ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿದ್ದಾರೆ ಮಹಿಳೆಯರು: ಸುತ್ತೂರು ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅಭಿಮತ
ಮೈಸೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬ್ರಿಂದಾ ಸುಹಾಸ್, ಕೀರ್ತನಾ ಅವರನ್ನು ಸನ್ಮಾನಿಸಲಾಯಿತು. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಪಿ.ಶಿವರಾಜು, ಎಚ್.ವಿ.ಬಸವರಾಜು, ಎಂ.ಚಂದ್ರಶೇಖರ್, ಧನ್ಯಾ ಸತ್ಯೇಂದ್ರಮೂರ್ತಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಹಿಳೆ ಕೃಷಿಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕಂಪನಿಗಳನ್ನೂ ಮುನ್ನಡೆಸುತ್ತಾಳೆ
ಶ್ರದ್ಧೆ, ಬದ್ಧತೆ ಇದ್ದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದರೂ ಸಾಧನೆ ಮಾಡಬಹುದು
ಮೈಸೂರು:ಮನೆಗೆ ಸೀಮಿತ ಎನ್ನುವಂತಿದ್ದ ಮಹಿಳೆಯರು ಪ್ರಸ್ತುತ ಹೊರಗೆ ದುಡಿಯುವ ಮೂಲಕ ಇಡೀ ಕುಟುಂಬ, ಸಮಾಜದಲ್ಲಿಯೂ ಎತ್ತರದ ಸ್ಥಾನದಲ್ಲಿದ್ದಾರೆ ಎಂದು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದಿಂದ ನಗರದ ಶ್ರೀರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಮಹಿಳೆಯರು ಎಂದರೆ ಮಕ್ಕಳನ್ನು ಓದಿಸಬೇಕು, ಮನೆ ನಿಭಾಯಿಸುವವರು ಎಂಬ ಮಾತಿತ್ತು. ಆದರೆ ಇಂದು ಮನೆ ಜತೆಗೆ ಹೊರಗೂ ದುಡಿಯುವ ಮೂಲಕ ಕುಟುಂಬ, ನಿರ್ವಹಿಸುವ ಮುಖಾಂತರ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ತಿಳಿಸಿದರು.
ಕೃಷಿಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕಂಪನಿಗಳನ್ನೂ ಮುನ್ನಡೆಸುವ ಮೂಲಕ ಮಹಿಳೆಯರು ನಾವೂ ಸಾಧಕರು ಎಂಬುದನ್ನು ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರದ್ಧೆ, ಬದ್ಧತೆ ಇದ್ದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದರೂ ಸಾಧನೆ ಮಾಡಬಹುದು ಎಂಬುದನ್ನು ಹಲವರು ನಿರೂಪಿಸಿದ್ದಾರೆ. ಪ್ರಸ್ತುತ ಸಾಕಷ್ಟು ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಪಡೆಯುವವರಲ್ಲಿ ಶೇ.80 ರಷ್ಟು ವಿದ್ಯಾರ್ಥಿನಿಯರೇ ಇರುತ್ತಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಸಾಧನೆ ಮಾಡಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಎಸ್ಸಿಯಲ್ಲಿ ಚಿನ್ನದ ಪದಕ ಪಡೆದ ಕೀರ್ತನಾ, ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಬ್ರಿಂದಾ ಸುಹಾಸ್ ಅವರನ್ನು ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು, ಬಸವ ಜಯಂತಿ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಧನ್ಯಾ ಸತ್ಯೇಂದ್ರಮೂರ್ತಿ ಇತರರು ಇದ್ದರು.