ಅಭಿಮನ್ಯು ಬಳಿಕ ಮಹೇಂದ್ರನಿಗೆ ಸಿಗುತ್ತಾ ಚಾನ್ಸ್?

ಮಹೇಂದ್ರ
ಮಹೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ದಸರೆಯಲ್ಲಿ ಐದನೇ ಬಾರಿಗೆ ಭಾಗಿಯಾಗಲು ಸಿದ್ಧ
  • ತಾಲೀಮಿನಲ್ಲಿ ಸಾಮರ್ಥ್ಯ ತೋರುವ ಆನೆ ಆಯ್ಕೆ

ಅವಿನಾಶ್ ಜೈನಹಳ್ಳಿ ಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಮೀಪಿಸಿದ್ದು, ಈ ಬಾರಿ ದಸರಾ ಗಜಪಡೆಯ ಕಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ, 6 ಬಾರಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿರುವ ಗಜಪಡೆಯ ಮಾಜಿ ಕ್ಯಾಪ್ಟನ್ ಅಭಿಮನ್ಯು ನಿವೃತ್ತಿಯ ಬಳಿಕ ಅಂಬಾರಿ ಹೊರುವ ಮುಂದಿನ ಕ್ಯಾಪ್ಟನ್ ಯಾರು? ಎಂಬ ಪ್ರಶ್ನೆ ಇದೆ.
ಅಭಿಮನ್ಯುವಿನ ಸ್ಥಾನ ತುಂಬಲು ಅರಣ್ಯ ಇಲಾಖೆ ಹುಡುಕಾಟ ನಡೆಸುತ್ತಿದ್ದು, ಧನಂಜಯ, ಮಹೇಂದ್ರ, ಪ್ರಶಾಂತ, ಏಕಲವ್ಯ ಹಾಗೂ ಸುಗ್ರೀವ ಆನೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಈ ಪೈಕಿ ಮಹೇಂದ್ರ ಪ್ರಮುಖ ಆಕರ್ಷಣೆ. ಐದನೇ ಬಾರಿಗೆ ಭಾಗಿಯಾಗಲು ಸಿದ್ಧನಾಗಿರುವ 42 ವರ್ಷದ ಮಹೇಂದ್ರ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಅರ್ಹತೆ ಹೊಂದಿದ್ದಾನೆ. ಸದ್ಯ 2.75 ಮೀ. ಎತ್ತರ, 3.25 ಮೀ.ಉದ್ದ ಮತ್ತು 4,764 ಕೆ.ಜಿ. ತೂಕವಿರುವ ಈ ಆನೆಯ ದಂತ, ದೇಹ ಸಂರಚನೆ, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ. ಮುಖ್ಯವಾಗಿ ಅರಣ್ಯ ಇಲಾಖೆ ವತಿಯಿಂದ ದಸರಾ ಗಜಪಡೆ ಆಯ್ಕೆಗಾಗಿ ಮಾಡಿದ್ದ ಸಾಮರ್ಥ್ಯ ಮತ್ತು ಆರೋಗ್ಯ ಪರೀಕ್ಷೆಯಲ್ಲಿ ಮಹೇಂದ್ರ 100 ಅಂಕ ಪಡೆದು ತನ್ನ ಸಾಮರ್ಥ್ಯದ ಬಗ್ಗೆ ನಂಬಿಕೆ ಹುಟ್ಟಿಸಿದ್ದಾನೆ. ಉಳಿದ ಯಾವುದೇ ಆನೆ 100 ಅಂಕ ಪಡೆದಿಲ್ಲ.

ಶ್ರೀರಂಗಪಟ್ಟಣದಲ್ಲಿ ಭಾಗಿಯಾದ ಅನುಭವ

ಮೈಸೂರು ದಸರಾ ಮಾತ್ರವಲ್ಲ, ಶ್ರೀರಂಗಪಟ್ಟಣ ದಸರೆಯಲ್ಲೂ ಮಹೇಂದ್ರ ಸಾಮರ್ಥ್ಯ ಪ್ರದರ್ಶಿಸಿದ್ದಾನೆ. 2023ರಿಂದ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗಿಯಾಗುತ್ತಿರುವ ಮಹೇಂದ್ರ, ಅಲ್ಲಿ ಯಾವುದೇ ಸಮಸ್ಯೆ ಆಗದಂತೆ ಯಶಸ್ವಿಯಾಗಿ ನಿರ್ವಹಿಸಿ ಅಂಬಾರಿ ಹಿರಲು ನಾನು ಸಿದ್ಧ ಎಂಬ ಸಂದೇಶ ರವಾನಿದ್ದಾನೆ.

ತಾಲೀಮಿನಲ್ಲಿ ದೈಹಿಕ ಸಾಮರ್ಥ್ಯ ಸಾಬೀತು:

ಮಹೇಂದ್ರ 2022ರಲ್ಲಿ ಮೊದಲ ಬಾರಿಗೆ ಮೈಸೂರು ದಸರಾ ಗಜಪಡೆಗೆ ಸೇರ್ಪಡೆಯಾದ. ಮೊದಲ ವರ್ಷದಿಂದಲೇ ಜಂಬೂಸವಾರಿ ಮಾರ್ಗದಲ್ಲಿ ಮರದ ಅಂಬಾರಿ ಹಾಗೂ ಭಾರ ಹೊತ್ತು ತಾಲೀಮು ನಡೆಸಿ ಅಧಿಕಾರಿಗಳ ಗಮನ ಸೆಳೆದಿದ್ದ. ತಾಳ್ಮೆ, ಸಾಮರ್ಥ್ಯ 2025ರಲ್ಲಿ ಸಾಕ್ಷಿಯಾಗಿದೆ. ಮರದ ಅಂಬಾರಿ ಹಾಗೂ ಮರಳು ಮೂಟೆ ಸೇರಿದಂತೆ ಒಟ್ಟು 750 ಕೆ.ಜಿ.ಭಾರ ಹೊತ್ತು ಜಂಬೂಸವಾರಿ ಮಾರ್ಗದಲ್ಲಿ ಸಾಗಿದ್ದ. ಸುಮಾರು ಐದು ಕಿಲೋಮೀಟರ್ ದೂರವನ್ನು ಯಾವುದೇ ಅಳುಕಿಲ್ಲದೆ ಕ್ರಮಿಸಿದ ಮಹೇಂದ್ರ, ತನ್ನ ದೈಹಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ.
ಅನುಭವ, ಆರೋಗ್ಯ, ಭಾರ ಹೊರುವ ಸಾಮರ್ಥ್ಯ, ಸ್ವಭಾವ, ತಾಲೀಮಿನಲ್ಲಿನ ಶಿಸ್ತು ಹಾಗೂ ಜನಸಂದಣಿಯ ನಡುವೆ ಶಾಂತವಾಗಿ ಸಾಗುವ ಸಾಮರ್ಥ್ಯ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ. ಆದರೆ ಈ ಪೈಪೋಟಿಯಲ್ಲಿ ಮಹೇಂದ್ರನತ್ತ ವಿಶೇಷ ನಿರೀಕ್ಷೆ ಮೂಡಿದೆ.
ಆದರೆ, ಪ್ರಮುಖ ಐದು ಆನೆಗಳು ಈ ವರ್ಷದ ತಾಲೀಮಿನಲ್ಲಿ ತೋರುವ ಸಾಮರ್ಥ್ಯ ಹಾಗೂ ಸ್ವಭಾವದ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಜಂಬೂಸವಾರಿ ಮೆರವಣಿಗೆಗೆ ಒಂದು ವಾರ ಬಾಕಿ ಇರುವಾಗ ಚಿನ್ನದ ಅಂಬಾರಿ ಹೊರುವ ಆನೆಯ ಹೆಸರನ್ನು ಅಧಿಕೃತವಾಗಿ ಘೋಷಿಸಲು ನಿರ್ಧರಿಸಿದ್ದಾರೆ.

ಪುಂಡನಾಗಿದ್ದ ಮಹೇಂದ್ರ:

‘ಮಹೇಂದ್ರ’ ಒಂದು ಕಾಲದಲ್ಲಿ ಪುಂಡನಾಗಿದ್ದ. ತೋಟ ಕಂಡರೆ ನುಗ್ಗುತ್ತಿದ್ದ. ಸಾಮಾನ್ಯವಾಗಿ ಮೊದಲ ಸಲ ನಗರಕ್ಕೆ ಬರುವ ಸಾಕಾನೆಗಳು ವಾಹನಗಳ ಸದ್ದು, ಜನರ ಗದ್ದಲ ಕಂಡರೆ ತುಸು ಹೆದರುತ್ತವೆ. ಆದರೆ, ಮೊದಲ ಬಾರಿಗೆ ಬಂದಿದ್ದಾಗಲೇ ಮಹೇಂದ್ರ ವಾಹನಗಳ ಸದ್ದಿಗೆ ಬೆದರಲಿಲ್ಲ, ಜನರನ್ನು ಕಂಡು ಘೀಳಿಡಲೂ ಇಲ್ಲ.

ರಾಮನಗರದ ತೋಟದಲ್ಲಿ ಸಿಕ್ಕಿದ್ದ:

2018ರಲ್ಲಿ ರಾಮನಗರದ ತೋಟವೊಂದರಲ್ಲಿ ಆನೆಯೊಂದು ಬೀಡುಬಿಟ್ಟಿತ್ತು. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಅದನ್ನು ಸೆರೆ ಹಿಡಿದು ನಾಗರಹೊಳೆಯ ಬಳ್ಳೆ ಶಿಬಿರಕ್ಕೆ ತಂದು ‘ಮಹೇಂದ್ರ’ ಎಂಬ ಹೆಸರಿಡಲಾಯಿತು. ಮೊದಲಿಗೆ ವಿನೋದ್‌ರಾಜ್ ಎಂಬುವರು ಈ ಆನೆಗೆ ತರಬೇತಿ ನೀಡಲು ಆರಂಭಿಸಿದರು. ಮೆದು ಸ್ವಭಾವದ ಮಹೇಂದ್ರ ಕೆಲವೇ ದಿನಗಳಲ್ಲಿ ಪಳಗಿದ. ಸದ್ಯ ಮಹೇಂದ್ರನನ್ನು ರಾಜಣ್ಣ ಎಂಬ ಮಾವುತ ನೋಡಿಕೊಳ್ಳುತ್ತಿದ್ದಾರೆ.
ಹುಲಿ ಸೆರೆ ಕಾರ್ಯದಲ್ಲೂ ಇವನನ್ನು ಬಳಸಿಕೊಳ್ಳಲಾಗುತ್ತಿದೆ. ನಾಗರಹೊಳೆ ಬಳ್ಳೆ ಕ್ಯಾಂಪಿನ ನೆಚ್ಚಿನ ಆನೆಗಳಲ್ಲಿ ಮಹೇಂದ್ರ ಕೂಡ ಒಬ್ಬ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
"

ಮಹೇಂದ್ರ, ಧನಂಜಯ, ಪ್ರಶಾಂತ, ಸುಗ್ರೀವ ಹಾಗೂ ಏಕಲವ್ಯ ಆನೆಗಳು ಚಿನ್ನದ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಈ ಎಲ್ಲ ಆನೆಗಳಿಗೆ ಹಂತ ಹಂತವಾಗಿ ಭಾರ ಹೊರುವ ತಾಲೀಮು ನಡೆಸಲಾಗುವುದು. ತಾಲೀಮಿನಲ್ಲಿ ಶಾಂತ ರೀತಿಯಲ್ಲಿ ವರ್ತಿಸುವ ಜತೆಗೆ ಸಾಮರ್ಥ್ಯ ಸಾಬೀತು ಪಡಿಸುವ ಆನೆಯನ್ನು ಆಯ್ಕೆ ಮಾಡಲಾಗುವುದು. ಜಂಬೂಸವಾರಿ ಮೆರವಣಿಗೆಗೆ ಒಂದು ವಾರ ಬಾಕಿ ಇರುವಾಗ ಚಿನ್ನದ ಅಂಬಾರಿ ಹೊರುವ ಆನೆಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು.

— ಡಾ.ಎಸ್.ಎಸ್.ರವಿಶಂಕರ್, ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net