ಅನುಭವದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ: ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಮತ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ
Building a healthy society is possible through experience: Vice-Chancellor Prof. N.K. Lokanath’s view
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ನಿವೃತ್ತ ಅಧಿಕಾರಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ಡಿ.ಕೆ.ರಾಜೇಂದ್ರ, ಎಸ್.ವಿ.ಗೌಡಪ್ಪ, ಡಾ.ಎಚ್.ಎಂ.ನಾಗರಾಜು, ಕೆ.ಎಸ್.ಕೃಷ್ಣ, ಡಾ.ಎನ್.ಕೆ.ರಾಮಚಂದ್ರಗೌಡ ಇತರರು ಇದ್ದರು.
Published on: 

ಮೈಸೂರು: ಅನುಭವದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹಾಗಾಗಿ ಹಿರಿಯರು ಕಿರಿಯರಿಗೆ ಅನುಭವವನ್ನು ಹಸ್ತಾಂತರ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕರ ಮಂಡಳಿ ಮತ್ತು ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿಯಿಂದ ನಗರದ ಜಯಲಕ್ಷ್ಮೀಪುರಂ ಹಿರಿಯ ನಾಗರಿಕರ ಮಂಡಳಿಯಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನುಭವಗಳು ಜೀವನವನ್ನು ಪಕ್ವಗೊಳಿಸುತ್ತವೆ. ಅದಕ್ಕೆ ಜೀವನದಲ್ಲಿ ಅನುಭವ ಬಳಸಿಕೊಳ್ಳುವುದು ಮುಖ್ಯ. ಹಾಗಾಗಿ ಇಂದಿನ ದಿನಮಾನದಲ್ಲಿ ಯುವಜನರಿಗೆ ಹಿರಿಯ ನಾಗರಿಕರು ತಮ್ಮ ಅನುಭವವನ್ನು ಧಾರೆ ಎರೆಯಬೇಕು ಎಂದು ಹೇಳಿದರು.

ಮೊಬೈಲ್ ಜಗತ್ತಿನಲ್ಲಿ ಮುಳುಗಿರುವ ಇಂದಿನ ಯುವ ಜನಾಂಗ ಎಲ್ಲವನ್ನೂ ಇಂಟರ್‌ನೆಟ್‌ನಿಂದ ಕಲಿಯಬಹುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಅವರಿಗೆ ಸರಿಯಾದ ಮಾಹಿತಿಯೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಹಿರಿಯ ನಾಗರಿಕ ಮಂಡಳಿ, ಯುವ ಸಮೂಹವನ್ನು ಉತ್ತೇಜಿಸುವ ಕೆಲಸ ಮಾಡುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು ಎಂದರು.

ಪ್ರಸ್ತುತ ಪೀಳಿಗೆಯೂ ಕೂಡ ಹಿರಿಯರನ್ನು ಸಮಾಜದ ಅಂಚಿಗೆ ತಳ್ಳದೆ, ಅವರ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವ ಜನರು ಹಿರಿಯರಿಂದ ಕಲಿಯುವಂತೆಯೇ ಹಿರಿಯರಿಗೂ ಹೊಸ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಜಗತ್ತಿನ ಬಗ್ಗೆ ತಿಳಿದುಕೊಳ್ಳಬೇಕು. ಇದು ಕೇವಲ ಎರಡು ಪೀಳಿಗೆಗಳ ನಡುವಿನ ಸಂಬಂಧವಲ್ಲ. ಇದು ಜ್ಞಾನ ಮತ್ತು ಅನುಭವದ ಪರಸ್ಪರ ವಿನಿಮಯವಾಗಿದೆ ಎಂದರು.

ಇಂದು ತಂತ್ರಜ್ಞಾನ ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ತಂತ್ರಜ್ಞಾನವನ್ನು ತಿಳಿದುಕೊಳ್ಳಬೇಕು. ಮೊಬೈಲ್ ಬಳಕೆ, ಇಂಟರ್ ನೆಟ್ ಉಪಯೋಗದ ಕುರಿತು ಎಚ್ಚರ ವಹಿಸಬೇಕು. ಇಲ್ಲವಾದರೆ ತಮ್ಮ ಜೀವನದಲ್ಲಿ ಸಂಪಾದಿಸಿದ ಹಣ ಕಳೆದುಕೊಂಡ ಉದಾಹರಣೆಗಳು ಇವೆ ಎಂದು ಹೇಳಿದರು.

ನಮ್ಮ ಹಿರಿಯರು ಕೇವಲ ವಯಸ್ಸಿನಲ್ಲಿ ಮಾತ್ರ ದೊಡ್ಡವರಲ್ಲ. ಅವರು ಬದುಕಿನಲ್ಲಿ ಅನೇಕ ಏಳುಬೀಳುಗಳನ್ನು ಕಂಡವರು. ಕಷ್ಟ, ನಷ್ಟ, ಪರಿಶ್ರಮ ಯಶಸ್ಸು, ಕುಟುಂಬದ ಜವಾಬ್ದಾರಿ ಮತ್ತು ಸಾಮಾಜಿಕ ಬದಲಾವಣೆಗಳನ್ನು ಅನುಭವಿಸಿದವರು ಎಂದರು.

ಗ್ರಾಮೀಣ ಸಮಾಜದಲ್ಲಿ ಕೃಷಿ ಪದ್ಧತಿಗಳು, ಮಳೆಗಾಲದ ಅನುಭವಗಳು, ಸ್ಥಳೀಯ ಪರಿಸರದ ಅರಿವು, ಔಷಧೀಯ ಸಸ್ಯಗಳ ಕುರಿತ ಸಾಂಪ್ರದಾಯಿಕ ಜ್ಞಾನ, ಜನಪದ ಕಲೆಗಳು, ಆಚರಣೆಗಳು ಮತ್ತು ಸಮುದಾಯದ ಸಹಬಾಳ್ವೆಯ ವಿಧಾನಗಳು ಹಿರಿಯರ ಮೂಲಕವೇ ಮುಂದಿನ ಪೀಳಿಗೆಗೆ ತಲುಪಿವೆ, ಅವುಗಳನ್ನು ಮುಂದಿನ ಪೀಳಿಗೆಗೆ ದಾಖಲಿಸಿ ಕೊಡುವ ಕೆಲಸ ಅಗಬೇಕು ಎಂದು ಹೇಳಿದರು.

ಹಿರಿಯ ನಾಗರಿಕರು ಒಂದೆಡೆ ಸೇರಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ನಡುವಿನ ಗೌರವ, ಬಾಂಧ್ಯವ ವೃದ್ಧಿಗೆ ಒಂದು ವೇದಿಕೆ ಸಿಕ್ಕಂತಾಗಿದೆ. ವಿಚಾರ ವಿನಿಯಮ, ಕಷ್ಟಸುಖಗಳನ್ನು ಹಂಚಿಕೊಳ್ಳಲು ಇಂದೊಂದು ಅವಕಾಶ. ಒಟ್ಟಿಗೆ ಕುಳಿತು ಮಾತನಾಡುವುದರಿಂದ ಸಂಬಂಧಗಳು, ಬಾಂಧವ್ಯಗಳು ವೃದ್ಧಿಯಾಗುತ್ತವೆ. ನಿಮಗೂ ಖುಷಿಯಾಗುತ್ತದೆ. ಎಲ್ಲರೂ ಆರೋಗ್ಯದತ್ತಲೂ ಚಿಂತನೆ ನಡೆಸಬೇಕು ಎಂದರು.

ನಿವೃತ್ತ ಐಎಫ್‌ಎಸ್ ಅಧಿಕಾರಿ ಎ.ಸಿ.ಲಕ್ಷ್ಮಣ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರೀತಿ, ನಿಖಿತ್ ಗೌಡ, ತುಳಸಿ, ಯೋಗೀಂದ್ರ, ಹರಿಣಿ, ರಾಜು ಅವರನ್ನು ಪುರಸ್ಕರಿಸಲಾಯಿತು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪ್ರೊ.ಡಿ.ಕೆ.ರಾಜೇಂದ್ರ, ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ಛೇರ್ಮನ್ ಎಸ್.ವಿ.ಗೌಡಪ್ಪ, ಹಿರಿಯ ನಾಗರಿಕರ ಮಂಡಳಿ ಅಧ್ಯಕ್ಷ ಡಾ.ಎಚ್.ಎಂ. ನಾಗರಾಜು, ಕಾರ್ಯದರ್ಶಿ ಕೆ.ಎಸ್.ಕೃಷ್ಣ, ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಡಾ.ಎನ್.ಕೆ.ರಾಮಚಂದ್ರಗೌಡ ಇತರರು ಇದ್ದರು.