ಬಾಡಿಗೆ ವಿಚಾರಕ್ಕೆ ಯುವಕನ ಹತ್ಯೆ

ಕೊಲೆಯಾದ ಎಂ.ಡಿ.ಶಹಬಾಜ್
ಕೊಲೆಯಾದ ಎಂ.ಡಿ.ಶಹಬಾಜ್
Published on

ಪ್ರಮುಖ ಮುಖ್ಯಾಂಶಗಳು

  • ಆರೋಪಿಗಳ ಪತ್ತೆಗೆ ಪೊಲೀಸ್ ಇಲಾಖೆಯಿಂದ 2 ತಂಡ ರಚನೆ
  • ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತದೇಹ ಹಸ್ತಾಂತರ
  • ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಠಾಣೆ ಪೊಲೀಸರು ತನಿಖೆ
ಮೈಸೂರು: ಗೌಸಿಯಾನಗರದಲ್ಲಿ ಬಾಡಿಗೆ ವಿಚಾರವಾಗಿ ಯುವಕನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ.
ಇದೇ ಬಡಾವಣೆಯ ಎಂ.ಡಿ.ಶಹಬಾಜ್(26) ಕೊಲೆಯಾದ ಯುವಕ. ಇಲ್ಲಿಯ ನಿವಾಸಿಯಾಗಿರುವ ಜುಬೇರ್ ಹಾಗೂ ಇತರ ನಾಲ್ವರು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಗೌಸಿಯಾನಗರದಲ್ಲಿರುವ ಪಾರ್ಕಿಂಗ್ ಶೆಡ್‌ನಲ್ಲಿ ಆಟೋರಿಕ್ಷಾ ನಿಲ್ಲಿಸುವ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಗಲಾಟೆಯು ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.
್ಯಾಬ್ರಿಕೇಟರ್ ಆಗಿ ಕೆಲಸ ಮಾಡುತ್ತಿದ್ದ ಶಹಬಾಜ್ ಗೌಸಿಯಾನಗರದಲ್ಲಿ ರಾತ್ರಿ ವೇಳೆ ಆಟೋಪಾರ್ಕಿಂಗ್ ಜಾಗದ ನಿರ್ವಹಣೆ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಸೋಮವಾರ ಮಧ್ಯರಾತ್ರಿ ಸುಮಾರು 1 ಗಂಟೆಯಲ್ಲಿ ಅಲ್ಲಿಗೆ ನಾಲ್ವರೊಂದಿಗೆ ಆಟೋ ನಿಲ್ಲಿಸಲು ಬಂದ ಜುಬೇರ್, ಬಾಡಿಗೆ ವಿಚಾರದಲ್ಲಿ ಕ್ಯಾತೆ ತೆಗೆದು ಗಲಾಟೆ ಶುರು ಮಾಡಿದ್ದು, ಅವರ ನಡುವೆ ಮಾತಿಗೆ ಮಾತು ಬೆಳೆದು ಜಬೇರ್ ಹಾಗೂ ನಾಲ್ವರು ಮಚ್ಚಿನಿಂದ ಮನಸ್ಸೋಇಚ್ಛೆ ಹೊಡೆದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ದೇವರಾಜ ಉಪವಿಭಾಗದ ಎಸಿಪಿ ಕೆ.ರಾಜೇಂದ್ರ, ಉದಯಗಿರಿ ಠಾಣೆ ಇನ್‌ಸ್ಪೆಕ್ಟರ್ ಸುಧಾಕರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸಾಗಿಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮಂಗಳವಾರ ಸಂಜೆ ವಾರಸುದಾರರಿಗೆ ಮೃತದೇಹವನ್ನು ಒಪ್ಪಿಸಲಾಯಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ.ಎಸ್.ಸುಂದರರಾಜ್, ಶ್ವಾನದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿ ಮಾಹಿತಿ ಕಲೆಹಾಕಿದ್ದಾರೆ. 
ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ 2 ತಂಡ ರಚಿಸಿ,  ಶೋಧ ಕಾರ್ಯ ನಡೆಸಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net