ಶಿಕ್ಷಣವಿಲ್ಲದಿದ್ದರೆ ಮನುಷ್ಯನಿಗೆ ಸ್ವಾಭಿಮಾನಿ ಬದುಕು ಅಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಕುಂಬಾರರ ಮಹಾ ಸಮ್ಮೇಳನ
  • ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು
  • ಶಿಕ್ಷಣವಿಲ್ಲದಿದ್ದರೆ ಮನುಷ್ಯರಾಗಿ, ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿಲ್ಲ.
ಮೈಸೂರು: ದೇಶದಲ್ಲಿ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ಜಿಲ್ಲಾ ಕುಂಬಾರ ಸಂಘದ ವತಿಯಿಂದ ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರೂ ವಿದ್ಯಾವಂತರಾಗಲೇಬೇಕು. 
ವಿದ್ಯೆ ಯಾರ ಸ್ವತ್ತೂ ಅಲ್ಲ. ಪಟ್ಟಭದ್ರ ಹಿತಾಸಕ್ತ ಶಕ್ತಿಗಳು ವಿದ್ಯೆ ಒಂದು ವರ್ಗಕ್ಕೆ ಮಾತ್ರ ಸೀಮಿತ ಎನ್ನುವ ಭಾವನೆ ಬಿತ್ತಿವೆ. ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು. ಕುಂಬಾರ ಸಮುದಾಯದಲ್ಲೂ ವೈದ್ಯರು, ಇಂಜಿನಿಯರ್, ಪ್ರೊಫೆಸರ್‌ಗಳಾಗಬೇಕು ಎಂದರು. 
ಅಂಬೇಡ್ಕರ್ ಅವರು ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಸಮಾನ ಅವಕಾಶಗಳು ದೊರಕಿತು. ಸ್ವಾತಂತ್ರ್ಯ ಬಂದ ನಂತರ ನಮ್ಮಲ್ಲಿ ಅನೇಕರು ವಿದ್ಯಾವಂತರಾಗಲು ಸಾಧ್ಯವಾಯಿತು. ಶಿಕ್ಷಣದ ಮಹತ್ವವನ್ನು ಮನಗಂಡು ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದರು. ಶಿಕ್ಷಣವಿಲ್ಲದಿದ್ದರೆ ಮನುಷ್ಯರಾಗಿ, ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು ಎಂದರು.
ಕುಂಬಾರ ಸಮುದಾಯದವರು ಅತ್ಯಂತ ಹಿಂದುಳಿದ ಮತ್ತು ಕಡಿಮೆ ಜನಸಂಖ್ಯೆಯಿರುವ ಸಮುದಾಯವಾಗಿದೆ. ಕಾಯಕ ಯೋಗಿಗಳಾಗಿರುವ ಕುಂಬಾರ ಸಮಾಜದವರು ಮಣ್ಣಿನ ಕಲಾಕೃತಿ ನಿರ್ಮಿಸುವ ಕಲೆಯ ಪರಿಣತಿ ವಿಶೇಷವಾಗಿದೆ. ಜ್ಞಾನದ ಬೆಳಕು ನೀಡಿದ ಕವಿ ಸರ್ವಜ್ಞರು, ಈ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯ ಎಂದರು.
12ನೇ ಶತಮಾನದಲ್ಲಿ ಬಸವಣ್ಣ ಕಾಯಕ ಮತ್ತು ದಾಸೋಹಗಳನ್ನು ಸಮಾಜಕ್ಕೆ ನೀಡಿದರು. ಚತುರ್ವರ್ಣ ವ್ಯವಸ್ಥೆ ಹಿಂದಿನಿಂದಲೂ ಬಂದಿರುವ ವ್ಯವಸ್ಥೆ. ಆರ್ಥಿಕವಾಗಿ ಹಿಂದುಳಿದ ಶೂದ್ರ ವರ್ಗದವರು ಜನಸಂಖ್ಯೆಯ ಸುಮಾರು ಶೇ.80ರಷ್ಟಿದ್ದು, ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಎಂದರು.
ಜಾತಿ ವ್ಯವಸ್ಥೆಯನ್ನು ತಂದು ಜನರ ದಾರಿ ತಪ್ಪಿಸಲಾಯಿತು. ಬೇಡರ ಜಾತಿಗೆ ಸೇರಿದ ವಾಲ್ಮೀಕಿ ರಾಮಾಯಣ ಬರೆದರು. 
ಬೆಸ್ತರ ಜಾತಿಗೆ ಸೇರಿದ ವ್ಯಾಸ ಮಹರ್ಷಿಗಳು ಮಹಾಭಾರತ ಬರೆದರು. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ರತ್ನಪ್ಪ ಭರಮಪ್ಪ ಕುಂಬಾರ ಸಮುದಾಯದ ಧೀಮಂತ ನಾಯಕರಾಗಿದ್ದರು. ನಾನು ಶಿಕ್ಷಣ ಪಡೆದಿದ್ದರಿಂದಲೇ ಮುಖ್ಯಮಂತ್ರಿಯಾಗಿ ನಿಮ್ಮೆದುರಿರಲು ಸಾಧ್ಯವಾಗಿದೆ ಎಂದರು.
 ಮಹಾನ್ ಜ್ಞಾನಿಯಾಗಿದ್ದ ನಾರಾಯಣಗುರುಗಳು ಒಂದೇ ಧರ್ಮ, ಒಂದೇ ಜಾತಿ ಎಂದು ಪ್ರತಿಪಾದಿಸಿದರು. ಅಸ್ಪಶ್ಯತೆಯಿಂದ ದೇಗುಲಗಳಿಗೆ ಪ್ರವೇಶ ನಿರ್ಬಂಧಿಸುತ್ತಿದ್ದ ಕಾಲದಲ್ಲಿ ನಿಮ್ಮದೇ ದೇವಾಲಯಗಳನ್ನು ನಿರ್ಮಿಸಿಕೊಳ್ಳಿ ಎಂದು ಜನರಿಗೆ ಕರೆ ನೀಡಿದ್ದರು ಎಂದರು.
ಕುಂಬಾರ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಮುದಾಯದವರಿಗೆ ಬಿಡಿಎ ನಿವೇಶನ ಪಡೆಯಲು ಸೂಕ್ತ ಅನುದಾನ ನೀಡುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಕುಂಬಾರ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ನೀಡಲಾಗುವುದು. ಕುಂಬಾರ ಸಮಾಜದ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಶ್ರೀಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ, ವಿಜಯಪುರದ ತೆಲಸಂಗದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಚಿತ್ರದುರ್ಗದ ಕುಂಬಾರ ಗುಂಡಯ್ಯ ಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 
 ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್, ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net