ಮೈಸೂರು: ಎಸ್‌ಐಆರ್ ಪ್ರಕ್ರಿಯೆ ಮೂಲಕ ಆರ್‌ಎಸ್‌ಎಸ್ ನಿರ್ದೇಶನದಂತೆ ಮತದಾರರ ಹೆಸರನ್ನು ಡಿಲೀಟ್ ಮಾಡುವ ಸಂಚು ನಡೆದಿದೆ. ಬಿಜೆಪಿ ಮಾತೃ ಸಂಸ್ಥೆಯೇ ಇದಕ್ಕೆಲ್ಲ ಕಾರಣ ಎಂದು ಶಾಸಕ ತನ್ವೀರ್ ಸೇಠ್ ದೂರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಕಚೇರಿಯಲ್ಲೇ ನಮೂನೆ-7 ಮುದ್ರಣವಾಗುತ್ತಿದೆ. ಈ ಕಚೇರಿಯಿಂದ ನೇರವಾಗಿ ಬಿಜೆಪಿಯವರ ಕೈಗೆ ಇದು ತಲುಪಿದೆ ಎಂದು ಆರೋಪಿಸಿದರು.
ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಇದುವರೆಗೆ 10 ಸಾವಿರ ಮತಗಳ ಡಿಲೀಟ್‌ಗೆ ಅರ್ಜಿ ಹಾಕಿದ್ದಾರೆ. ಕ್ಷೇತ್ರಕ್ಕೆ, ವಾರ್ಡ್‌ಗೆ ಸಂಬಂಧ ಪಡದೇ ಇರುವವರೇ ಅರ್ಜಿ ಹಾಕಿದ್ದಾರೆ. ಪ್ರತಿ ಬೂತ್‌ನಲ್ಲಿ 100-150 ಅರ್ಜಿ ಹಾಕಲಾಗಿದೆ. ದಲಿತರು, ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಆಕ್ಷೇಪಣೆ ಬರೆಯಲಾಗಿದೆ ಎಂದು ಕಿಡಿಕಾರಿದರು.
ಚಿಕ್ಕಮಗಳೂರಿನವರನ್ನು ಈ ಕ್ಷೇತ್ರದ ಮತದಾರರನ್ನಾಗಿ ಮಾಡುವ ಪ್ಲ್ಯಾನ್ ನಡೆದಿದೆ. ಬೇಕಾದವರ ಹೆಸರು ಸೇರ್ಪಡೆ, ಬೇಕಿಲ್ಲದವರ ಹೆಸರು ಡಿಲೀಟ್ ಮಾಡಿಸುವುದು ಬಿಜೆಪಿಯ ಪ್ಲ್ಯಾನ್ ಎಂದು ದೂರಿದರು.