ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ

ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಆಶೀರ್ವಚನ
ಸಾಮೂಹಿಕ ಸತ್ಯನಾರಾಯಣ ಪೂಜೆ
ಎಚ್.ಡಿ.ಕೋಟೆ ಪಟ್ಟಣದ ಕನಕ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹನುಮಂತನಗರ ವಲಯ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಮಹದೇವ ಸ್ವಾಮೀಜಿ ಉದ್ಘಾಟಿಸಿದರು. ವಿಜಯಕುಮಾರ್ ನಾಗನಾಳ, ನಟರಾಜು, ವೇಣುಗೋಪಾಲ್, ನಾಗಣ್ಣ, ಮಹೇಶ್ವರಿ ನಟರಾಜು, ಕುಮಾರಿ ಇದ್ದರು.
Published on: 

ಎಚ್.ಡಿ. ಕೋಟೆ: ಸಾಧು-ಸಂತರು ಹಾಗೂ ಮಹಾತ್ಮರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಬದುಕಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಬಿಡುಗಲಿನ ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕನಕ ಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹನುಮಂತನಗರ ವಲಯ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯ ಜೀವನವೆಂದರೆ ಕೇವಲ ತನ್ನನ್ನು ತಾನು ರಕ್ಷಿಸಿಕೊಂಡು ಬದುಕುವುದಲ್ಲ. ಸಮಾಜದಲ್ಲಿರುವ ಇತರರಿಗೂ ನೆರವಾಗಿ, ಅವರ ಕಷ್ಟಗಳಿಗೆ ಸ್ಪಂದಿಸಿ, ಪರಸ್ಪರ ಸಹಕಾರದೊಂದಿಗೆ ಬದುಕುವುದೇ ನಿಜವಾದ ಮಾನವೀಯತೆ ಎಂದು ಹೇಳಿದರು.

ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯೂ ಇತರರಿಗೆ ಉಪಯೋಗವಾಗುವ ರೀತಿಯಲ್ಲಿ ಬದುಕುತ್ತದೆ. ಹಸು ತಾನು ಸೇವಿಸುವ ಆಹಾರದಿಂದ ಉತ್ಪತ್ತಿಯಾಗುವ ಹಾಲನ್ನು ಇತರರಿಗೆ ನೀಡುತ್ತದೆ. ಮರ ತಾನು ಬೆಳೆದ ಹಣ್ಣುಗಳನ್ನು ಇತರರಿಗೆ ನೀಡುತ್ತದೆ. ಅದೇ ರೀತಿ ಮನುಷ್ಯನು ತನ್ನಲ್ಲಿರುವ ಜ್ಞಾನ, ಸಂಪತ್ತು, ಶಕ್ತಿ ಹಾಗೂ ಸಮಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು ಬದುಕಬೇಕು ಎಂದು ಆಶೀರ್ವಚನ ನೀಡಿದರು.

ಧಾರ್ಮಿಕ ಆಚರಣೆಗಳು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಮನುಷ್ಯನಲ್ಲಿ ಉತ್ತಮ ಗುಣ, ಪರೋಪಕಾರದ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕು. ಸತ್ಯ, ಧರ್ಮ, ಮಾನವೀಯತೆ ಮತ್ತು ಪರಸ್ಪರ ಸಹಕಾರದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಸಂಸ್ಥೆಯ ಜಿಲ್ಲಾ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಮಹಾತ್ಮ ಗಾಂಧಿ ಕಂಡಿದ್ದ ಗ್ರಾಮಾಭಿವೃದ್ಧಿ ಹಾಗೂ ಸಾಮಾನ್ಯ ಜನರ ಆರ್ಥಿಕ ಸಬಲೀಕರಣದ ಕನಸನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಾಕಾರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಗಾಂಧಿ ಅವರು ಮಧ್ಯಮ, ಹಿಂದುಳಿದ ವರ್ಗದ ಜನರು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕು ಎಂಬ ಆಶಯ ಹೊಂದಿದ್ದರು. ಈ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸುಮಾರು 44 ವರ್ಷಗಳ ಹಿಂದೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವಸಹಾಯ ಸಂಘಗಳನ್ನು ರಚಿಸಿ ಗ್ರಾಮೀಣ ಜನರನ್ನು ಒಗ್ಗೂಡಿಸುವ ಕಾರ್ಯ ಆರಂಭಿಸಲಾಯಿತು ಎಂದರು.

ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರು ಸೇರಿದಂತೆ ಗ್ರಾಮೀಣ ಕುಟುಂಬಗಳಲ್ಲಿ ಉಳಿತಾಯದ ಮನೋಭಾವ ಬೆಳೆದಿದೆ. ಸ್ವಾವಲಂಬನೆ ಸಾಧಿಸಲು ಅವಕಾಶ ದೊರೆತಿದೆ. ಪ್ರಸ್ತುತ 55 ಲಕ್ಷ ಕುಟುಂಬಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿವೆ ಎಂದು ತಿಳಿಸಿದರು.

ಎಚ್.ಡಿ.ಕೋಟೆ ತಾಲೂಕಿನಲ್ಲಿಯೂ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ಆರ್ಥಿಕ ಶಿಸ್ತು ಹಾಗೂ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ತಾಲೂಕಿನ ಸ್ವಸಹಾಯ ಸಂಘಗಳು ಇದುವರೆಗೆ ಸುಮಾರು 25 ಕೋಟಿ ರೂ.ಹಣವನ್ನು ಉಳಿತಾಯದ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡಿವೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ 8 ಅತಿಥಿ ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಪೂಜಾ ಸಮಿತಿ ಅಧ್ಯಕ್ಷ ನಟರಾಜು, ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ನಾಗಣ್ಣ, ಕನ್ನಡ ಪ್ರಮೋದ್, ಜೆ.ಪಿ.ಶಿವರಾಜು, ಸ್ವಾಮಿ, ನಾಗರಾಜು, ವಿನಯ ಭಜರಂಗಿ, ಶ್ರೀಕಾಂತ್, ರಮೇಶ್, ನಾಗರಾಜು, ಪ್ರಶಾಂತ್, ಸೃಜಂತ್, ಮಹೇಶ್ವರಿ ನಟರಾಜು, ಕುಮಾರಿ, ಅರ್ಚಕ ರಘುಕೀರ್ತಿ, ನಾಗೇಗೌಡ, ಸೇವಾ ಪ್ರತಿನಿಧಿ ಗುಣಶ್ರೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net