ಪದವಿ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ!

ಪದವಿ ಕಾಲೇಜು
ಪದವಿ ಕಾಲೇಜು
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಕೊರತೆಯಿಂದ ಪ್ರವೇಶಾತಿ ಕುಸಿತ
  • ಬೇಡಿಕೆಗೆ ತಕ್ಕಂತೆ ಹೊಸ ಕೋರ್ಸ್‌ಗೆ ಅನುಮತಿ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲ ಕೋರ್ಸ್‌ಗಳಲ್ಲಿ ಶೂನ್ಯ ದಾಖಲಾತಿಯಾಗಿದ್ದರೆ, ಇನ್ನೂ ಕೆಲ ಕಡೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಲ್ಲಿ ಒಂದಂಕಿ ದಾಟದಿರುವ ಕೋರ್ಸ್‌ಗಳೂ ಸಹ ಇವೆ...!
ಉನ್ನತ ಶಿಕ್ಷಣದಲ್ಲಿ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿರುವುದಕ್ಕೆ ಇದುವೇ ದ್ಯೋತಕವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕೋರ್ಸ್‌ಗಳನ್ನು ರದ್ದುಪಡಿಸಿರುವ, ಕಾಲೇಜು ಶಿಕ್ಷಣ ಇಲಾಖೆ ಹೊಸ ಕೋರ್ಸ್‌ಗಳಿಗೆ ಅನುಮತಿ ಕೊಟ್ಟಿದೆ.
ಮುಖ್ಯವಾಗಿ ಕಲಾ ವಿಭಾಗದ ಕೆಲ ಕೋರ್ಸ್‌ಗಳಿಗೆ ಬೇಡಿಕೆ ಗಣನೀಯವಾಗಿ ಕುಸಿದಿದೆ. ಕಾಲೇಜು ಶಿಕ್ಷಣ ಇಲಾಖೆಯ ಮಾಹಿತಿಯ ಪ್ರಕಾರ ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ, ಐಚ್ಛಿಕ ಕನ್ನಡ, ಸಮಾಜಶಾಸ್ತ್ರ ಸೇರಿದಂತೆ ಹಲವು ಕೋರ್ಸ್‌ಗಳ ಸಂಯೋಜನೆಗಳಿಗೆ ಬೇಡಿಕೆ ಕುಸಿದಿದೆ. ತೃತೀಯ ಹಂತದ ನಗರಗಳಲ್ಲಿ ಕಂಪ್ಯೂಟರ್ ಸೈನ್ಸ್‌ಗೂ ಬೇಡಿಕೆ ತಗ್ಗಿದೆ.

78 ಸಂಯೋಜನೆಗಳಿಗೆ ಶೂನ್ಯ ದಾಖಲಾತಿ

2025-26ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ 25 ಪದವಿ ಕಾಲೇಜುಗಳಲ್ಲಿ 78  ಸಂಯೋಜನೆಗಳಿಗೆ ಶೂನ್ಯ ದಾಖಲಾತಿಯಾಗಿದೆ. ಮೈಸೂರು ನಗರದಲ್ಲಿರುವ ಮಹಾರಾಜ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು, ಮಹಾರಾಣಿ ಕಲಾ ಕಾಲೇಜು, ಕುವೆಂಪುನಗರ, ವಿಜಯನಗರ, ಸಿದ್ಧಾರ್ಥನಗರದಲ್ಲಿರುವ ಪದವಿ ಕಾಲೇಜುಗಳಲ್ಲಿರುವ ಕೆಲ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳೇ ಇಲ್ಲ. ಗ್ರಾಮಾಂತರ ಪ್ರದೇಶದಲ್ಲೂ ಇದೇ ಸ್ಥಿತಿ ಇದೆ.
ಎಚ್.ಡಿ.ಕೋಟೆ, ಕಬಿನಿ ಕಾಲನಿಯಲ್ಲಿರುವ ಬೈರಾಪುರ, ಸರಗೂರು, ಹನಗೋಡ, ಬಿಳಿಕೆರೆ, ಕೆ.ಆರ್.ನಗರ, ಹುಣಸೂರು, ಬೆಟ್ಟದಪುರ, ಸಾಲಿಗ್ರಾಮ, ನಂಜನಗೂಡು, ಹುಲ್ಲಹಳ್ಳಿ, ತಿ.ನರಸೀಪುರ, ಬನ್ನೂರು, ತಲಕಾಡಿನಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಕೆಲ ಕೋರ್ಸ್‌ಗಳು ವಿದ್ಯಾರ್ಥಿಗಳಿಲ್ಲದೆ ಕಳೆಗುಂದಿವೆ.

ಆರ್‌ಐಇಯಲ್ಲೂ ಇದೇ ಕಥೆ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ) ದಕ್ಷಿಣ ಭಾರತದ ಪ್ರಮುಖ ಸಂಪನ್ಮೂಲ ಕೇಂದ್ರವಾಗಿರುವ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿರುವ (ಆರ್‌ಐಇ) ಕೋರ್ಸ್‌ಗಳಿಗೂ ವಿದ್ಯಾರ್ಥಿಗಳು ದಾಖಲಾಗಿಲ್ಲ. ಇಲ್ಲಿರುವ ಬಿ.ಎ.ಪದವಿ ಕೋರ್ಸ್‌ಗಳಾದ ಕಲಾ ಶಿಕ್ಷಣ ಮತ್ತು ಶಿಕ್ಷಣ ವಿಷಯಕ್ಕೆ ಯಾವುದೇ ವಿದ್ಯಾರ್ಥಿಗಳು ಪ್ರವೇಶಾತಿಯನ್ನೇ ಪಡೆದುಕೊಂಡಿಲ್ಲ.

ಬೇಡಿಕೆ ಇಲ್ಲದ ಕೋರ್ಸ್‌ಗಳು ಯಾವುವು?

ಸಮಾಜ ವಿಜ್ಞಾನ, ಕನ್ನಡ, ಜಾನಪದ, ಇತಿಹಾಸ, ಮನಶಾಸ್ತ್ರ, ಅಂಬೇಡ್ಕರ್ ಅಧ್ಯಯನ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ಸಂಗೀತ, ಇಂಗ್ಲಿಷ್ ಸೇರಿದಂತೆ ಇನ್ನಿತರ ಕಲಾ ಕೋರ್ಸ್‌ಗಳು ಬೇಡಿಕೆಯನ್ನೇ ಕಳೆದುಕೊಂಡಿದ್ದು, ಇವುಗಳ ದಾಖಲಾತಿಗೆ ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿಲ್ಲ.
ವಿಜ್ಞಾನ ವಿಭಾಗದಲ್ಲಿ ರಸಾಯನವಿಜ್ಞಾನ, ಜೈವಿಕತಂತ್ರಜ್ಞಾನ, ಅಪರಾಧಶಾಸ್ತ್ರ, ಸಸ್ಯಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಭೌತವಿಜ್ಞಾನ, ಗಣಿತದಂತಹ ಕೋರ್ಸ್‌ಗಳಿಗೂ ಕೆಲ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿಯಾಗಿದೆ. ಒಟ್ಟಿನಲ್ಲಿ ಮೂರು ವಿಷಯಗಳನ್ನು ಒಳಗೊಂಡಿರುವ 78 ಸಂಯೋಜನೆಗಳಿಗೆ ವಿದ್ಯಾರ್ಥಿಗಳೇ ಬಂದಿಲ್ಲ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.

ಕೆಲ ಕಡೆ ಒಂದಂಕಿಯೂ ದಾಟಿಲ್ಲ

ಅಷ್ಟೇ ಅಲ್ಲದೆ, ಜಿಲ್ಲೆಯ 8 ಕಾಲೇಜಿನಲ್ಲಿರುವ ಕೆಲ ಸಂಯೋಜಿತ ಕೋರ್ಸ್‌ಗಳಿಗೆ 4, 6, 7ನಂತೆ ವಿದ್ಯಾರ್ಥಿಗಳು ದಾಖಲಾಗಿದ್ದು, ಒಟ್ಟಾರೆ ಪ್ರವೇಶಾತಿ 10ರ ಗಡಿ ಸಹ ದಾಟಿಲ್ಲ.

ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ

ನಗರದಲ್ಲಿರುವ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿರುವ ಬಿ.ಎ. ಪದವಿ ಕೋರ್ಸ್‌ಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಒಂದಂಕಿಯನ್ನೂ ಮೀರಿಲ್ಲ. ಧರ್ಮಶಾಸ್ತ್ರ 1, ನವೀನ ನ್ಯಾಯಶಾಸ್ತ್ರ 5, ಸಾಮವೇದ ಕ್ರಮಂತ್ರ 8, ಅದ್ವೈತ ವೇದಾಂತ 7, ಅಲಂಕಾರ ಶಾಸ್ತ್ರ 7, ಪೂರ್ಣಿಮೆಮಾಸ ಶಾಸ್ತ್ರ 3, ದ್ವೈತ ವೇದಾಂತ 4 ಸೇರಿದಂತೆ ಕೇವಲ 47 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 
ಬೇಡಿಕೆ ಇಲ್ಲದ ಕೋರ್ಸ್‌ಗಳನ್ನು ಮುಂದುವರಿಸುವುದು ಆರ್ಥಿಕ ಭಾರವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆಯ ಕಾರಣ ಇಂತಹ ಕೋರ್ಸ್‌ಗಳನ್ನು ಕಾಲೇಜು ಶಿಕ್ಷಣ ಇಲಾಖೆ ರದ್ದು ಮಾಡಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಿಂದಲೇ ಶುರು ಮಾಡಲು ಅನುಮತಿ ನೀಡಿದೆ.

ಹೊಸ ಕೋರ್ಸ್‌ಗಳಿಗೆ ಅವಕಾಶ

ಬಿ.ಬಿ.ಎ., ಬಿ.ಎಸ್.ಸಿ. ಹಾಗೂ ಸಮಾಜಕಾರ್ಯ, ಕೌಶಲ ಮತ್ತು ಉದ್ಯೋಗಾಧಾರಿತ ವಿಷಯಗಳ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕೆಲ ಕೋರ್ಸ್‌ಗಳಿಗೆ ಬೇಡಿಕೆ ಇರುವ ಕಾಲೇಜುಗಳನ್ನು ಗುರುತಿಸಿದ್ದು, ಗರಿಷ್ಠ 100 ವಿದ್ಯಾರ್ಥಿಗಳವರೆಗೆ ಹೆಚ್ಚುವರಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಂಬಂಧಿಸಿದ ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರ ವಿಶ್ವವಿದ್ಯಾಲಯಗಳಿಂದ ಸಂಯೋಜನೆ ಪಡೆದು, ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದೂ ಷರತ್ತು ಹಾಕಲಾಗಿದೆ. 

ಪ್ರವೇಶಾತಿ ಹೆಚ್ಚಿಸಲು, ತಗ್ಗಿಸಲು ಅನುಮತಿ

ಪ್ರಸ್ತಕ ಸಾಲಿನಿಂದಲೇ ಬೇಡಿಕೆ ಇರುವ ಕೋರ್ಸ್‌ಗಳ ಪ್ರವೇಶಾತಿ ಮಿತಿ ಹೆಚ್ಚಿಸಿ, ಕಡಿಮೆ ಬೇಡಿಕೆ ಇರುವ ಕೋರ್ಸ್‌ಗಳ ಪ್ರವೇಶಾತಿಯನ್ನು ತಗ್ಗಿಸಲು ಸಹ ಒಪ್ಪಿಗೆ ನೀಡಲಾಗಿದೆ. ವಿವಿಧ ಕಾರಣಗಳಿಂದಾಗಿ ದಾಖಲಾತಿ ಕೊರತೆ ಇರುವ ಹಳೇ ಕೋರ್ಸ್‌ಗಳ, ಸಂಯೋಜನೆಗಳನ್ನೂ ಮುಚ್ಚಲು ಅನುಮತಿಯನ್ನು ಸಹ ನೀಡಿದ್ದು, ಈ ಕುರಿತು ಜಿಲ್ಲೆಯ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಸುತ್ತೋಲೆಯನ್ನೂ ಕಳುಹಿಸಲಾಗಿದೆ. 

ದಾಖಲಾತಿ ಕುಸಿತಕ್ಕೆ ಕಾರಣ ಏನು?

ಪದವಿ ಕಾಲೇಜುಗಳಲ್ಲಿ ದಾಖಲಾತಿ ಕಡಿಮೆಯಾಗಲು ಪ್ರಮುಖವಾಗಿ ಉದ್ಯೋಗಾವಕಾಶಗಳ ಕೊರತೆ, ವೃತ್ತಿಪರ ಕೋರ್ಸ್‌ಗಳ ಕಡೆಗೆ ವಿದ್ಯಾರ್ಥಿಗಳ ಒಲವು ಕಾರಣವಾಗಿವೆ.
ಸಾಂಪ್ರದಾಯಿಕ ಪದವಿಗಳಿಗಿಂತ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ತಾಂತ್ರಿಕ ಕೋರ್ಸ್‌ಗಳು ಉತ್ತಮ ವೇತನದ ಉದ್ಯೋಗಗಳನ್ನು ನೀಡುವುದರಿಂದ ವಿದ್ಯಾರ್ಥಿಗಳು ಆ ಕಡೆ ಆಕರ್ಷಿತರಾಗುತ್ತಿದ್ದಾರೆ. ಕೌಶಲಾಧಾರಿತ ಶಿಕ್ಷಣದ ಬೇಡಿಕೆ, ಆನ್‌ಲೈನ್ ಶಿಕ್ಷಣದ ಪ್ರಭಾವ, ದುಬಾರಿ ಶುಲ್ಕವೂ ಪ್ರಭಾವ ಬೀರಿದ್ದು, ಹೀಗಾಗಿ, ಇಂತಹ ಕೋರ್ಸ್‌ಗಳ ಕುರಿತು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ. ಬೇಡಿಕೆಯಿಲ್ಲದ ವಿಷಯಗಳ ಸಂಯೋಜನೆ, ನುರಿತ ಉಪನ್ಯಾಸಕರ ಅಭಾವ, ಕಾಲೇಜುಗಳಲ್ಲಿ ಮೂಲಸೌಕರ್ಯ ಇಲ್ಲದಿರುವುದು ಸಹ ದಾಖಲಾತಿ ಕುಸಿಯಲು ಮತ್ತೊಂದು ಕಾರಣವಾಗಿದೆ
"

ಜಿಲ್ಲೆಯಲ್ಲಿ ಕೆಲ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಕೋರ್ಸ್‌ಗಳಿಗೆ ದಾಖಲಾತಿ ತೀವ್ರ ಕಡಿಮೆಯಾಗಿದೆ. ಅಂತಹ ಕೋರ್ಸ್‌ಗಳನ್ನು ಕೈಬಿಡಲಾಗಿದೆ. ಬೇಡಿಕೆ ಇರುವ ಹೊಸ ಕೋರ್ಸ್‌ಗಳಿಗೆ ವಿಶ್ವವಿದ್ಯಾಲಯದಿಂದ ಸಂಯೋಜನೆ ಪಡೆದುಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಕೆಲ ಕಡೆ ಪ್ರವೇಶಾತಿ ಸಂಖ್ಯೆಯಲ್ಲಿ ಕಡಿಮೆ, ಬೇಡಿಕೆ ಇರುವ ಕಡೆ ಪ್ರವೇಶಾತಿಯನ್ನು ಹೆಚ್ಚಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net