ಮಾದಕ ಜಾಲಕ್ಕೆ ಯುವ ಜನಾಂಗ ಬಲಿ

  ಮಹಾಜನ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯ  ಸಬ್‌ಇನ್‌ಸ್ಪೆಕ್ಟರ್ ರೂಪೇಶ್ ಮಾತನಾಡಿದರು. ಡಾ.ಬಿ.ಆರ್.ಜಯಕುಮಾರಿ, ಡಾ.ಎಚ್.ಆರ್.ತಿಮ್ಮೇಗೌಡ ಇದ್ದರು.
ಮಹಾಜನ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರೂಪೇಶ್ ಮಾತನಾಡಿದರು. ಡಾ.ಬಿ.ಆರ್.ಜಯಕುಮಾರಿ, ಡಾ.ಎಚ್.ಆರ್.ತಿಮ್ಮೇಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಬ್‌ಇನ್‌ಸ್ಪೆಕ್ಟರ್ ರೂಪೇಶ್ ಬೇಸರ
  • ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಕುರಿತು ಜಾಗೃತಿ ಕಾರ್ಯಕ್ರಮ
  • ಯುವಕರು ಶಿಸ್ತು, ಸಂಯಮ, ರಸ್ತೆಯ ಸುರಕ್ಷತಾ ಕ್ರಮ ಅನುಸರಿಸುವುದು ಸೂಕ್ತ
ಮೈಸೂರು: ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಮನಸ್ಸು ಮತ್ತು ದೇಹದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಬಹುತೇಕ ಯುವ ಜನಾಂಗ ಮದ್ಯ ಸೇವನೆ ಮಾಡಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿ ಮರಣ ಹೊಂದುತ್ತಿರುವ ಸಾಕಷ್ಟು ನಿದರ್ಶನಗಳಿವೆ ಎಂದು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರೂಪೇಶ್ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಪ್ರಜ್ಞಾವಂತ ನಾಗರಿಕರಾಗಬೇಕಿದ್ದ ಯುವ ಜನಾಂಗ ತಮ್ಮ ಸುರಕ್ಷತೆ ಕಾಪಾಡಿಕೊಳ್ಳದೆ ಜೀವ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದರೆ ಆತಂಕ ಉಂಟಾಗುತ್ತದೆ. ಜೀವನಕ್ಕೆ ಆಧಾರವಾದ ತಮ್ಮ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಗಳು ಜೀವ ವಿಮೆಯಿಂದ ಬರುವ ಅನುಕೂಲಗಳಿಂದ ವಂಚಿತರಾಗುತ್ತಿರುವುದು ದುರಂತ. ಯುವಕರು ಶಿಸ್ತು, ಸಂಯಮ, ರಸ್ತೆಯ ಸುರಕ್ಷತಾ ಕ್ರಮ ಅನುಸರಿಸುವುದು ಸೂಕ್ತ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿಗೆ ತಾವೇ ಜವಾಬ್ದಾರರು. ನಿಮ್ಮ ಸಂತೋಷ ನಿಮ್ಮ ಕೈಯಲ್ಲಿದೆ. 
ಇದನ್ನು ಕಾಪಾಡಿಕೊಳ್ಳಬೇಕೆಂದರೆ ನಿಮ್ಮ ಸುತ್ತಮುತ್ತಲಿರುವ ಇಂತಹ ದುಶ್ಚಟಗಳಿಂದ ದೂರವಿರಬೇಕು. ಸಮಾಜವನ್ನು ಸುಧಾರಣೆ ಮಾಡುವ ನೈತಿಕ ಹೊಣೆಗಾರಿಕೆ ನಿಮ್ಮದಾಗಿದ್ದರೂ, ಅದಕ್ಕಿಂತ ಮೊದಲು ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
 ಪೊಲೀಸ್ ಸಿಬ್ಬಂದಿ ಶ್ರೀನಿವಾಸ್, ಸುಮಾ, ಅಮೃತಾ, ದೇವರಾಜು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಸಹ ಪ್ರಾಧ್ಯಾಪಕರಾದ ಡಾ.ವಿನೋದಮ್ಮ, ನಾಗೇಶ್, ಜೆ.ಮನೋಜ್‌ಕುಮಾರ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net