ನಿಮ್ಮ ಕಿಡ್ನಿ ಆರೋಗ್ಯ ನಿಮ್ಮ ಕೈಯಲ್ಲಿ

 kidney safety
kidney safety
Published on

ಪ್ರಮುಖ ಮುಖ್ಯಾಂಶಗಳು

  • ದೀರ್ಘಕಾಲದ ಮೂತ್ರಪಿಂಡದ ಸುರಕ್ಷತೆಗಾಗಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಿಂದ ಮಹತ್ವದ ಮಾರ್ಗಸೂಚಿ
ಮೈಸೂರು: ಭಾರತ ಸೇರಿದಂತೆ ವಿಶ್ವದಾದ್ಯಂತ ಮೂತ್ರಪಿಂಡ ಕಾಯಿಲೆಗಳು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಹೊರಹೊಮ್ಮುತ್ತಿವೆ. ದೀರ್ಘಕಾಲದ ಮೂತ್ರ ಪಿಂಡ ಸಮಸ್ಯೆಗಳು (CKD) ಲಕ್ಷಾಂತರ ಭಾರತೀಯರನ್ನು ಬಾಧಿಸುತ್ತಿದ್ದು, ರೋಗ ಪತ್ತೆಯಾಗುವ ಮುನ್ನವೇ ಇದು ಸದ್ದಿಲ್ಲದೆ ಗಂಭೀರ ಹಂತ ತಲುಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಕರ್ನಾಟಕದಲ್ಲೂ ಈ ಕಾಯಿಲೆಯ ಹೊರೆ ಹೆಚ್ಚಾಗುತ್ತಿದ್ದು, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಅಂತಿಮ ಹಂತದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರು ಹಾಗೂ ದೀರ್ಘಕಾಲೀನ ಡಯಾಲಿಸಿಸ್ ಮೇಲೆ ಅವಲಂಬಿತರಾಗಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳು ಇದಕ್ಕೆ ಹೊರತಾಗಿಲ್ಲ. ತಿಳುವಳಿಕೆಯ ಕೊರತೆ, ವಿಳಂಬವಾದ ತಪಾಸಣೆ ಮತ್ತು ತಡವಾದ ರೋಗನಿರ್ಣಯವು ಪರಿಣಾಮಕಾರಿ ಮೂತ್ರಪಿಂಡ ಆರೈಕೆಗೆ ದೊಡ್ಡ ಅಡೆತಡೆಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಹಿನ್ನೆಲೆಯಲ್ಲಿ, ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಜನರಲ್ಲಿ ಅರಿವು ಮೂಡಿಸಲು ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಭಾನುವಾರ (ಮಾ.15) 'ಮಣಿಪಾಲ್ ಆರೋಗ್ಯ ಸಭೆ' ಅನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪ್ರಮುಖ ನೆಫ್ರಾಲಜಿ ಮತ್ತು ಯೂರಾಲಜಿ ತಜ್ಞರು ಭಾಗವಹಿಸಿ, ಕಿಡ್ನಿ ಕಾಯಿಲೆಗಳು, ಆರಂಭಿಕ ಲಕ್ಷಣಗಳು ಮತ್ತು ಲಭ್ಯವಿರುವ ಸುಧಾರಿತ ಚಿಕಿತ್ಸೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನೆಫ್ರಾಲಜಿ ವಿಭಾಗದ ಕನ್ಸಲ್ಟೆಂಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಫಿಸಿಷಿಯನ್ ಡಾ. ವಿಪಿನ್ ಕಾವೇರಪ್ಪ ಪಿ.ಟಿ. ಮಾತನಾಡಿ, "ಕಿಡ್ನಿ ಕಾಯಿಲೆಯು ಒಂದು 'ಮೌನ ಕಾಯಿಲೆ'. ಹೆಚ್ಚಿನ ಪ್ರಕರಣಗಳಲ್ಲಿ ಇದು ಯಾವುದೇ ಲಕ್ಷಣಗಳಿಲ್ಲದೆ ವರ್ಷಗಳ ಕಾಲ ಇರಬಹುದು. ರೋಗ ಲಕ್ಷಣಗಳು ಗೋಚರಿಸುವ ಹೊತ್ತಿಗೆ ಮೂತ್ರಪಿಂಡದ ಕೆಲಸ ಮಾಡುವ ಸಾಮರ್ಥ್ಯ ಬಹಳ ಕಡಿಮೆಯಾಗಿರುತ್ತದೆ. ಪ್ರಸ್ತುತ ಮಧುಮೇಹ (ಡಯಾಬಿಟಿಸ್) ಮತ್ತು ರಕ್ತದೊತ್ತಡ (ಹೈಪರ್‌ಟೆನ್ಶನ್) ಕಿಡ್ನಿ ಹಾನಿಗೆ ಪ್ರಮುಖ ಕಾರಣಗಳಾಗಿವೆ. ಜೀವನಶೈಲಿಯ ಬದಲಾವಣೆಯಿಂದ ಯುವಜನತೆಯಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಸಕ್ಕರೆ ಮತ್ತು ಬಿಪಿ ನಿಯಂತ್ರಣ, ಆಗಾಗ ಆರೋಗ್ಯ ತಪಾಸಣೆ ಹಾಗೂ ದೈಹಿಕ ಚಟುವಟಿಕೆಯುಳ್ಳ ಜೀವನಶೈಲಿಯಿಂದ ಕಾಯಿಲೆಯನ್ನು ಆರಂಭದಲ್ಲೇ ತಡೆಗಟ್ಟಬಹುದು" ಎಂದು ಸಲಹೆ ನೀಡಿದರು.
ಡಾ. ದಿನೇಶ್‌ಕುಮಾರ್ ಟಿ.ಪಿ., ಕನ್ಸಲ್ಟೆಂಟ್ - ಯೂರಾಲಜಿ, ಆಂಡ್ರಾಲಜಿ ಹಾಗೂ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಅವರು ಕಿಡ್ನಿ ಸ್ಟೋನ್ ಸಮಸ್ಯೆಯ ಬಗ್ಗೆ ವಿವರಿಸಿದರು. "ಇಂದು ಲೇಸರ್ ಆಧಾರಿತ ಮತ್ತು ಎಂಡೋಸ್ಕೋಪಿಕ್‌ನಂತಹ ಕನಿಷ್ಠ ಶಸ್ತ್ರಚಿಕಿತ್ಸೆ ತಂತ್ರಜ್ಞಾನಗಳ ಮೂಲಕ ಎಷ್ಟೇ ಗಂಭೀರ ಶಸ್ತ್ರಚಿಕಿತ್ಸೆ ಪ್ರಕರಣಗಳಿದ್ದರೂ ಕಡಿಮೆ ನೋವು ಮತ್ತು ತ್ವರಿತ ಚೇತರಿಕೆಯೊಂದಿಗೆ ನಿಖರವಾಗಿ ಚಿಕಿತ್ಸೆ ನೀಡಬಹುದು. ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ (ಡಿಹೈಡ್ರೇಶನ್) ಹಾಗೂ ತಪ್ಪು ಆಹಾರ ಪದ್ಧತಿಯಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ಕಾಣಿಸಿಕೊಳ್ಳುವ ಬೆನ್ನುನೋವು, ಮೂತ್ರ ವಿಸರ್ಜನೆ ವೇಳೆ ಉರಿ ಅಥವಾ ರಕ್ತ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಸಾಕಷ್ಟು ನೀರು ಕುಡಿಯುವುದು ಮತ್ತು ಉಪ್ಪಿನ ಸೇವನೆ ಕಡಿಮೆ ಮಾಡುವುದು ಬಹುಮುಖ್ಯ" ಎಂದು ತಿಳಿಸಿದರು. ಇದಲ್ಲದೆ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಅತ್ಯಾಧುನಿಕ 100W ಹೋಲ್ಮಿಯಮ್ ಲೇಸರ್ (100W Holmium laser) ತಂತ್ರಜ್ಞಾನವನ್ನು ಹೊಂದಿದ್ದು, ಗಂಭೀರವಾದ ಕಿಡ್ನಿ ಸ್ಟೋನ್ ಪ್ರಕರಣಗಳಲ್ಲೂ ಅತ್ಯಂತ ನಿಖರ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಜ್ಜಾಗಿದೆ.
ಡಾ. ತಿಮ್ಮಯ್ಯ ಕೆ.ಎ. ಕನ್ಸಲ್ಟೆಂಟ್ - ಯೂರಾಲಜಿ, ಆಂಡ್ರಾಲಜಿ ಹಾಗೂ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್, ಅವರು ಮೂತ್ರಪಿಂಡ ವೈಫಲ್ಯದ ಕೊನೆಯ ಹಂತದ ಕುರಿತು ಮಾತನಾಡಿ, "ಡಯಾಲಿಸಿಸ್ ಜೀವ ಉಳಿಸುವ ಚಿಕಿತ್ಸೆಯಾದರೂ, ಕಿಡ್ನಿ ವೈಫಲ್ಯ ಹೊಂದಿರುವವರಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ (ಕಸಿ) ಅತ್ಯುನ್ನತ ಚಿಕಿತ್ಸೆಯಾಗಿದೆ. ಟ್ರಾನ್ಸ್‌ಪ್ಲಾಂಟ್ ನಂತರ ರೋಗಿಗಳು ಸಹಜ ಜೀವನ ನಡೆಸಬಹುದು. ಜೀವಂತ ದಾನಿಗಳು (Living donor) ಕಿಡ್ನಿ ದಾನ ಮಾಡುವುದರಿಂದ ದಾನಿಗಳ ಭವಿಷ್ಯದ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ" ಎಂದು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದರು. ಅಲ್ಲದೆ, ರಕ್ತದ ಗುಂಪು ಹೊಂದಾಣಿಕೆಯಾಗುವ ದಾನಿಗಳು ಸಿಗದಿದ್ದರೂ ಸಹ, ಈಗ ಕಸಿ ಮಾಡಿಸಿಕೊಳ್ಳಲು ಹೆಚ್ಚಿನ ಅವಕಾಶಗಳಿವೆ (ABO-Incompatible) ಎಂದು ಅವರು ಮಾಹಿತಿ ನೀಡಿದರು.
ಅತ್ಯಾಧುನಿಕ, ಶಸ್ತ್ರಚಿಕಿತ್ಸೆ ಹಾಗೂ ಮೂತ್ರಪಿಂಡ ಕಸಿಯಂತಹ ಚಿಕಿತ್ಸೆಗಳು ಲಭ್ಯವಿದ್ದರೂ, ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚುವುದು ಅತ್ಯಂತ ಪ್ರಮುಖ ಎಂಬ ಸಂದೇಶದೊಂದಿಗೆ ಆರೋಗ್ಯ ಸಭೆ ಮುಕ್ತಾಯವಾಯಿತು. ಮೈಸೂರಿನ ಮಣಿಪಾಲ್ ಆಸ್ಪತ್ರೆಯು ತಪಾಸಣೆ, ಡಯಾಲಿಸಿಸ್‌ನಿಂದ ಹಿಡಿದು ಅತ್ಯಾಧುನಿಕ ಯೂರೋಲಾಜಿಕಲ್ ಚಿಕಿತ್ಸೆ ಹಾಗೂ ಕಿಡ್ನಿ ಕಸಿಯವರೆಗಿನ ಸಮಗ್ರ ಆರೈಕೆ ಸೇವೆಗಳನ್ನು ಒದಗಿಸಲು ಸುಸಜ್ಜಿತವಾಗಿದೆ ಎಂದು ವೈದ್ಯರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net