

ಮೈಸೂರು: ಆಧಾರ್ ಸೇವೆಗಳಿಗಾಗಿ ಜನರು ಪರದಾಡುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಆಧಾರ್ ಹೊಸ ನೋಂದಣಿ, ತಿದ್ದುಪಡಿ, ಮೊಬೈಲ್ ಸಂಖ್ಯೆ ಸೇರ್ಪಡೆ, ಬದಲಿ ಸಂಖ್ಯೆ ಸೇರ್ಪಡೆ ಸೇರಿದಂತೆ ಇನ್ನಿತರೆ ಸೇವೆ ಮಾಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಈಗ ಇರುವ ಆಧಾರ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿರುವುದರಿಂದ ಜನರು ದೀರ್ಘಕಾಲ ಸರದಿಯಲ್ಲಿ ಕಾಯಬೇಕಾಗಿದೆ. ವಿಶೇಷವಾಗಿ ವೃದ್ಧರು, ಅಂಗವಿಕಲರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮಸ್ಯೆ ಕುರಿತು ಗಮನ ಸೆಳೆಯಲಾಯಿತು.
ಜನರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಿ, ವಿಶೇಷ ಆಧಾರ್ ಸೇವಾ ಘಟಕಗಳನ್ನು ಆರಂಭಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.
ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಆಧಾರ್ ತಿದ್ದುಪಡಿಗಳಿಗಾಗಿ ನಗರ ಪ್ರದೇಶಗಳಿಗೆ ಪದೇಪದೆ ಅಲೆದಾಡುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ವಿಶೇಷ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರಗಳನ್ನು ಆಯೋಜಿಸಬೇಕು. ಇದರಿಂದ ಗ್ರಾಮೀಣ ಜನರಿಗೆ ಸಮಯ ಮತ್ತು ಹಣದ ಉಳಿತಾಯವಾಗುವುದರ ಜತೆಗೆ ಅನಗತ್ಯ ಅಲೆದಾಟವೂ ತಪ್ಪಲಿದೆ ಎಂದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಆಧಾರ್ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ರೇಖಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಪದಾಧಿಕಾರಿಗಳಾದ ದೂರ ರಾಜಣ್ಣ, ಜಯಸಿಂಹ ಶ್ರೀಧರ್, ಗಗನ್‌ಗೌಡ, ದಯಾನಂದ ನಾಯಕ್, ಶ್ರೀಕಂಠ ಕೌಶಿಕ್, ಪ್ರಜ್ವಲ್ ಪೆಮ್ಮಯ್ಯ, ಶ್ರೀಕಾಂತ್ ಕಶ್ಯಪ್, ಜತ್ತಿ ಪ್ರಸಾದ್, ನಿವೃತ್ತ ಶಿಕ್ಷಕ ಮಹದೇವಸ್ವಾಮಿ ಇತರರು ಇದ್ದರು.