ಝೆನ್ ಬೌದ್ಧ ಪರಂಪರೆ ಮನುಷ್ಯನನ್ನು ತನ್ನ ಅಂತರಂಗದತ್ತ ಕೊಂಡೊಯ್ಯುವ ವಿಶಿಷ್ಟ ಸಾಧನ : ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಮೈಸೂರು ನಗರದ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಭಾನುವಾರ ಬುದ್ಧಗುರು-ಜೀವನ ಮತ್ತು ಬೋಧನೆ, ಬೋಧಿಸಂ-ನಾನು ಸತ್ತಾಗ ಬುದ್ಧ ಕೃತಿ ಹಾಗೂ ಧಮ್ಮ ಮಿಲನ ಧ್ವನಿ ಸುರುಳಿಯನ್ನು ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಲೋಕಾರ್ಪಣೆಗೊಳಿಸಿದರು. ಪೂಜ್ಯ ಗೌತಮಿ ಮಾತಾ ಭಂತೆ, ಪೂಜ್ಯ ಅನಿರುದ್ಧ ಭಂತೆ, ಪ್ರೊ.ಎಂ.ನೀಲಗಿರಿ ತಳವಾರ್, ಸೋಸಲೆ ಗಂಗಾಧರ್ ಹಾಗೂ ಇತರರು ಇದ್ದರು.
ಮೈಸೂರು ನಗರದ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಭಾನುವಾರ ಬುದ್ಧಗುರು-ಜೀವನ ಮತ್ತು ಬೋಧನೆ, ಬೋಧಿಸಂ-ನಾನು ಸತ್ತಾಗ ಬುದ್ಧ ಕೃತಿ ಹಾಗೂ ಧಮ್ಮ ಮಿಲನ ಧ್ವನಿ ಸುರುಳಿಯನ್ನು ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಲೋಕಾರ್ಪಣೆಗೊಳಿಸಿದರು. ಪೂಜ್ಯ ಗೌತಮಿ ಮಾತಾ ಭಂತೆ, ಪೂಜ್ಯ ಅನಿರುದ್ಧ ಭಂತೆ, ಪ್ರೊ.ಎಂ.ನೀಲಗಿರಿ ತಳವಾರ್, ಸೋಸಲೆ ಗಂಗಾಧರ್ ಹಾಗೂ ಇತರರು ಇದ್ದರು.
Published on
ಮೈಸೂರು: ಬುದ್ಧನ ತತ್ವ ಅರ್ಥಮಾಡಿಕೊಳ್ಳಲು ಧ್ಯಾನ, ಆತ್ಮಾವಲೋಕನ ಹಾಗೂ ಅನುಭವವೇ ಪ್ರಮುಖ ಮಾರ್ಗಗಳಾಗಿದ್ದು, ಝೆನ್ ಬೌದ್ಧ ಪರಂಪರೆ ಮನುಷ್ಯನನ್ನು ತನ್ನ ಅಂತರಂಗದತ್ತ ಕೊಂಡೊಯ್ಯುವ ವಿಶಿಷ್ಟ ಸಾಧನವಾಗಿದೆ ಎಂದು ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ಭಾರತೀಯ ವಿದ್ಯಾರ್ಥಿ ಸಂಘ, ಪ್ರಬುದ್ಧ ಭಾರತ ಪ್ರತಿಷ್ಠಾನ ಹಾಗೂ ಪದ್ಮಪಾಣಿ ಲಲಿತಕಲಾ ಅಕಾಡೆಮಿ ವತಿಯಿಂದ ‘ಧಮ್ಮಚಕ್ಕ ಪವತ್ತನ ದಿನ’ದ ಅಂಗವಾಗಿ ನಗರದ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ್ ರಚನೆಯ ಬುದ್ಧಗುರು-ಜೀವನ ಮತ್ತು ಬೋಧನೆ, ಲೇಖಕ ಸೋಸಲೆ ಗಂಗಾಧರ್ ರಚನೆಯ ಬೋಧಿಸಂ-ನಾನು ಸತ್ತಾಗ ಬುದ್ಧ ಕೃತಿ ಹಾಗೂ ಧಮ್ಮ ಮಿಲನ ಧ್ವನಿ ಸುರುಳಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಝೆನ್ ಎಂದರೆ ಮನುಷ್ಯನನ್ನು ತನ್ನ ಅಂತರಂಗದತ್ತ ಕರೆದೊಯ್ಯುವ ಕಲೆ. ಬುದ್ಧನ ತತ್ವದ ಮೂಲ ಆಶಯವೂ ಇದೇ. ಮನುಷ್ಯನ ಹೊರಗೆ ಯಾವುದೋ ಅದ್ಭುತ ಶಕ್ತಿ ಇಲ್ಲ. ತನ್ನೊಳಗಿನ ಮನಸ್ಸನ್ನು ಅರಿತುಕೊಳ್ಳುವುದೇ ಜ್ಞಾನದ ನಿಜವಾದ ಆರಂಭ. ವಿಶ್ವದೊಂದಿಗೆ ಉತ್ತಮ ಸಂಬಂಧ ಬೆಳೆಸಬೇಕಾದರೆ ಮೊದಲು ತನ್ನನ್ನು ತಾನು ಅರಿತುಕೊಳ್ಳಬೇಕು ಎಂದರು.
ಲೋಕದಲ್ಲಿ ಮೊದಲ ಬಾರಿಗೆ ದೇವರನ್ನು ಬಿಟ್ಟು ಧರ್ಮವನ್ನು ನೀಡಿದವರು ಬುದ್ಧ. ದೇವರು ಮತ್ತು ಆತ್ಮವಿಲ್ಲದ ಧರ್ಮವನ್ನು ಅವರು ಪ್ರತಿಪಾದಿಸಿದರು. ದೇವರು ಹಾಗೂ ಆತ್ಮದ ನಂಬಿಕೆ ಇಲ್ಲದ ಕಾರಣ ಆರಂಭದಲ್ಲಿ ಅನೇಕರು ಅದನ್ನು ಸ್ವೀಕರಿಸಲಿಲ್ಲ. ದೇವರು ಮತ್ತು ಆತ್ಮವಿಲ್ಲದೆ ಧರ್ಮ ಹೇಗೆ ಸಾಧ್ಯ ಎಂಬ ಭಾವನೆಯಿಂದ ಅದನ್ನು ನಿರ್ಲಕ್ಷೃ ಮಾಡಲಾಯಿತು. ಆದರೆ, ಬೌದ್ಧ ಧರ್ಮದ ಆಳವನ್ನು ಅರಿತ ನಂತರ ಅದು ವಿಶ್ವದ ಗಮನ ಸೆಳೆದ ಎಲೈಟ್ ಧರ್ಮವಾಗಿ ರೂಪುಗೊಂಡಿದೆ. ಪಾಶ್ಚಾತ್ಯರು, ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು ಇದರ ಪ್ರಭಾವಕ್ಕೆ ಒಳಗಾಗುತ್ತಿದ್ದು, ವಿಶ್ವವಿದ್ಯಾನಿಲಯಗಳಲ್ಲಿಯೂ ಅಧ್ಯಯನಗಳು ನಡೆಯುತ್ತಿವೆ. ಹೀಗಾಗಿ ಬುದ್ಧ ಧರ್ಮವನ್ನು ಅನುಸರಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಮ್ಮೋಪಾಸಕರಾದ ಆರ್. ಮಹದೇವಪ್ಪ, ಕನಕಪುರ ಮಲ್ಲಿಕಾರ್ಜುನ ಹಾಗೂ ಮೈಸೂರಿನ ಎಚ್.ಎನ್. ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಬೋಧಿಸಂ ಕೃತಿ ಕುರಿತು ಲೇಖಕ ಪ್ರೊ.ಸಿ.ನಾಗಣ್ಣ, ಬುದ್ಧಗುರು ಕೃತಿ ಕುರಿತು ಕವಿ ಸುಬ್ಬು ಹೊಲೆಯಾರ್ ಮಾತನಾಡಿದರು.
ಪೂಜ್ಯ ಗೌತಮಿ ಮಾತಾ ಭಂತೆ, ಪೂಜ್ಯ ಅನಿರುದ್ಧ ಭಂತೆ, ಪ್ರಾಧ್ಯಾಪಕ ಪ್ರೊ.ಎಂ.ನೀಲಗಿರಿ ತಳವಾರ್, ಕವಿ ಸೋಸಲೆ ಗಂಗಾಧರ್, ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್, ರಾಮನಗರದ ಬಾಲಕರ ಬಾಲಮಂದಿರದ ಅಧೀಕ್ಷಕಿ ಚಂದ್ರಕಲಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net