ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನಕ ಹಾಗೂ ಬಸವ ಅಧ್ಯಯನ ಪೀಠ ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕ ಹಾಗೂ ಬಸವ ಅಧ್ಯಯನ ಪೀಠ ಪ್ರಾರಂಭಿಸಲು ಸಾಕಷ್ಟು ಬೇಡಿಕೆ ಇದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ಕನಕದಾಸರು ಬಹು ಆಯಾಮದ ವ್ಯಕ್ತಿತ್ವ ಹೊಂದಿದವರು. ಅವರು ದಾಸಶ್ರೇಷ್ಠರು, ಸಾಹಿತಿ, ಕೀರ್ತನೆಕಾರರಾಗಿದ್ದರು. ಮಾತ್ರವ ಲ್ಲದೆ ಅವರು ಸಮಾಜ ಸುಧಾರಕರು ಸಹ ಆಗಿದ್ದರು. ಸಮಾಜದಲ್ಲಿ ಅವಕಾಶ ವಂಚಿತರು ಹಾಗೂ ಶೋಷಿತರ ಪರವಾಗಿ ಅವರು ಧ್ವನಿ ಎತ್ತಿದ್ದರು. ಅವರು ಭಕ್ತಿಪಂಥದಲ್ಲಿ ದಾಸರಾಗಿದ್ದರೂ ವೈಚಾರಿಕತೆ ಕುರಿತು ಮಾತನಾಡಿದರು. ಎಲ್ಲ ಧರ್ಮದಲ್ಲಿ ಇದ್ದ ಮೂಢನಂಬಿಕೆಯನ್ನು ವಿರೋಧಿಸಿದ್ದರು ಎಂದು ಹೇಳಿದರು.
ಅಂತರಂಗ ಶುದ್ಧಿ ಇದ್ದರೆ ಮಾತ್ರ ನಿಜವಾದ ಭಕ್ತರಾಗಲು ಸಾಧ್ಯ ಎಂಬುದು ಕನಕದಾಸರ ಅಭಿಪ್ರಾಯವಾಗಿತ್ತು. ಸ್ವತಃ ಕನಕದಾಸರೇ ಜಾತಿ ತಾರತಮ್ಯವನ್ನು ಎದುರಿಸಿದರು. ನಮ್ಮ ಮನಸ್ಸು ಶುದ್ಧಿಯಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು ಎಂದರು.
ವರ್ಣ ವ್ಯವಸ್ಥೆಯಲ್ಲಿ ಚಲನಶೀಲತೆ ಇರುವುದಿಲ್ಲ. ನಾವು ಯಾವ ಜಾತಿಯಲ್ಲಿ ಹುಟ್ಟಿರುತ್ತೇವೆಯೋ ಅದೇ ಜಾತಿಯಲ್ಲಿ ಇರಬೇಕು. ಬೇಕಿದ್ದಲ್ಲಿ ಧರ್ಮವನ್ನು ಬದಲಾಯಿಸಬಹುದು. ಆದರೆ, ಜಾತಿ ಬದಲಾಯಿಸಲು ಸಾಧ್ಯವಿಲ್ಲ. ಶೂದ್ರ ಎಂದಿಗೂ ಬ್ರಾಹ್ಮಣ ಆಗಲು ಸಾಧ್ಯವಿಲ್ಲ. ವರ್ಣ ವ್ಯವಸ್ಥೆ ಚಲನಶೀಲತೆ ಇಲ್ಲದ ಹಿನ್ನೆಲೆಯಲ್ಲಿ ಜಡ್ಡುಗಟ್ಟು ಹೋಗಿದೆ. ಸಂವಿಧಾನ ಇಲ್ಲದೆ ಹೋಗಿದ್ದರೆ ಜಾತಿ ವ್ಯವಸ್ಥೆ ಇನ್ನೂ ಕಠಿಣವಾಗಿರುತಿತ್ತು. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಶೋಷಿತರಿಗೆ ಸ್ವಲ್ಪವಾದರೂ ಸಮಾಧಾನ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಕನಕ ಜಯಂತಿ ಆಚರಿಸಿದರೆ ಸಾಲದು ಅವರ ಆಶಯಗಳನ್ನು ಜಾರಿಗೆ ತರಬೇಕು. ಅಸಮಾನತೆಯನ್ನು ಪ್ರತಿಪಾದಿಸುವವರನ್ನು ವಿರೋಧಿಸಬೇಕು. ಯುವ ಸಮುದಾಯ ಸಮಾನತೆ ಆಶಯ ಇಟ್ಟುಕೊಂಡರೆ ಸಮಾಜ ಬದಲಾವಣೆ ಸಾಧ್ಯವಿದೆ. ಅಸಮಾನತೆ ಪ್ರತಿಪಾದಿಸುವ ಸಾಕಷ್ಟು ಸಿದ್ಧಾಂತ ಇದ್ದು, ಅವುಗಳನ್ನು ತಿರಸ್ಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಶಿಕಾಂತ್ ಎಸ್. ಉಡುಕೇರಿ ಮಾತನಾಡಿ, ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಿ, ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಕನಕದಾಸರ ಹೆಸರನ್ನು ಯಾವುದಾದರು ಒಂದು ವಿಶ್ವವಿದ್ಯಾಲಯಕ್ಕೆ ಇಡಬೇಕು. ಕನಕನಕಿಂಡಿಗೆ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಮಾತನಾಡಿ, ಕಾಳಿಕಾದೇವಿಯು ಕಾಳಿದಾಸನ ನಾಲಗೆಯ ಮೇಲೆ ಅಕ್ಷರ ಬರೆದ ನಂತರ ಅವರಿಗೆ ಸಂಸ್ಕೃತ ಬಂತು ಎಂಬುದು ಕಟ್ಟುಕತೆ. ಆದರೆ, ವಾಸ್ತವವಾಗಿ ಶೋಷಿತ ಸಮುದಾಯದವರ ನಾಲಗೆ ಮೇಲೆ ಅಕ್ಷರ ಬರೆದವರು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಎಲ್ಲರು ಶಿಕ್ಷಣ ಪಡೆಯುವಂತಾಯಿತು ಎಂದು ಹೇಳಿದರು.
ಕನಕದಾಸರು, ಪುರಂದರದಾಸರು, ಜಗನ್ನಾಥದಾಸರು ಜಗತ್ತಿನ ಉದ್ಧಾರಕ್ಕಾಗಿ ಹಾಗೂ ಮಾನವ ಕುಲದ ಉದ್ಧಾರಕ್ಕೆ ಶ್ರಮಿಸಿದರು. ಅವರು ಎಂದಿಗೂ ಜಾತಿಯ ಕಾರಣಕ್ಕೆ ಅವರು ಕೆಲಸ ಮಾಡಿದವರಲ್ಲ. ಅವರ ಚಿಂತನೆ, ಆದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀಣ್ ಕುಮಾರ್, ಶೈಕ್ಷಣಿಕ ಡೀನ್ ಪ್ರೊ.ಎಂ. ರಾಮನಾಥಂ ನಾಯ್ಡು, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್. ಆನಂದ ಕುಮಾರ್, ಹಣಕಾಸು ಅಧಿಕಾರಿ ಪ್ರೊ. ಎಸ್. ನಿರಂಜನ್ ರಾಜ್ , ಅಧ್ಯಯನ ಕೇಂದ್ರದ ಡೀನ್ ಡಾ.ಎನ್.ಆರ್. ಚಂದ್ರೇಗೌಡ, ಕಾರ್ಯಕ್ರಮ ಸಂಯೋಜಕ ಡಾ.ಎಸ್. ಶ್ರೀಕಾಂತ್ ಇದ್ದರು.