

ಮೈಸೂರು:ಬದಲಾಗುತ್ತಿರುವ ಆಧುನಿಕ ಜೀವನಶೈಲಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ, ದೈಹಿಕ ಶ್ರಮವಿಲ್ಲದ ದಿನಚರಿ ಮತ್ತು ಅಸಮತೋಲಿತ ಆಹಾರ ಪದ್ಧತಿಗಳಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಜಾಗತಿಕವಾಗಿ ಹೆಚ್ಚಾಗುತ್ತಿವೆ ಎಂದು ಹೃದಯತಜ್ಞ ಡಾ. ಸಿ.ಬಿ.ಕೇಶವಮೂರ್ತಿ ಹೇಳಿದರು.
ವಿಶ್ವ ಹೃದಯ ದಿನದ ಅಂಗವಾಗಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿದೆ. ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ದಿಢೀರ್ ಹೃದಯಾಘಾತ ಮತ್ತು ಸಡನ್ ಕಾರ್ಡಿಯಾಕ್ ಅರೆಸ್ಟ್ ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಹೃದಯದ ಆರೋಗ್ಯವನ್ನು ಕಾಪಾಡುವುದು ಬಹುಮುಖ್ಯ. ಹೃದಯ ಸಂಬಂಧಿ ಅಪಾಯಗಳನ್ನು ಕಡಿಮೆ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ, ಮುನ್ನೆಚ್ಚರಿಕೆಯ ತಪಾಸಣೆಗಳು ಮತ್ತು ಸಮಯಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆಯ ತುರ್ತು ಅಗತ್ಯ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಹೃದ್ರೋಗ ತಜ್ಞ ಡಾ.ಉಪೇಂದ್ರ ಶೆಣೈ ಮಾತನಾಡಿ, ಅಧಿಕ ಮಾನಸಿಕ ಒತ್ತಡ, ದೈಹಿಕ ಚಟುವಟಿಕೆ ಕೊರತೆ, ಧೂಮಪಾನ, ನಿದ್ರಾಹೀನತೆ ಮತ್ತು ಅಸಮತೋಲಿತ ಆಹಾರ ಪದ್ಧತಿಗಳು ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಯುವಜನರು ತಮ್ಮ ದೀರ್ಘಕಾಲೀನ ಹೃದಯ ಹಾಗೂ ರಕ್ತನಾಳಗಳ ಆರೋಗ್ಯವನ್ನು ರಕ್ಷಿಸಿಕೊಳ್ಳಲು ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ತಂಬಾಕು ಸೇವನೆಯಿಂದ ದೂರವಿರುವುದು ಮತ್ತು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತಹ ಮುನ್ನೆಚ್ಚರಿಕೆಯ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.
ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್, ಹೃದಯ ರೋಗ ತಜ್ಞರು, ಆಸ್ಪತ್ರೆಯ ವಿವಿಧ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು.