

ಮೈಸೂರು: ಕಳೆದ ವರ್ಷ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬಲೂನು ಮಾರಲು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಅಪರಾಧಿಗೆ ನಗರದ ಪೋಕ್ಸೋ (ಶೀಘ್ರಗತಿ) ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
ಮೈಸೂರು ತಾಲೂಕು ಸಿದ್ದಲಿಂಗಪುರದ ಕಾರ್ತಿಕ್ ಅಲಿಯಾಸ್ ಗರಡಿ (32) ಶಿಕ್ಷೆಗೆ ಗುರಿಯಾದವ.
ಈ ಪ್ರಕರಣದಲ್ಲಿ ಅ.15ರಂದೇ ಕಾರ್ತಿಕ್ ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ, ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿ, ಶನಿವಾರ ಮರಣದಂಡನೆ ಪ್ರಕಟಿಸಿದೆ. ಅಲ್ಲದೇ ಒಂದು ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತ ಒಂದು ಲಕ್ಷ ರೂ. ಜೊತೆಗೆ ಸಂತ್ರಸ್ತೆ ಪರಿಹಾರ ಯೋಜನೆ ಅಡಿ 13.50 ಲಕ್ಷ ರೂ. ಅನ್ನು ಪರಿಹಾರವಾಗಿ ಪೋಷಕರಿಗೆ ನೀಡುವಂತೆ ಆದೇಶಿಸಲಾಗಿದೆ.
ಏನಾಗಿತ್ತು?:
ಮೈಸೂರು ದಸರಾ ಮಹೋತ್ಸವ-2025ರಲ್ಲಿ ಬಲೂನು, ಆಟಿಕೆ ಮಾರಾಟ ಮಾಡುವ ಸಲುವಾಗಿ ಮೂಲತಃ ಕಲಬುರಗಿಯ 10 ಜನರ ಅಲೆಮಾರಿ ಕುಟುಂಬ ಮೈಸೂರಿಗೆ ಆಗಮಿಸಿ, ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಹಿಂಭಾಗ ಎಂ.ಜಿ.ರಸ್ತೆಯ ಜಾಗದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಉಳಿದುಕೊಂಡಿತ್ತು.
2025ರ ಅ.8ರ ರಾತ್ರಿ ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಚಾಕುವಿನಿಂದ 27 ಬಾರಿ ಚುಚ್ಚಿ ಕೊಲೆ ಮಾಡಿ ಮೃತದೇಹವನ್ನು ವಸ್ತುಪ್ರದರ್ಶನ ಮೈದಾನದ ಪಾರ್ಕಿಂಗ್ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದ ದುರುಳ.
ಇದು ರಾಜ್ಯಮಟ್ಟದಲ್ಲಿಯೂ ತೀವ್ರ ಸದ್ದು ಮಾಡಿದ್ದಲ್ಲದೇ ಅನೇಕರು ಸಂತ್ರಸ್ತ ಕುಟಂಬದವರಿಗೆ ನೆರವು ನೀಡಿದ್ದರು. ಜತೆಗೆ ಬಾಲಕಿಯ ಶವವನ್ನು ಮೈಸೂರಿನಿಂದ ಕಲಬುರಗಿಗೆ ತೆಗೆದುಕೊಂಡು ಹೋಗಲು ಸಹಾಯ ಮಾಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು, ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ನೆರವು, ಸಾಂದರ್ಭಿಕ ಸಾಕ್ಷಿ ಆಧಾರದ ಮೇಲೆ ಕೃತ್ಯವೆಸಗಿದವನನ್ನು ಕೊಳ್ಳೇಗಾಲದ ಬಳಿ ಅಡಗಿದ್ದ ಕಾರ್ತಿಕ್ನನ್ನು ಬಂಧಿಸಿದ್ದರು. ಘಟನೆ ನಡೆದ 24 ಗಂಟೆಯಲ್ಲಿಯೇ ಬಂಧಿಸಿದ್ದು ವಿಶೇಷ. ನಜರ್ಬಾದ್ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ನಗರದ ಪೋಕ್ಸೋ (ಶೀಘ್ರಗತಿ) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಅನಿಲ್ ಪಿ.ಉಘಾಢೆ, ಸಾಂದರ್ಭಿಕ, ತಾಂತ್ರಿಕ ಸಾಕ್ಷಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಪರಿಗಣಿಸಿ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ್ದಾರೆ. ಅಲ್ಲದೇ ಮೃತ ಬಾಲಕಿ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ಕೊಡಲು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.
ಬಸ್ ಕ್ಲೀನರ್ ಆಗಿದ್ದ ಅಪರಾಧಿ:
ಅಪರಾಧಿ ಖಾಸಗಿ ಬಸ್ ಕ್ಲೀನರ್ ಆಗಿದ್ದ. ಕಾರ್ತಿಕ್ ಮೇಲೆ ಇನ್ನು ಎರಡು ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ಪಕ್ಕದ ಮನೆಯವರ ಜತೆ ಜಗಳವಾಡಿದ್ದಕ್ಕೆ ದೂರು ದಾಖಲಾಗಿತ್ತು. ಅಲ್ಲದೇ 2019ರಲ್ಲಿ ಕೊಳ್ಳೇಗಾಲದಲ್ಲಿ ಮಹಿಳೆ ಒಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ 4 ವರ್ಷ ಜೈಲಿನಲ್ಲಿದ್ದು ಬಂದಿದ್ದ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.
ತಪ್ಪಿಸಿಕೊಳ್ಳುವಾಗ ಕಾಲಿಗೆ ಗುಂಡೇಟು
ಕೊಳ್ಳೇಗಾಲದಲ್ಲಿ ಕಾರ್ತಿಕ್ನನ್ನು ಬಂಧಿಸಿದ್ದ ಪೊಲೀಸರು, ಆತನನ್ನು ಪ್ರಾಥಮಿಕ ವಿಚಾರಣೆ ನಡೆಸಿ ಸ್ಥಳ ಮಹಜರು, ಸಿದ್ದಲಿಂಗಪುರದ ಮನೆ ತಪಾಸಣೆ ನಡೆಸಿದ್ದರು. ವಿಚಾರಣೆ ನಡೆಸಿ ಮೈಸೂರಿಗೆ ಕರೆ ತರುವಾಗ ಕಾರ್ತಿಕ್, ಮೇಟಗಳ್ಳಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆ ಸಮಯದಲ್ಲಿ ಸಬ್ಇನ್ಸ್ಪೆಕ್ಟರ್ ಜೈ ಕೀರ್ತಿ, ಅಪರಾಧಿಯ ಬಲಗಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದಿದ್ದರು. ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದರು.
ನ್ಯಾಯ ಕೊಡಿಸಿರುವ ಆತ್ಮತೃಪ್ತಿ
ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು, ಆಕೆಯ ಸಾವಿಗೆ ನ್ಯಾಯ ಕೊಡಿಸಿದ ಆತ್ಮತೃಪ್ತಿ ಇದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ಪ್ರತಿಕ್ರಿಯಿಸಿದರು. ಈ ದಸರಾ ಮುಗಿಯುವುದರ ಒಳಗೆ ಶಿಕ್ಷೆ ಪ್ರಕಟಿಸಿರುವುದು ಜನರಲ್ಲಿ ವಿಶ್ವಾಸ ಮೂಡಿಸಿದೆ. ಪ್ರಕರಣದಲ್ಲಿ ಡಿಜಿಟಲ್ ಸಾಕ್ಷಿಗಳು ಪ್ರಮುಖ ಪಾತ್ರ ವಹಿಸಿದ್ದವು. ಅಲ್ಲದೇ ವಿಧಿ ವಿಜ್ಞಾನ ಪ್ರಯೋಗಾಲಯದ ಹಲವು ಸಾಕ್ಷಿಗಳು ನೆರವಾದವು ಎಂದರು.
ಘಟನೆ ನಡೆದ ಬಳಿಕ ಆಟೋ ಡ್ರೈವರ್ ಬಳಿ ಅಪರಾಧ ಕೃತ್ಯದ ಕುರಿತು ಹೇಳಿಕೊಂಡಿದ್ದು, ಅವರು ನಮಗೆ ಸಾಕ್ಷಿಯಾಗಿ ಸಿಕ್ಕಿದ್ದರು. ಪೊಲೀಸರ ಬಂಧನ ವೇಳೆ ಕೃತ್ಯವೆಸಗಿದ್ದ ಚಾಕು ಕೂಡ ಸಿಕ್ಕಿದ್ದು, ಅದನ್ನು ಆತ ಬಸ್ಸಿನಲ್ಲಿ ಪದೇಪದೆ ತೆಗೆದು ನೋಡುತ್ತಿದ್ದದ್ದು ಹಲವರು ಕಂಡಿದ್ದರು. ಅವರು ಸಾಕ್ಷಿ ನುಡಿದ್ದರು ಎಂದು ತಿಳಿಸಿದರು.