ಮಹಿಳೆಯರಿಗೆ ಪಾರ್ಕ್ ನಿರ್ವಹಣೆ ಹೊಣೆ

 ಮಹಿಳಾ ಸ್ವ ಸಹಾಯ ಸಂಘದಿಂದ ಪಾರ್ಕ್ ನಿರ್ವಹಣೆ
ಮಹಿಳಾ ಸ್ವ ಸಹಾಯ ಸಂಘದಿಂದ ಪಾರ್ಕ್ ನಿರ್ವಹಣೆ
Published on
ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಜತೆಗೆ ಉದ್ಯಾನಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾೃನ್ ರೂಪಿಸಿದೆ. ತನ್ನ ವ್ಯಾಪ್ತಿಯ 10 ಪಾರ್ಕ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಆರು ಮಹಿಳಾ ಸ್ವ ಸಹಾಯ ಸಂಘಗಳಿಗೆ ವಹಿಸಿದೆ.
ನಗರದ ಸೌಂದರ್ಯ ಹೆಚ್ಚಿಸುವಲ್ಲಿ ಉದ್ಯಾನಗಳು ಪ್ರಮುಖ ಪಾತ್ರ ವಹಿಸಿರುತ್ತವೆ. ಹೀಗಾಗಿ ಕೇಂದ್ರ ಸರ್ಕಾರದ ಅಮೃತ ಮಿತ್ರ ಯೋಜನೆಯಡಿ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನಗರ ಪಾಲಿಕೆ ಮುಂದಾಗಿದೆ. ಮಹಿಳಾ ಸ್ವಸಹಾಯ ಸಂಘದ ಮಹಿಳೆಯರೇ ಉದ್ಯಾನ ಶುಚಿಯಾಗಿಡಲು ಶ್ರಮ ವಹಿಸುತ್ತಾರೆ. ಇದರಿಂದ ಮಹಿಳೆಯರಿಗೆ ಕೆಲಸ ಸಿಗುತ್ತದೆ. ಅವರ ಸಬಲೀಕರಣವೂ ಆಗುತ್ತದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಒಂದು ಸಂಘಕ್ಕೆ ವಾರ್ಷಿಕವಾಗಿ 30 ಲಕ್ಷದವರೆಗೂ ವರ್ಕ್ ಆರ್ಡರ್ ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ವಾರ್ಷಿಕ 60 ಲಕ್ಷ ರೂ. ವೆಚ್ಚದಲ್ಲಿ ಆರು ಮಹಿಳಾ ಸ್ವ ಸಹಾಯಗಳಿಗೆ 10 ಪಾರ್ಕ್‌ಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಪಾಲಿಕೆ ನೀಡಿದೆ. ಪ್ರತಿ ಪಾರ್ಕಿಗೆ 10 ಲಕ್ಷ ವಿನಿಯೋಗಿಸಲಾಗುತ್ತದೆ. ಈ ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಇದೀಗ ಎರಡನೇ ಹಂತದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ 12 ಅಂಶಗಳಿರುವ 47 ಪಾರ್ಕ್‌ಗಳ ಅಭಿವೃದ್ಧಿಗೊಳಿಸಲು ಹೊಸ ಪ್ರಸ್ತಾವನೆಯನ್ನೂ ಪಾಲಿಕೆ ಕೇಂದ್ರಕ್ಕೆ ಸಲ್ಲಿಸಿದೆ. ಇದು ಅನುಮೋದನೆಯಾದರೆ ಮತ್ತಷ್ಟು ಉದ್ಯಾನಗಳು ಅಭಿವೃದ್ಧಿ ಕಾಣಲು ಸಾಧ್ಯವಿದೆ.

ಆಯ್ಕೆ ಹೇಗೆ?:

ಮೊದಲಿಗೆ ಪತ್ರಿಕಾ ಪ್ರಕಟಣೆ ನೀಡಲಾಗುತ್ತದೆ. ಆಸಕ್ತ ಸ್ವ ಸಹಾಯ ಸಂಘದಿಂದ ಬಂದ ಅರ್ಜಿಗಳನ್ನು ಆಂತರಿಕ ಸಮಿತಿಯಲ್ಲಿ ಪರಿಶೀಲಿಸಲಾಗುತ್ತದೆ. ಇದಕ್ಕೆ ಹಲವು ನಿಬಂಧನೆಗಳಿರುತ್ತವೆ. ಸಂಘವು ಸಕ್ರಿಯವಾಗಿ ಕೆಲಸ ಮಾಡುತ್ತಿರಬೇಕು. ಖಾತೆ ನಿರ್ವಹಣೆ ಚೆನ್ನಾಗಿರಬೇಕು. ಸಂಘಕ್ಕೆ ಕನಿಷ್ಠ ಮೂರು ವರ್ಷ ತುಂಬಿರಬೇಕು. ಇದನ್ನು ಪೂರೈಸುವ ಸಂಘಗಳೊಂದಿಗೆ ಒಪ್ಪಂದ ಮಾಡಿಕೊಂಡು ವರ್ಕ್ ಆರ್ಡರ್ ನೀಡಲಾಗುತ್ತದೆ. ಸ್ತ್ರೀ ಶಕ್ತಿ ಸಂಘಗಳ ಖಾತೆಗೆ ಕೇಂದ್ರ ಸರ್ಕಾರ ನೇರ ಹಣ ವರ್ಗಾವಣೆ ಮಾಡುತ್ತದೆ.
ಯಾವೆಲ್ಲಾ ಸಂಘ, ಸಂಸ್ಥೆಗಳಿಗೆ ಸಿಕ್ಕಿದೆ?: ನಾಯ್ಡು ನಗರದ ಸಮ್ಮತಿ ಮಹಿಳಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ರಾಜೀವ್ ನಗರದ ಶ್ರೀ ಲಕ್ಷ್ಮೀ ಸರಸ್ವತಿ ಸ್ವಸಹಾಯ ಸಂಘ, ಅಜೀಜ್ ಸೇಠ್ ನಗರದ ನೂರ್ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘ, ಗುಲ್ಶನ್ ಮಹಿಳಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಅಜೀಜ್ ಸೇಠ್ ನಗರದ ಯಾ ಹಬೀಬಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಶ್ರೀರಾಂಪುರದ ಶ್ರೀ ಅನ್ನಪೂಣೇಶ್ವರಿ ಮಹಿಳಾ ಸ್ವಸಹಾಯ ಸಂಘ.

585 ಪಾರ್ಕ್‌ಗಳ ನಿರ್ವಹಣೆ ಹೇಗೆ?

ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 585 ಪಾರ್ಕ್‌ಗಳಿದ್ದು, ಇದರಲ್ಲಿ 332 ಉದ್ಯಾನಗಳನ್ನು ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿದ್ದಾರೆ. 10 ಪಾರ್ಕ್‌ಗಳನ್ನು ದತ್ತು ಕೊಡಲಾಗಿದೆ. ಉಳಿದ ಪಾರ್ಕ್‌ಗಳನ್ನು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
  1. ಸಂಘಗಳ ಕೆಲಸವೇನು?*ನಿತ್ಯ ಪಾರ್ಕ್‌ನಲ್ಲಿ ಕಸ ಗುಡಿಸಬೇಕು*ಗಿಡ-ಮರಗಳಿಗೆ ನೀರು ಹಾಕಬೇಕು. *ಗಿಡಗಳ ಮಧ್ಯದಲ್ಲಿನ ಕಳೆ ತೆಗೆಯಬೇಕು. *ಎಲೆ ಕಸವನ್ನು ಅಲ್ಲಿಯೇ ಗೊಬ್ಬರ ಮಾಡಬೇಕು.*ಒಣ ಕಸವನ್ನು ಬೇರ್ಪಡಿಸಿ ಪಾಲಿಕೆಗೆ ಕೊಡಬೇಕು.*ಕಾಲಕಾಲಕ್ಕೆ ಗಿಡಗಳನ್ನು ಟ್ರಿಮ್ ಮಾಡಬೇಕು


ಅನುಮೋದನೆಗೊಂಡ ಉದ್ಯಾನಗಳೆಷ್ಟು?

* ಹೈದರಾಲಿ ಉದ್ಯಾನ (ವಾರ್ಡ್ 9)
* ಅಲ್ ಬದರ್ ಮಸೀದಿ ಎದುರಿನ ಉದ್ಯಾನ (ವಾರ್ಡ್ 10)
*ಖುದಾದತ್ ಮಸೀದಿ ಹಿಂಭಾಗದ ಉದ್ಯಾನ (ವಾರ್ಡ್ 10)
*ಆಂಡಾಲಸ್ ಶಾಲೆ ಹಿಂಭಾಗದ ಉದ್ಯಾನ (ವಾರ್ಡ್ 10)
*ಲಿಟಲ್ ಇನ್ಫಂಟ್ ಶಾಲೆ ಹತ್ತಿರದ ಉದ್ಯಾನ (ವಾರ್ಡ್ 11)
*ಶಿವಾಜಿ ಉದ್ಯಾನ (ವಾರ್ಡ್ 29)
*ಬಂಡೆಕಲ್ಲು ಉದ್ಯಾನ (ಸಾತಗಳ್ಳಿ, ವಾರ್ಡ್ 34)
*ರಾಜೀವ್ ಗಾಂಧಿ ಉದ್ಯಾನ (ವಾರ್ಡ್ 34)
*ಶಾಂತಿ ನಗರ ಶಾಲೆ ಎದುರಿನ ತ್ರಿಕೋನಾಕಾರದ ಉದ್ಯಾನ (ವಾರ್ಡ್ 11)
*ಮಧುವನ ಉದ್ಯಾನ (ವಾರ್ಡ್ 64)
"

ನಗರದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಉದ್ಯಾನಗಳು ಪ್ರಮುಖ ಪಾತ್ರ ವಹಿಸಿರುತ್ತವೆ. ಹೀಗಾಗಿ ಕೇಂದ್ರ ಸರ್ಕಾರದ ಅಮೃತ ಮಿತ್ರ ಯೋಜನೆಯಡಿ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನಗರಪಾಲಿಕೆ ಮುಂದಾಗಿದೆ. ಮುಖ್ಯವಾಗಿ ಮಹಿಳಾ ಸಬಲೀಕರಣ ಮತ್ತು ಉದ್ಯಾನಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಅಮೃತ ಮಿತ್ರ ಯೋಜನೆಯಡಿ 10 ಪಾರ್ಕ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಆರು ಮಹಿಳಾ ಸ್ವ ಸಹಾಯ ಸಂಘಗಳಿಗೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net