

ಜಂಬೂಸವಾರಿ ಮೆರವಣಿಗೆ ವೀಕ್ಷಿಸುವ ವೇಳೆ ಪೊಲೀಸ್ ಲಾಠಿ ಏಟಿನಿಂದ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಬಾಲಕಿ ಶಿಶಿರಾ ಚೇತರಿಸಿಕೊಂಡಿದ್ದು, ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ.
ಬನ್ನಿಮಂಟಪದ ಬಳಿಯ ಹೈವೇ ವೃತ್ತದಲ್ಲಿ ಕುಟುಂಬದವರೊಂದಿಗೆ ಜಂಬೂ ಸವಾರಿ ವೀಕ್ಷಿಸುತ್ತಿದ್ದ ಶಿಶಿರಾ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಬಾಲಕಿ ಗುಣಮುಖಳಾಗಿದ್ದು, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾಳೆ.
ಬಾಲಕಿಯ ಚಿಕಿತ್ಸೆಗೆ ಒಟ್ಟು 4.50 ಲಕ್ಷ ರೂ. ವೈದ್ಯಕೀಯ ಬಿಲ್ ಆಗಿದ್ದು, ಪಾಲಕರು ಈಗಾಗಲೇ 2.50 ಲಕ್ಷ ರೂ. ಪಾವತಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಲಕಿಗೆ ಅಗತ್ಯವಿರುವ ಎಲ್ಲ ರೀತಿಯ ಅತ್ಯುತ್ತಮ ವೈದ್ಯಕೀಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ವೈಯಕ್ತಿಕವಾಗಿಯೂ ಧನಸಹಾಯ ಮಾಡಿದ್ದರು. ಹೀಗಾಗಿ, ಪಾಲಕರು ಉಳಿದ ಹಣವನ್ನು ಆಸ್ಪತ್ರೆಗೆ ಪಾವತಿಸಿಲ್ಲ. ಈಗಾಗಲೇ ಪಾವತಿಸಿರುವ 2.50 ಲಕ್ಷ ರೂ. ಮೊತ್ತವನ್ನೂ ಸರ್ಕಾರ ಭರಿಸಲಿದೆ ಎಂಬ ನಿರೀಕ್ಷೆಯಲ್ಲಿ ಪಾಲಕರಿದ್ದಾರೆ.
ಈ ಸಂಬಂಧ ಬಾಲಕಿಯ ತಂದೆ, ಬನ್ನಿಮಂಟಪದ ನಿವಾಸಿ ಎಚ್.ಕೆ. ನಾಗರಾಜು ನೀಡಿರುವ ದೂರಿನ ಮೇರೆಗೆ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.