಲು-ಗೆಲುವಿನ ಅವಿಭಾಜ್ಯ ಒಡನಾಡಿ. ವಿದ್ಯಾರ್ಥಿಗಳು ಸೋಲೆ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯಬೇಕು. ಪ್ರತಿಭೆಗೆ ನಿರಂತರ ಪರಿಶ್ರಮ ಮತ್ತು ಬದ್ಧತೆ ಇದ್ದಾಗ ಮಾತ್ರ ಯಶಸ್ಸು ಎಂಬುದು ದೊರೆಯುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಶಿಸ್ತುಬದ್ಧವಾದ ಕಲಿಕೆ, ನೈತಿಕ ಮೌಲ್ಯ ಹಾಗೂ ಮಹಿಳಾ ಸಬಲೀಕರಣವು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅವರು ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಪದವೀಧರರಾದ ಪದ್ಮಪ್ರಿಯಾ, ಸಹನಾ, ಎಂ.ಲಿಖಿತಾ, ಐಶ್ವರ್ಯಾ, ಬಿ.ಎಸ್.ಪ್ರಗತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಪ್ರಾಚಾರ್ಯ ಡಾ.ರೇಚಣ್ಣ, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ. ಸ್ವಾಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ:

2025-26ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಪದವಿ ಪಡೆದ 492 ವಿದ್ಯಾರ್ಥಿನಿಯರಲ್ಲಿ 15 ವಿದ್ಯಾರ್ಥಿನಿಯರು ಪದಕ ಹಾಗೂ ನಗದು ಬಹುಮಾನ ಪಡೆದರು. 306 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ, 186 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸ್ನಾತಕೋತ್ತರ ವಿಭಾಗದ 37 ವಿದ್ಯಾರ್ಥಿನಿಯರಲ್ಲಿ 6 ವಿದ್ಯಾರ್ಥಿನಿಯರು ಪದಕ ಹಾಗೂ ನಗದು ಬಹುಮಾನ ಪಡೆದರು. 14 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ, 23 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಸ್.ಎಂ.ಸುಮಾ ಅವರು ಜೆಎಸ್‌ಎಸ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ಕೈಗೊಂಡು ಪಿಎಚ್.ಡಿ ಪದವಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net