ಆನೆಗಳ ಪಾದ ರಕ್ಷಣೆಗೆ ವಿಶೇಷ ಆದ್ಯತೆ

ಥರ್ಮಲ್ ಸ್ಕ್ಯಾನಿಂಗ್, ಮೆಟಲ್ ಡಿಟೆಕ್ಟರ್ ಪರೀಕ್ಷೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ
ಆನೆಗಳ ಪಾದ ರಕ್ಷಣೆಗೆ ವಿಶೇಷ ಆದ್ಯತೆ
ಅರಮನೆ ಆವರಣದಲ್ಲಿ ಬಿಡುಬಿಟ್ಟಿರುವ ದಸರಾ ಆನೆಗೆ ಪಶುವೈದ್ಯ ಡಾ.ಆದರ್ಶ್ ಅವರು ಮೆಟಲ್ ಡಿಟೆಕ್ಟರ್ ಬಳಸಿ ಪರಿಶೀಲಿಸುತ್ತಿರುವುದು. Special priority for protecting elephants' feet
Published on

ಮೈಸೂರು: ನಗರದ ರಾಜಬೀದಿಯಲ್ಲಿ ನಿತ್ಯ ತಾಲೀಮು ನಡೆಸುವ ದಸರಾ ಆನೆಗಳ ಪಾದ ಸಂರಕ್ಷಣೆಗೆ ವಿಶೇಷ ಆದ್ಯತೆ ಕೊಡಲಾಗಿದೆ.

ಕಾಂಕ್ರೀಟ್ ರಸ್ತೆಯಲ್ಲಿ ನಡಿಗೆ ಅಭ್ಯಾಸ ಮಾಡಿದ ಬಳಿಕ ಆನೆಗಳ ಪಾದವನ್ನು ಮೆಟಲ್ ಡಿಟೆಕ್ಟರ್ ಪರೀಕ್ಷೆ ನಡೆಸಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪರಿಶೀಲಿಸಲಾಗುತ್ತಿದ್ದು, ಇದರೊಂದಿಗೆ ಗಜಪಡೆಯ ಆರೋಗ್ಯ ಕಾಯ್ದುಕೊಳ್ಳಲು ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.

ಆನೆಗಳು ನಿತ್ಯ ಬೆಳಗ್ಗೆ ಮತ್ತು ಸಂಜೆ ರಾಜಬೀದಿಯಲ್ಲಿ ವಾಯುವಿಹಾರ ಮಾಡುತ್ತವೆ. ಅರಮನೆಯಿಂದ ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಹಳೇ ಆರ್‌ಎಂಸಿ ವೃತ್ತ, ಬಂಬೂ ಬಜಾರ್, ಹೈವೇ ವೃತ್ತ, ನೆಲ್ಸನ್ ಮಂಡೇಲ ರಸ್ತೆ ಮೂಲಕ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನದ ವರೆಗೂ ಸಾಗಿ ಬರುತ್ತವೆ. ಹೀಗೆ ಹೋಗಿ ಬರಲು 10 ಕಿ.ಮೀ ದೂರ ಕ್ರಮಿಸುತ್ತವೆ. ಈ ರೀತಿಯ ಅಭ್ಯಾಸದೊಂದಿಗೆ ಜಂಬೂಸವಾರಿ ಮೆರವಣಿಗೆಗೆ ಸಜ್ಜುಗೊಳಿಸಲಾಗುತ್ತದೆ.

ಮುಂದೆ ಮ್ಯಾಗ್ನೆಟ್ ಟ್ರ್ಯಾಲಿ:

ಮ್ಯಾಗ್ನೆಟ್ ಟ್ರ್ಯಾಲಿಯಿಂದ ಆನೆಗಳ ಪಾದಕ್ಕೆ ಅಪಾಯಕಾರಿ ವಸ್ತುಗಳು ಚುಚ್ಚದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ತಾಲೀಮಿಗೆ ಕರೆದೊಯ್ಯುವ ವೇಳೆ ಆನೆಗಳ ಮುಂದೆ ಜೀಪೊಂದಕ್ಕೆ ಮ್ಯಾಗ್ನೆಟ್ ಟ್ರ್ಯಾಲಿಯನ್ನು ಕಟ್ಟಿ ಎಳೆದುಕೊಂಡು ಹೋಗಲಾಗುತ್ತದೆ. ಆನೆ ಸಾಗುವ ಹಾದಿಯನ್ನು ಗುರಿಯಾಗಿಸಿಕೊಂಡು ಮ್ಯಾಗ್ನೆಟ್ ಟ್ರ್ಯಾಲಿ ಎಳೆದುಕೊಂಡು ಹೋಗಲಾಗುತ್ತದೆ.

ಇದು ರಸ್ತೆ ಮೇಲೆ ಬಿದ್ದಿರುವ ಅಪಾಯಕಾರಿ ಕಬ್ಬಿಣ ಚೂರು, ಮೊಳೆ, ಪಿನ್ನು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿಕೊಂಡು ಮುಂದೆ ಸಾಗುತ್ತದೆ. ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನ ಮತ್ತೆ ಅರಮನೆಗೆ ಆನೆಗಳು ಸಾಗುವ ಹಾದಿಯಲ್ಲಿ ಪ್ರತಿದಿನ ಅರ್ಧ ಕೆಜಿಯಷ್ಟು ತೂಕದ ಮೊಳೆ, ಕಬ್ಬಿಣದ ಮೊನಚಾದ ಚೂರುಗಳು ಸಿಗುತ್ತಿವೆ. ಈ ಮೂಲಕ ಆನೆಗಳ ಪಾದಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ. ಇಷ್ಟೆಲ್ಲ ಮುನ್ನೆಚ್ಚರಿಕಾ ಬಳಿಕವೂ ಕೆಲ ಸಲ ಮ್ಯಾಗ್ನೆಟ್ ಟ್ರ್ಯಾಲಿಯಿಂದ ಕಣ್ತಪ್ಪಿಸಿ ಕೆಲ ಮೊನಚಾದ ವಸ್ತುಗಳು ಆನೆಗಳ ಪಾದ ಹೊಕ್ಕಿರುವ ಸಾಧ್ಯತೆ ಇರುತ್ತದೆ.

ಮೆಟಲ್ ಡಿಟೆಕ್ಟರ್ ಟೆಸ್ಟ್:

ತಾಲೀಮಿನ ಬಳಿಕ ಮೆಟಲ್ ಡಿಟೆಕ್ಟರ್ ಬಳಸಿ ಪರೀಕ್ಷೆ ಮಾಡಲಾಗುತ್ತದೆ. ವಾಯುವಿಹಾರ ಮುಗಿದ ಬಳಿಕ ಆನೆಗಳಿಗೆ ನೀರು ಕುಡಿಸಿ ಕೆಲ ಸಮಯ ವಿಶ್ರಾಂತಿ ನೀಡಲಾಗುತ್ತದೆ. ನಂತರ ಆನೆಗಳ ಪಾದವನ್ನು ಪಶುವೈದ್ಯ ಡಾ.ಆದರ್ಶ್, ಆರ್‌ಎಫ್‌ಒ ಯಶ್ಮಾ ಮಾಚಮ್ಮ ನೇತೃತ್ವದಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ.

ಎಲ್ಲ 12 ಆನೆಗಳನ್ನು ಮಲಗಿಸಿ, ನಾಲ್ಕು ಕಾಲುಗಳ ಪಾದಕ್ಕೆ ಮೆಟಲ್ ಡಿಟೆಕ್ಟರ್‌ನಿಂದ ಪರೀಕ್ಷಿಸಲಾಗುತ್ತದೆ. ಇದರಿಂದ ಪಾದಕ್ಕೆ ಕಬ್ಬಿಣದ ಚೂರುಗಳು ಚುಚ್ಚಿಕೊಂಡಿದ್ದರೆ ಪತ್ತೆಯಾಗುತ್ತದೆ. ಅದನ್ನು ಸುರಕ್ಷಿತವಾಗಿ ತೆಗೆದು ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.

ಪಾದಗಳ ಪರೀಕ್ಷೆಗೆ ಥರ್ಮಲ್ ಸ್ಕಾೃನಿಂಗ್:

ಮೆಟಲ್ ಡಿಟೆಕ್ಟರ್‌ನಿಂದ ಪರೀಕ್ಷೆ ನಡೆಸಿದ ಬಳಿಕ ಆನೆಗಳ ಪಾದವನ್ನು ಥರ್ಮಲ್ ಸ್ಕ್ಯಾನ್ ಮಾಡಲಾಗುತ್ತಿದೆ. ಇದರಿಂದ ಪಾದದ ಒಳಗೆ ಏನಾದರೂ ಸಮಸ್ಯೆ ಇದ್ದರೆ ಪತ್ತೆ ಹಚ್ಚಬಹುದಾಗಿದೆ. ಈ ಹಿನ್ನೆಲೆಯಲ್ಲಿ ಥರ್ಮಲ್ ಸ್ಕ್ಯಾನಿಂಗ್ ಆನೆಗಳ ಪಾದ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಮುನ್ನೆಚ್ಚರಿಕಾ ಕ್ರಮ:

ನಿತ್ಯ ದಸರಾ ಆನೆಗಳು ಕಾಂಕ್ರೀಟ್ ಹಾಗೂ ಡಾಂಬರ್ ರಸ್ತೆ ಮೇಲೆ ತಾಲೀಮಿಗೆ ಹೋಗುವುದರಿಂದ ಅವುಗಳ ಪಾದ ಮೃದುವಾಗಿರುತ್ತದೆ. ಕಾಡಲ್ಲಿ ಓಡಾಡುವಾಗ ಆನೆಗಳ ಪಾದ ಕಲ್ಲು, ಮಣ್ಣಿಗೆ ಹೊಂದಿಕೊಂಡು ಕಠಿಣವಾಗಿರುತ್ತದೆ. ಆದರೆ ರಸ್ತೆ ಮೇಲೆ ನಿತ್ಯ ನಡಿಗೆ, ಬಾರದ ತಾಲೀಮುನಲ್ಲಿ ತೊಡಗುವುದರಿಂದ ಪಾದದ ಚರ್ಮ ಸವೆದು ಮೃದು ಸ್ವರೂಪ ಪಡೆದುಕೊಂಡಿರುತ್ತದೆ.

ಇದರಿಂದ ಸಣ್ಣ ಕಬ್ಬಿಣದ ಚೂರು, ಮೊಳೆ, ಗುಂಡು ಸೂಚಿ, ಏರ್‌ಪಿನ್, ಬಟ್ಟೆ ಪಿನ್, ನಟ್, ಬೋಲ್ಟ್ ಸೇರಿದಂತೆ ಕಬ್ಬಿಣದ ಚೂರುಗಳು ಆನೆ ಪಾದ ಹೊಕ್ಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೆಟಲ್ ಡಿಟೆಕ್ಟರ್ ಪರೀಕ್ಷೆ ಹಾಗೂ ಥರ್ಮಲ್ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕಾಡಿನಿಂದ ನಾಡಿಗೆ ಬಂದಿರುವ ಆನೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಅರಣ್ಯ ಇಲಾಖೆ ಅನೇಕ ಮುನ್ನೆಚ್ಚರಿಕಾ ಕ್ರಮ ವಹಿಸುವ ಮೂಲಕ ಅವುಗಳ ಆರೋಗ್ಯಗೆ ಆದ್ಯತೆ ಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net