ಗ್ರಾಮೀಣ ಪ್ರದೇಶಕ್ಕೂ ಯೋಗಾಯೋಗ!

 ಯೋಗ
ಯೋಗ
Published on

ಪ್ರಮುಖ ಮುಖ್ಯಾಂಶಗಳು

  • ಹಳ್ಳಿಗಳಿಗೂ ಕೊಂಡೊಯ್ಯುವ ಪ್ರಯತ್ನಕ್ಕೆ ವೇದಿಕೆಯಾಗುತ್ತಿರುವ ದಸರಾ
ಅವಿನಾಶ್ ಜೈನಹಳ್ಳಿ ಮೈಸೂರು
ನಾಡಹಬ್ಬ ಮೈಸೂರು ದಸರಾಗೆ ಈ ಬಾರಿ ಯೋಗದ ಮೆರುಗು ಮಾತ್ರವಲ್ಲ, ಗ್ರಾಮೀಣ ಸ್ಪರ್ಶವೂ ದೊರೆಯಲಿದೆ. ಇದುವರೆಗೆ ನಗರ ಪ್ರದೇಶದ ಯೋಗ ತರಗತಿಗಳು ಹಾಗೂ ಉದ್ಯಾನಗಳಿಗೆ ಸೀಮಿತವಾಗಿದ್ದ ಯೋಗಾಭ್ಯಾಸವನ್ನು ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗಕ್ಕೂ ಕೊಂಡೊಯ್ಯುವ ಪ್ರಯತ್ನಕ್ಕೆ ದಸರಾ ವೇದಿಕೆಯಾಗುತ್ತಿದೆ.
ಇದರ ಭಾಗವಾಗಿ ಈ ಬಾರಿ ಸುತ್ತೂರಿನಲ್ಲಿ ಗ್ರಾಮೀಣ ಯೋಗ ದಸರಾ ಆಯೋಜಿಸಲಾಗಿದ್ದು, ಹಳ್ಳಿಗಳಲ್ಲೂ ಯೋಗದ ಮಹತ್ವ ಸಾರಲು ವಿಶೇಷ ಕಾರ್ಯಕ್ರಮ ರೂಪಿಸಲು ಯೋಗ ದಸರಾ ಉಪ ಸಮಿತಿ ಮುಂದಾಗಿದೆ.
ಇದಕ್ಕೆ ನಂಜನಗೂಡು ತಾಲೂಕಿನಲ್ಲಿ ನಡೆಯುತ್ತಿರುವ 90 ದಿನಗಳ ಯೋಗ ಹಬ್ಬ ಪೈಲಟ್ ಯೋಜನೆ ಪ್ರಮುಖ ಹಿನ್ನೆಲೆಯಾಗಿದೆ. ರಾಜ್ಯದಲ್ಲೇ ಪ್ರಾಯೋಗಿಕವಾಗಿ ನಂಜನಗೂಡು ತಾಲೂಕಿನಲ್ಲಿ ಜಾರಿಗೊಂಡಿರುವ ಈ ಯೋಜನೆಯಡಿ ತಾಲೂಕಿನ 45 ಗ್ರಾಮ ಪಂಚಾಯಿತಿಗಳಲ್ಲಿ ಯೋಗಾಭ್ಯಾಸಕ್ಕೆ ಉತ್ತೇಜನ ನೀಡಲಾಗುತ್ತಿದೆ. ಗ್ರಾಮೀಣ ಜನರ ಜೀವನಶೈಲಿಯಲ್ಲಿ ಯೋಗವನ್ನು ಬೆಳೆಸುವುದು ಹಾಗೂ ಆರೋಗ್ಯದ ಕಡೆಗೆ ಅವರನ್ನು ಕೊಂಡೊಯ್ಯುವುದು ಯೋಜನೆಯ ಆಶಯ. ಇದು ಯಶಸ್ವಿಯಾದ ಬಳಿಕ ಮೈಸೂರು ಜಿಲ್ಲೆಯ ಇತರ ತಾಲೂಕುಗಳು ಸೇರಿದಂತೆ ರಾಜ್ಯದಾದ್ಯಂತ ವಿಸ್ತರಿಸುವ ಉದ್ದೇಶವಿದೆ.

ಸುತ್ತೂರಿಗೇಕೆ ಯೋಗ ದಸರಾ?

ನಂಜನಗೂಡು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಯೋಗಾಭ್ಯಾಸಕ್ಕೆ ಸಿಕ್ಕಿರುವ ಸ್ಪಂದನೆ ಹಿನ್ನೆಲೆಯಲ್ಲಿ ಈ ಬಾರಿ ಗ್ರಾಮೀಣ ಯೋಗ ದಸರಾಕ್ಕೆ ಸುತ್ತೂರು ಮತ್ತು ಹುಲ್ಲಹಳ್ಳಿ ಆಯ್ಕೆ ಮಾಡಲಾಗಿದೆ. ಅಕ್ಟೋಬರ್ ಮೂರನೇ ವಾರದಲ್ಲಿ ಒಂದು ದಿನ ಬೆಳಗ್ಗೆ 9 ಗಂಟೆಯಿಂದ ಎರಡೂ ಕಡೆ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ಈ ಕಾರ್ಯಕ್ರಮ ಕೇವಲ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಸೀಮಿತವಾಗುವುದಿಲ್ಲ. ಗ್ರಾಮೀಣ ಭಾಗದಲ್ಲಿ ಯೋಗಾಭ್ಯಾಸ ಮಾಡುತ್ತಿರುವವರನ್ನು ಒಂದೆಡೆ ಸೇರಿಸಿ ಸಾಮೂಹಿಕ ಯೋಗ ಪ್ರದರ್ಶಿಸುವ ಜತೆಗೆ ಯೋಗ ನೃತ್ಯರೂಪಕಗಳಿಗೂ ಅವಕಾಶ ನೀಡಲಾಗುತ್ತದೆ. ಗ್ರಾಮೀಣ ಪ್ರತಿಭೆಗಳಿಗೆ ದಸರಾ ವೇದಿಕೆ ಒದಗಿಸುವ ಉದ್ದೇಶವೂ ಇದರ ಹಿಂದಿದೆ.

ನಗರದಿಂದ ಹಳ್ಳಿಗಳತ್ತ:

ಯೋಗದ ಪ್ರಯೋಜನ ಎಲ್ಲ ವರ್ಗದ ಜನರಿಗೂ ತಲುಪಬೇಕು ಎಂಬ ಆಶಯದೊಂದಿಗೆ ಈ ಬಾರಿ ಯೋಗ ದಸರಾ ಕಾರ್ಯಕ್ರಮಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಮೈಸೂರು ನಗರದ ವಿವಿಧೆಡೆ ನಡೆಯುತ್ತಿದ್ದ ಯೋಗ ಚಟುವಟಿಕೆ ಜತೆಗೆ ಗ್ರಾಮೀಣ ಭಾಗದ ಜನರನ್ನೂ ದಸರಾ ಯೋಗ ಕಾರ್ಯಕ್ರಮದ ಭಾಗವಾಗಿಸುವ ಪ್ರಯತ್ನ ನಡೆದಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯ, ಒತ್ತಡ, ಆತಂಕ ಸೇರಿದಂತೆ ಜೀವನಶೈಲಿ ಸಂಬಂಧಿತ ಸಮಸ್ಯೆಗಳ ನಿಯಂತ್ರಣ ಹಾಗೂ ಆರೋಗ್ಯಕರ ಜೀವನಶೈಲಿಗೆ ಯೋಗ ನೆರವಾಗುವ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವುದಕ್ಕೂ ಒತ್ತು ನೀಡಲು ಯೋಗ ದಸರಾ ಉಪ ಸಮಿತಿ ಮುಂದಾಗಿದೆ.

13ರಂದು ವೈಜ್ಞಾನಿಕ ವಿಚಾರ ಸಂಕಿರಣ

ಯೋಗ ದಸರಾಗೆ ಅ.13ರಂದು ಅಧಿಕೃತ ಚಾಲನೆ ದೊರೆಯಲಿದೆ. ಜೆ.ಕೆ.ಮೈದಾನದಲ್ಲಿರುವ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಅಲ್ಯುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಯೋಗ ವೈಜ್ಞಾನಿಕ ವಿಚಾರ ಸಂಕಿರಣ ಹಾಗೂ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಆಯುರ್ವೇದ ವೈದ್ಯರು, ಯೋಗ ತಜ್ಞರು ಹಾಗೂ ಪರಿಣತರು ಭಾಗವಹಿಸಿ ಯೋಗದ ವೈಜ್ಞಾನಿಕ ಮಹತ್ವ, ಆರೋಗ್ಯದ ಮೇಲಿನ ಪರಿಣಾಮ ಹಾಗೂ ಜೀವನಶೈಲಿ ಸುಧಾರಣೆಯಲ್ಲಿ ಅದರ ಪಾತ್ರ ಕುರಿತು ವಿಚಾರ ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನೃತ್ಯರೂಪಕವೂ ನಡೆಯಲಿದ್ದು, ಸುಮಾರು 2,000 ಜನರಿಗೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯಮಟ್ಟದ ಸ್ಪರ್ಧೆ:

ಯೋಗ ದಸರಾ ಅಂಗವಾಗಿ ಈ ಬಾರಿಯೂ ಒಂದು ದಿನ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ ಆಯೋಜಿಸಲು ಯೋಗ ದಸರಾ ಉಪ ಸಮಿತಿ ಮುಂದಾಗಿದ್ದು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಅಕ್ಟೋಬರ್ ಮೂರನೇ ವಾರದಲ್ಲಿ ಒಂದು ದಿನ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಸ್ಪರ್ಧೆ ಆಯೋಜಿಸಲು ಚಿಂತಿಸಿದೆ. ವಿವಿಧ ವಯೋಮಾನದ ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸುವ ಜತೆಗೆ ವಿಜೇತರಿಗೆ ನಗದು ಬಹುಮಾನ ನೀಡಲು ಚರ್ಚೆ ನಡೆಯುತ್ತಿದೆ. ಕಳೆದ ಬಾರಿ ಸುಮಾರು 3,000 ಮಂದಿ ಭಾಗವಹಿಸಿದ್ದು, ಈ ಬಾರಿ ಮತ್ತಷ್ಟು ಯೋಗಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ದಸರಾ ಸಂಭ್ರಮಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಲು ಒಂದು ದಿನ ಚಾಮುಂಡಿ ಬೆಟ್ಟದಲ್ಲಿ ಯೋಗ ಚಾರಣ ಆಯೋಜಿಸಲಾಗಿದೆ. ಬೆಟ್ಟದ ತಪ್ಪಲು ಹಾಗೂ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕಾರ್ಯಕ್ರಮ ನಡೆಸಲು ಚಿಂತಿಸಿದೆ.

ರಾಜ್ಯಕ್ಕೆ ಮಾದರಿಯಾಗುವ ಹೆಜ್ಜೆ:

ನಂಜನಗೂಡಿನಲ್ಲಿ ಆರಂಭವಾಗಿರುವ ಪೈಲಟ್ ಯೋಜನೆ ಹಾಗೂ ಅದರ ಹಿನ್ನೆಲೆಯಲ್ಲೇ ಸುತ್ತೂರು, ಹುಲ್ಲಹಳ್ಳಿಯಲ್ಲಿ ನಡೆಯಲಿರುವ ಗ್ರಾಮೀಣ ಯೋಗ ದಸರಾ, ಯೋಗವನ್ನು ನಗರಗಳಾಚೆಗೂ ಕೊಂಡೊಯ್ಯುವ ಪ್ರಯತ್ನಕ್ಕೆ ಹೊಸ ಆಯಾಮ ನೀಡಿದೆ. ನಂಜನಗೂಡಿನ ಮಾದರಿ ಯಶಸ್ವಿಯಾದರೆ ರಾಜ್ಯದ ಇತರ ಭಾಗಗಳಲ್ಲೂ ಇದೇ ಮಾದರಿಯಲ್ಲಿ ಯೋಗ ಚಟುವಟಿಕೆಯನ್ನು ವಿಸ್ತರಿಸುವ ಚಿಂತನೆ ಇದೆ. ಹೀಗಾಗಿ ಈ ಬಾರಿಯ ಯೋಗ ದಸರಾ ಕೇವಲ ಯೋಗಾಸನ ಪ್ರದರ್ಶನದ ಕಾರ್ಯಕ್ರಮವಲ್ಲ, ನಗರದಿಂದ ಹಳ್ಳಿಗಳತ್ತ ಯೋಗವನ್ನು ಕೊಂಡೊಯ್ಯುವ ಪ್ರಯತ್ನದ ಆರಂಭವೂ ಹೌದು. ಮೈಸೂರು ದಸರಾ ವೇದಿಕೆಯಿಂದ ಗ್ರಾಮೀಣ ಕರ್ನಾಟಕದತ್ತ ಯೋಗದ ಪಯಣ ಆರಂಭವಾಗುತ್ತಿರುವುದು ಈ ಬಾರಿಯ ವಿಶೇಷತೆ.
"

ಈ ಬಾರಿ ಯೋಗ ದಸರಾವನ್ನು ವಿಶೇಷವಾಗಿ ಆಯೋಜಿಸಲಾಗುತ್ತದೆ. ಮುಖ್ಯವಾಗಿ ಈ ಬಾರಿ ಗ್ರಾಮೀಣ ಯೋಗ ದಸರಾ, ಯೋಗ ಸಂಬಂಧ ವೈಜ್ಞಾನಿಕ ವಿಚಾರ ಸಂಕಿರಣ, ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ, ಯೋಗ ಚಾರಣ ಹೀಗೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಸಂಬಂಧ ಈಗಾಗಲೇ ಸಿದ್ಧತೆ ಆರಂಭಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net