ಅನ್ನ, ಅಕ್ಷರ ಕಾಂತ್ರಿ ಸೃಷ್ಟಿಸಿದ ರಾಜೇಂದ್ರ ಶ್ರೀ : ಪ್ರೊ.ಡಿ.ಎ.ಶಂಕರ್ ಅಭಿಪ್ರಾಯ

111ನೇ ಜಯಂತಿ ಕಾರ್ಯಕ್ರಮ
Anna, Akshara Kantri created by Rajendra Sri : Opinion of Prof. DA Shankar
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 111ನೇ ಜಯಂತಿ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಪ್ರೊ.ಡಿ.ಎ.ಶಂಕರ್, ಡಾ.ಎಸ್.ಚಿದಂಬರ, ಡಾ.ಸಿ.ಪಿ.ಮಧು, ಆರ್.ಮಹೇಶ್ ಇತರರು ಇದ್ದರು.
Published on: 

ಮೈಸೂರು: ಸರ್ಕಾರದ ಶಿಕ್ಷಣ ವ್ಯವಸ್ಥೆ ತಲುಪದ ಸಣ್ಣ ಗ್ರಾಮಗಳಲ್ಲಿಯೂ ಶಾಲೆಗಳನ್ನು ತೆರೆಯುವ ಮೂಲಕ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತೆ ಮಾಡಿದ ಹೆಮ್ಮೆ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎ.ಶಂಕರ್ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 111ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಸಿವಿನಲ್ಲಿ ಇದ್ದವರು ವಿದ್ಯೆ ಕಲಿಯಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡಿದ್ದ ಶ್ರೀಗಳು, ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಿ ಶಾಲಾ, ಕಾಲೇಜುಗಳನ್ನು ಸ್ಥಾಪಿಸಿದರು. ಸರ್ಕಾರದ ಯೋಜನೆಗಳು ತಲುಪದ ಹಿಂದುಳಿದ ಗ್ರಾಮಗಳಲ್ಲಿಯೂ ಅನ್ನ, ಅಕ್ಷರ ದೊರೆಯುವಂತೆ ಮಾಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯದಾತರಾದರು ಎಂದರು.

ಅಂದಿನ ಕಾಲದಲ್ಲಿ ಬಡತನದಿಂದ ಬಳಲುತ್ತಿದ್ದವರಿಗೆ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ರಾಜೇಂದ್ರ ಶ್ರೀಗಳು ನೆರವು ನೀಡಲು ಮುಂದಾದರು. ಹಾಸ್ಟೆಲ್‌ಗಳನ್ನು ನಿರ್ಮಿಸಿ, ಅಲ್ಲಿ ಬಡ ಮಕ್ಕಳಿಗೆ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿದರು ಎಂದು ನೆನಪು ಮಾಡಿಕೊಂಡರು.

ಮೊದಲು ಪ್ರತಿಯೊಬ್ಬರಿಗೂ ಅನ್ನ ಬೇಕು. ಹಸಿದ ಹೊಟ್ಟೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಬಡ ಮಕ್ಕಳಿಗೆ ಅನ್ನದ ವ್ಯವಸ್ಥೆ ಮಾಡಬೇಕು ಎಂದು ನಿರ್ಧರಿಸಿ, ಅದರ ಜತೆಗೆ ಅವರಿಗೆ ಅಕ್ಷರ ಜ್ಞಾನವೂ ದೊರೆಯಬೇಕು ಎಂಬ ಉದ್ದೇಶದಿಂದ ಶಿಕ್ಷಣದ ವ್ಯವಸ್ಥೆ ಮಾಡಿದರು. ಈ ಎರಡೂ ಕ್ರಾಂತಿಗಳು ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದವು ಎಂದರು.

ಮಕ್ಕಳು ಆರೋಗ್ಯವಂತರಾಗಿ, ಉತ್ತಮ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಲು ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಿದರು. ಇದು ನಿಜಕ್ಕೂ ಬಹುದೊಡ್ಡ ಕೆಲಸ. ಇದನ್ನು ಸರ್ಕಾರವೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಅದರಲ್ಲಿಯೂ ಜಾತಿ, ಮತ ಯಾವುದನ್ನೂ ನೋಡಲಿಲ್ಲ. ಯಾರು ಬಡವರಿದ್ದಾರೋ, ಆ ಎಲ್ಲ ಬಡ ಮಕ್ಕಳಿಗೂ ಇಂತಹ ಶಾಲೆಗಳಲ್ಲಿ ಓದಲು ಮತ್ತು ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದರು ಎಂದು ಬಣ್ಣಿಸಿದರು.

ರಾಜೇಂದ್ರ ಶ್ರೀಗಳ ಇಂತಹ ಕಾರ್ಯಗಳ ಕಾರಣಕ್ಕಾಗಿಯೇ ಸಾಮಾನ್ಯ ಸಾರ್ವಜನಿಕ ಸಮಾರಂಭದಲ್ಲಿ ಅಷ್ಟಾಗಿ ಹೋಗದ ಕುವೆಂಪು ಅವರು, ಶ್ರೀಗಳ ಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದರು. ರಾಜೇಂದ್ರ ಶ್ರೀ ಜಾತಿ, ಮತ, ಧರ್ಮದ ಭೇದಗಳನ್ನು ಮೀರಿ ಬಸವತತ್ವದ ಅಡಿ ಸೇವಾ ಕಾರ್ಯಗಳನ್ನು ಮಾಡಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃತಕ ಅಂಗ ಜೋಡಣೆ ಉಪಕರಣಗಳನ್ನು ವಿತರಣೆ ಮಾಡಲಾಯಿತು.

ಜಿಲ್ಲಾ ಸರ್ಜನ್ ಡಾ.ಎಸ್.ಚಿದಂಬರ, ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು, ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net