ಸಬಲೀಕರಣಕ್ಕಾಗಿ ಮಹಿಳಾ ಮೀಸಲು ಅಗತ್ಯ: ಮಾಳವಿಕಾ ಅವಿನಾಶ್

ಮಾಳವಿಕಾ ಅವಿನಾಶ್ ಸುದ್ದಿಗೋಷ್ಠಿ ನಡೆಸಿದರು
ಮಾಳವಿಕಾ ಅವಿನಾಶ್ ಸುದ್ದಿಗೋಷ್ಠಿ ನಡೆಸಿದರು
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರ ಸಬಲೀಕರಣದ ಜತೆಗೆ ದೇಶದ ಅಭಿವೃದ್ಧಿಯಲ್ಲೂ ಮಹಿಳೆಯರು ನಾಯಕತ್ವ ವಹಿಸಬೇಕು
  • ವಿಶ್ವದ ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ ಈ ರೀತಿಯ ಮೀಸಲಾತಿ ಇಲ್ಲವೆ ಇಲ್ಲ.
ಮೈಸೂರು:ಆರ್ಥಿಕ, ಶೈಕ್ಷಣಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಮಹಿಳೆಯರು ಸಬಲೀಕರಣಗೊಳ್ಳಬೇಕು ಎನ್ನುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಹೇಳಿದರು.
2047ರ ವಿಕಸಿತ ಭಾರತದಲ್ಲಿ ಮಹಿಳೆಯರ ಸಬಲೀಕರಣದ ಜತೆಗೆ ದೇಶದ ಅಭಿವೃದ್ಧಿಯಲ್ಲೂ ಮಹಿಳೆಯರು ನಾಯಕತ್ವ ವಹಿಸಬೇಕು ಎಂಬ ಕಾರಣಕ್ಕಾಗಿ ಪ್ರಧಾನಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2021ರಲ್ಲೇ ಜನಗಣತಿ ಮಾಡಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಜಗಣಗತಿಯನ್ನು 2027ರಲ್ಲಿ ಮಾಡಲಾಗುತ್ತಿದೆ. 2029ರ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ತಿಳಿಸಿದರು.
ಈಗಾಗಲೇ ಅಧಿವೇಶನದಲ್ಲಿ 543 ಸೀಟ್‌ಗಳಿದ್ದು, ಅದನ್ನು 816ಕ್ಕೆ ಹೆಚ್ಚಿಸುತ್ತಿದ್ದಾರೆ. ಇದರಿಂದ ಪುರುಷರಿಗೂ ತಮ್ಮ ಸ್ಥಾನ ತಪ್ಪಿ ಹೋಗುವ ಭಯವೂ ಇಲ್ಲ. ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಾನಗಳನ್ನು ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
21ನೇ ಶತಮಾನದ ಪ್ರಮುಖ ನಿರ್ಣಯಗಳಲ್ಲಿ ಈ ನಿರ್ಣಯವೂ ಒಂದಾಗಿರುತ್ತದೆ. ಇದೊಂದು ಸಂಭ್ರಮದ ಕ್ಷಣವಾಗಿದ್ದು, ಭಾರತದ ಮಹಿಳೆಯರಲ್ಲದೆ ವಿಶ್ವದ ಮಹಿಳೆಯರು ಸಂಭ್ರಮಿಸುವ ಕ್ಷಣ ಎಂದರು.
ವಿಶ್ವದ ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ ಈ ರೀತಿಯ ಮೀಸಲಾತಿ ಇಲ್ಲವೆ ಇಲ್ಲ. ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಮಹಿಳಾ ಮೀಸಲಾತಿ ವಿಚಾರದಲ್ಲಿ ಎಲ್ಲರೂ ಒಕ್ಕೂರಲಿನಿಂದ ಈ ಕಾಯ್ದೆಯನ್ನು ಸ್ವಾಗತಿಸಬೇಕು ಎಂದು ಕೋರಿದರು.
ರಾಜಕಾರಣದಲ್ಲಿ ಅವಕಾಶ ಗಳಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಹೀಗಾಗಿ ಒಂದು ವಾರಗಳ ಕಾಲ ಜನಜಾಗೃತಿ ದೃಷ್ಟಿಯಲ್ಲಿ ರಾಜ್ಯದ 15 ಭಾಗಳಲ್ಲಿ ನಾರಿಶಕ್ತಿ ಸಮ್ಮೇಳನ, ನಾರಿಶಕ್ತಿ ಪಾದಯಾತ್ರೆ, ಬೈಕ್ ಮತ್ತು ಸ್ಕೂಟಿ ರ‌್ಯಾಲಿ ನಡೆಯುತ್ತಿದೆ. ಜತೆಗೆ ಮಾನವ ಸರಪಳಿ, ಸಾಮಾಜಿಕ ಮಾಧ್ಯಮದ ಮೂಲಕ ಜಾಗೃತಿ, ಲೇಖನದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂಭ್ರಮದ ಕ್ಷಣದಲ್ಲಿ ಮಹಿಳೆಯರು ಭಾಗವಹಿಸಬೇಕೆಂಬ ದೃಷ್ಟಿಯಿಂದ ಹಾಗೂ ತಮ್ಮ ಅನುಭವವನ್ನು ತಿಳಿಸಬೇಕೆಂಬ ದೃಷ್ಟಿಯಿಂದ ಸಹಿ ಸಂಗ್ರಹ ಅಭಿಯಾನವನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಇರುವಂತೆ ಒಂದೇ ಕುಟುಂಬದ ವಂಶಪಾರಂಪರ್ಯ ಇಲ್ಲ. ಬಿಜೆಪಿಯಲ್ಲಿ ಇಲ್ಲಿ ತಳಮಟ್ಟದ ಕಾರ್ಯಕರ್ತರೂ ಉನ್ನತ ಹುದ್ದೇಗೇರುತ್ತಾರೆ ಎನ್ನ್ನುವುದಕ್ಕೆ ಹಲವು ನಿರ್ದಶನಗಳಿವೆ ಎಂದು ಹೇಳಿದರು.
ರಾಜ್ಯ ಮಹಿಳಾ ಬಿಜೆಪಿ ಮೋರ್ಚಾದ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನಿ, ನಿಕಟ ಪೂರ್ವ ರಾಜ್ಯಾಧ್ಯಕ್ಷೆ ವೀಣಾ ಪ್ರಕಾಶ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net